ಮಹದೇವಪುರ: ತಮ್ಮ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮಹದೇವಪುರ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎದುರೇ ಖಡಕ್ ಆಗಿ ತಿರುಗೇಟು ನೀಡಿದ ಘಟನೆ ನಡೆದಿದೆ.

ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಅಡ್ಡಿಪಡಿಸಲು ಯತ್ನಿಸಿದರು. ಇದರಿಂದ ಸಿಟ್ಟಿಗೆದ್ದ ಮಂಜುಳಾ ಅವರು, ಭಾಷಣ ನಿಲ್ಲಿಸಿ ವೇದಿಕೆಯಿಂದಲೇ ಗಟ್ಟಿ ಧ್ವನಿಯಲ್ಲಿ ತಿರುಗೇಟು ನೀಡಿದರು.



“ಹಲೋ, ನಮಗೂ ಕಾರ್ಯಕರ್ತರಿದ್ದಾರೆ… ನಾವು ಸಮಾವೇಶಗಳನ್ನು ಮಾಡ್ತೇವೆ… ನಾನು ಮಂಜುಳಾ ಅರವಿಂದ್ ಲಿಂಬಾವಳಿ… ನಾನು ಮಹದೇವಪುರದ MLA…”ಎಂದು ಹೇಳಿದ ಅವರು, “ನಮ್ಮ ಯಜಮಾನರು ಅರವಿಂದ್ ಲಿಂಬಾವಳಿ ಶಾಸಕರಾಗಿದ್ದಾಗ ಈ ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ. ನೀವು ಈಗ ಏನು ಮಾತನಾಡುತ್ತಿದ್ದೀರಿ? ಚುನಾವಣೆ ಬಂದಾಗ ಗೆದ್ದು ಬಂದು ತೋರಿಸಬೇಕು…” ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಹಿಗ್ಗಾಮುಗ್ಗ ಜಾಡಿಸಿದರು.


ಡಿ.ಕೆ. ಶಿವಕುಮಾರ್ ಅವರು ವೇದಿಕೆಯಲ್ಲೇ ಇದ್ದಾಗಲೇ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಬಿಜೆಪಿ ಕಾರ್ಯಕರ್ತರು ಮಂಜುಳಾ ಅವರ ದಿಟ್ಟ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಕಾರ್ಯಕರ್ತರು ಇದು ಉದ್ದೇಶಪೂರ್ವಕ ಗೊಂದಲ ಎಂದು ಆರೋಪಿಸಿದ್ದಾರೆ.











































