ಹಬ್ಬಗಳ ಸಾಲು ಸಾಲು ಆಚರಣೆಗಳ ನಡುವೆಯೇ ಸಕ್ಕರೆ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಸಾರ್ವಜನಿಕರಿಗೆ ಕಹಿಯಾದ ಅನುಭವ ನೀಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಸಗಟು ಹಾಗೂ ಚಿಲ್ಲರೆ (ರಿಟೇಲ್) ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ 4 ರೂಪಾಯಿವರೆಗೆ ಹೆಚ್ಚಳವಾಗಿದೆ. ಹಬ್ಬದ ಋತುವಿನಲ್ಲಿ ಪೂರೈಕೆ ಕೊರತೆಯಾಗದಂತೆ ಕೇಂದ್ರ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾಗ್ಯೂ ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದಿಲ್ಲ.
ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಸದ್ಯ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಸಕ್ಕರೆಯ ಸರಾಸರಿ ಬೆಲೆ 55.40 ರೂಪಾಯಿ ತಲುಪಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 59.50 ರೂಪಾಯಿಗೆ ಮಾರಾಟವಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಭಾರಿ ಏರಿಕೆಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಸಕ್ಕರೆ ಬೆಲೆ ಕೆಜಿಗೆ 12 ರಿಂದ 13 ರೂಪಾಯಿವರೆಗೆ ಹೆಚ್ಚಳವಾಗಿದೆ. ಕಳೆದ ವರ್ಷ ರಿಟೇಲ್ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ 46.50 ರೂಪಾಯಿ ಹಾಗೂ ಸಗಟು ಮಾರುಕಟ್ಟೆಯಲ್ಲಿ 43.23 ರೂಪಾಯಿ ಇತ್ತು.
ದೇಶದ ಮಹಾನಗರಗಳ ಪೈಕಿ ಕೋಲ್ಕತ್ತದಲ್ಲಿ ಸಕ್ಕರೆ ಬೆಲೆ ಅತ್ಯಂತ ಗರಿಷ್ಠ ಮಟ್ಟ ತಲುಪಿದ್ದು, ನವೆಂಬರ್ 3 ರಂದು ಪ್ರತಿ ಕೆಜಿಗೆ 65 ರೂಪಾಯಿಗೆ ತಲುಪಿದೆ (ಕಳೆದ ವರ್ಷ 50 ರೂಪಾಯಿ ಇತ್ತು). ಇನ್ನು ದೆಹಲಿಯಲ್ಲಿ ಬೆಲೆ 64 ರೂಪಾಯಿ (ಕಳೆದ ವರ್ಷ 46 ರೂಪಾಯಿ) ಹಾಗೂ ಮುಂಬೈನಲ್ಲಿ 61 ರೂಪಾಯಿಗೆ (ಕಳೆದ ವರ್ಷ 45 ರೂಪಾಯಿ) ಏರಿಕೆಯಾಗಿದೆ.
ಸಕ್ಕರೆ ದರ ಹೆಚ್ಚಾಗಲು ಪ್ರಮುಖ ಕಾರಣಗಳು:ಉತ್ಪಾದನೆಯಲ್ಲಿ ಕುಸಿತ: 2025-26ನೇ ಸಾಲಿನಲ್ಲಿ ಸಕ್ಕರೆ ಉತ್ಪಾದನೆಯು ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
ಬೆಳೆ ಹಾನಿ ಮತ್ತು ಜಾಗತಿಕ ಅಭಾವ: ಮಳೆ ಅಭಾವ ಹಾಗೂ ಬೆಳೆ ಹಾನಿಯಿಂದಾಗಿ ಜಾಗತಿಕ ಮಟ್ಟದಲ್ಲೂ ಸಕ್ಕರೆ ಪೂರೈಕೆ ಕಡಿಮೆಯಾಗಿದೆ.
ಹಬ್ಬದ ಬೇಡಿಕೆ: ಹಬ್ಬಗಳ ಹಿನ್ನೆಲೆಯಲ್ಲಿ ಸ್ವೀಟ್ಸ್ ತಯಾರಿಕೆ ಹಾಗೂ ಗೃಹ ಬಳಕೆಗೆ ಸಕ್ಕರೆ ಬೇಡಿಕೆ ಹೆಚ್ಚಾಗಿರುವುದು ದರ ಏರಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

































