ಭಕ್ತರ ಆಕ್ರೋಶಕ್ಕೆ ಮಣಿದ ಆಡಳಿತ ಮಂಡಳಿ: ಅ.28ರಿಂದಲೇ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭ!

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯ, ಅ.27: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ವೇಳೆ ವೈಯಕ್ತಿಕ ಸಂಕಲ್ಪದ ಬದಲು ಸಾಮೂಹಿಕ ಸಂಕಲ್ಪ ಪದ್ಧತಿ ಜಾರಿಗೆ ತಂದಿದ್ದಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಹಿಂದಿನ ಪದ್ಧತಿಯನ್ನೇ ಮುಂದುವರಿಸಲು ದೇವಸ್ಥಾನದ ವ್ಯವಸ್ಥಾಪನ ಮಂಡಳಿ ನಿರ್ಧರಿಸಿದೆ. ಅದರಂತೆ ಅಕ್ಟೋಬರ್ 28ರಿಂದ ಪ್ರತ್ಯೇಕ ಸಂಕಲ್ಪ ಸೇವೆ ಪುನರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಕಾರಣಿಕ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರದಲ್ಲಿ ಉದ್ಭವಿಸುವ ವಿವಾದವೊಂಥು ಸುಖಾಂತ್ಯಗೊಂಡಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲವು ದಿನಗಳ ಹಿಂದೆ ಆಡಳಿತ ಮಂಡಳಿಯು ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದ ವೈಯಕ್ತಿಕ ಸಂಕಲ್ಪ ಸೇವೆಯನ್ನು ಸ್ಥಗಿತಗೊಳಿಸಿ. ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ನಿರ್ಧಾರಕ್ಕೆ ಭಕ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ತಮ್ಮ ಹರಕೆಗಳನ್ನು ಸಲ್ಲಿಸುವುದು ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ವಿಚಾರದಲ್ಲಿ ಭಕ್ತರಲ್ಲಿ ಗೊಂದಲವೂ ಉಂಟಾಗಿತ್ತು.

ದೇವಸ್ಥಾನದ ಮಾಜಿ ಸದಸ್ಯ ಪ್ರಸನ್ನ ದರ್ಬೆ ಅವರು ಈ ನಿರ್ಧಾರವನ್ನು ವಿರೋಧಿಸಿ, ಸಂಕಲ್ಪ ಸೇವೆಯ ಧಾರ್ಮಿಕ ಮಹತ್ವ ಹಾಗೂ ಕ್ಷೇತ್ರದ ಪಾರಂಪರಿಕ ಪೂಜಾ ಪದ್ಧತಿಯನ್ನು ಎತ್ತಿಹಿಡಿದಿದ್ದರು. ಹಿಂದಿನಿಂದ ನಡೆದುಕೊಂಡು ಬಂದಿರುವ ಕ್ಷೇತ್ರದ ದಿಟ್ಟಂಗೆ ವಿರುದ್ಧವಾಗಿ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳೊಂದಿಗೆ ಸಭೆ ನಡೆಸಿ ಪ್ರತಿಭಟನೆ ಕುರಿತು ಚರ್ಚಿಸುವ ಸಿದ್ಧತೆಯೂ ನಡೆದಿತ್ತು.

ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ?ಭಕ್ತರ ನಿರಂತರ ಆಗ್ರಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಚೇರಿಯಿಂದಲೂ ಈ ವಿಚಾರದ ಕುರಿತು ಮಾಹಿತಿ ಪಡೆದು, ಹಿಂದಿನ ಪದ್ಧತಿಯಂತೆ ಪೂಜಾ ಸೇವೆಗಳನ್ನು ಮುಂದುವರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದೀಗ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಹಿಂಪಡೆದು, ಅಕ್ಟೋಬ‌ರ್ 28ರಿಂದ ಹಿಂದಿನಂತೆಯೇ ಪ್ರತ್ಯೇಕ ಸಂಕಲ್ಪ ಸೇವೆ ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎನ್ನಲಾಗಿದೆ. ಈ ಮೂಲಕ ಆಶ್ಲೇಷ ಬಲಿ ಪೂಜೆಯ ಸಂಕಲ್ಪ ಪದ್ಧತಿ ವಿಚಾರವಾಗಿ ಭಕ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ.

[t4b-ticker]
error: Content is protected !!