ತಿರುವನಂತಪುರಂ: ಕೇರಳದ ಎಲ್‌ಡಿಎಫ್ ಸರ್ಕಾರದಆರ್ಥಿಕತೆಯನ್ನು ಶ್ಲಾಘಿಸಿರುವ ತಮ್ಮ ಹೇಳಿಕೆಯಿಂದ ಒಳಗಿನಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಸಮಯದಲ್ಲಿ ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್, ಹೊಸ ಮತದಾರರನ್ನು ಆಕರ್ಷಿಸಲು ಪಕ್ಷವು ತನ್ನ ನೆಲೆಯನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಮತ್ತು “ಕೇರಳದ ಕಾಂಗ್ರೆಸ್‌ನಲ್ಲಿ ನಾಯಕನ ಅನುಪಸ್ಥಿತಿ”ಯನ್ನು ಎತ್ತಿ ತೋರಿಸಿದ್ದಾರೆ.
ತಿರುವನಂತಪುರಂ ಸಂಸದರಾಗಿ ನಾಲ್ಕು ಬಾರಿ ಆಯ್ಕೆಯಾಗಿರುವುದು ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಸ್ವತಂತ್ರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವರ ಹಕ್ಕನ್ನು ಜನರು ಬೆಂಬಲಿಸಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.ದಿ ಇಂಡಿಯನ್ ಎಕ್ಸ್ ಪ್ರೆಸ್ ಸಂದರ್ಶನದಲ್ಲಿ ಮಾತನಾಡಿದ ಅವರು, ತಾನು ಪಕ್ಷಕ್ಕೆ ಲಭ್ಯವಿದ್ದೇನೆ, ಆದರೆ ಕಾಂಗ್ರೆಸ್‌ಗೆ ತನ್ನ ಸೇವೆಗಳು ಅಗತ್ಯವಿಲ್ಲದಿದ್ದರೆ, ತನೆಗೆ “ಆಯ್ಕೆಗಳು ಇವೆ” ಎಂದರು.
2024 ರ ಲೋಕಸಭಾ ಚುನಾವಣೆಗಳಲ್ಲಿ ಗೆಲುವುಗಳ ನಂತರ ಕಾಂಗ್ರೆಸ್ ಸತತ ವಿಧಾನಸಭಾ ಚುನಾವಣೆಯ ಸೋಲುಗಳನ್ನು ಎದುರಿಸುತ್ತಿರುವಾಗ, ಪಕ್ಷವು ತನ್ನ ಬದ್ಧ ಮತದಾರರ ನೆಲೆಯನ್ನು ಮೀರಿ ಜನರನ್ನು ಸೆಳೆಯುವ ಅಗತ್ಯವಿದೆ ಎಂದು ತರೂರ್ ಹೇಳಿದರು. ಅವರಿಗೆ ವೈಯಕ್ತಿಕವಾಗಿ ದೊರೆತ ಬೆಂಬಲವು ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ತನ್ನ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸದಿದ್ದರೆ, ಮುಂದಿನ ವರ್ಷದ ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.“ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ, ಕಾಂಗ್ರೆಸ್ ತನ್ನ ಬದ್ಧತೆಯ ಮತಗಳ ನೆಲೆಯಿಂದ ಮಾತ್ರ ಗೆಲ್ಲಲು ಸಾಧ್ಯವಿಲ್ಲ. ಇದು ವಾಸ್ತವ. ರಾಷ್ಟ್ರಮಟ್ಟವನ್ನು ನೋಡಿದರೆ, ಕಾಂಗ್ರೆಸ್ ಮತಗಳು ಸುಮಾರು 19% ರಷ್ಟಿದ್ದವು. ಇಷ್ಟು ಸಾಕೆ? ನಾವು 26-27% ಹೆಚ್ಚುವರಿ ಪಡೆದರೆ ಮಾತ್ರ ನಾವು ಅಧಿಕಾರಕ್ಕೆ ಬರಬಹುದು. ಆದ್ದರಿಂದ, ಕಳೆದ ಎರಡು ಚುನಾವಣೆಗಳಲ್ಲಿ ನಮ್ಮನ್ನು ಬೆಂಬಲಿಸದವರ ಅಗತ್ಯವಿದೆ” ಎಂದರು.











































