ಮೈಸೂರು: ತಮ್ಮನ್ನು ದತ್ತು ಪುತ್ರ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿರುವ ವಿಚಾರಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರ ಮಾಧ್ಯಮಗಳ ಮುಂದೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು – “ಹೌದು, ನಾನು ದತ್ತು ಪುತ್ರ ಎನ್ನುವುದು ವಾಸ್ತವ. ಅದನ್ನು ನಾನು ಮುಚ್ಚಿಟ್ಟಿಲ್ಲ. ಆದರೆ ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲರೂ ಪ್ರಜೆಗಳೇ. ಯಾರಿಗೂ ಇಲ್ಲಿ ವಿಶೇಷ ಸ್ಥಾನವಿಲ್ಲ.”ಎಂದು ಸ್ಪಷ್ಟಪಡಿಸಿದರು.

ವೈಯಕ್ತಿಕ ಟೀಕೆ ಬೇಡ, ವಿಚಾರದ ಮೇಲೆ ಚರ್ಚೆ ಇರಲಿ:ರಾಜಕೀಯದಲ್ಲಿ ವೈಯಕ್ತಿಕ ದಾಳಿಗಳಿಂದ ಯಾವುದೇ ಲಾಭವಿಲ್ಲ. ರಾಜ್ಯದ ಜನತೆ, ನಮ್ಮ ಕ್ಷೇತ್ರದ ಜನತೆ ರಾಜಕೀಯದಲ್ಲಿ ಸುಧಾರಣೆ ಬಯಸುತ್ತಿದ್ದಾರೆ. ನಾವೆಲ್ಲರೂ ವಿಚಾರ, ಜನರ ಸಮಸ್ಯೆ, ನೀತಿ, ನಿಯಮಗಳ ಆಧಾರದ ಮೇಲೆ ಚರ್ಚಿಸಬೇಕು ಎಂದು ಯದುವೀರ್ ಕರೆ ನೀಡಿದರು.


ಸೋನಿಯಾ ಪುಸ್ತಕದ ಬಗ್ಗೆ ಪ್ರತಿಕ್ರಿಯೆ:ಕಾಂಗ್ರೆಸ್ ನಾಯಕರು ತಾವು ಸಂಸದರಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,”ಸೋನಿಯಾ ಗಾಂಧಿಯವರ ಪುಸ್ತಕ ಅಥವಾ ಕಾಂಗ್ರೆಸ್ ಪತ್ರಿಕೆಗಳನ್ನು ಓದಿದರೆ ಅವರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಕ್ಷೇತ್ರದಲ್ಲಿ ಏನಾಗುತ್ತಿದೆ ಎಂದು ತಿಳಿಯಬೇಕಿದ್ದರೆ ನ್ಯೂಸ್ ನೋಡಬೇಕು” ಎಂದು ವ್ಯಂಗ್ಯವಾಡಿದರು.ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕದಲ್ಲಿ ಅರ್ಧ ಸತ್ಯಗಳಿವೆ. ಈ ಬಗ್ಗೆ ವಿಸ್ತಾರವಾದ ಚರ್ಚೆ ಆಗಬೇಕು. ನಾನು ಆ ಪುಸ್ತಕ ಓದಿಲ್ಲ, ಓದುವವರು ಓದಿ ತೀರ್ಮಾನ ಮಾಡಲಿ ಎಂದು ಹೇಳಿದರು.


ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಪಕ್ಷದ ಕಾರ್ಯಕರ್ತ. ಪಕ್ಷ ಸಂಘಟನೆ ಮಾಡುತ್ತೇನೆ, ಸಂಸದನಾಗಿ ಕೆಲಸ ಮಾಡುತ್ತೇನೆ. ಆದರೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಆ ಸ್ಥಾನಕ್ಕೆ ಅರ್ಹತೆ, ಅನುಭವ ಬೇಕು. 2027-28 ಮತ್ತು 2028-29ರ ಚುನಾವಣೆ ಗೆಲ್ಲುವುದೇ ನಮ್ಮ ಗುರಿ” ಎಂದು ಸ್ಪಷ್ಟಪಡಿಸಿದರು.


ಹಿನ್ನೆಲೆ:2024ರ ಲೋಕಸಭಾ ಚುನಾವಣೆ ಸಮಯದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಯದುವೀರ್ ರಾಜಮನೆತನದವರಲ್ಲ, ದತ್ತು ಪುತ್ರ ಎಂದು ಟೀಕಿಸಿದ್ದರು. ಈಗ ಮತ್ತೆ ಅದೇ ವಿಚಾರ ಮುನ್ನೆಲೆಗೆ ಬಂದಿದ್ದು, ಯದುವೀರ್ ಅದಕ್ಕೆ ನೇರವಾಗಿ ಉತ್ತರ ನೀಡಿದ್ದಾರೆ.










































