ಮಂಗಳೂರು: ಪೊಲೀಸರು ಲಾವಣ್ಯ ಹತ್ಯೆ ಆರೋಪಿ ಚೇತನ್ ಬಂಧಿಸಲು ಮಹತ್ವದ ಪಾತ್ರ ವಹಿಸಿದ ಕಾರ್ಮಿಕ

Picture of Savistara

Savistara

Bureau Report

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜುಲೈ 16ರಂದು ನಡೆದ ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್‌ನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸ್ಥಳೀಯ ದಿನಗೂಲಿ ಕಾರ್ಮಿಕ ಗಿರೀಶ್ ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆ ಮಹತ್ವದ ಪಾತ್ರ ವಹಿಸಿದೆ. ಪೊಲೀಸರು ಅಧಿಕೃತವಾಗಿ ವಾಮಂಜೂರಿನ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಆರೋಪಿಯನ್ನು ಬಂಧಿಸುವ ಮುನ್ನವೇ ಗಿರೀಶ್ ತೋರಿದ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಎಡದಿಂದ ಬಲಕ್ಕೆ-ಮೃತ ಲಾವಣ್ಯ, ಕಾರ್ಮಿಕ ಗಿರೀಶ್, ಆರೋಪಿ ಚೇತನ್ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರ ಮಾಹಿತಿ ಪ್ರಕಾರ, ಹತ್ಯೆ ನಡೆಸಿದ ಬಳಿಕ ಚೇತನ್ ಮಂಗಳೂರಿನತ್ತ ಕಾರಿನಲ್ಲಿ ತೆರಳಿ ವಾಮಂಜೂರಿಗೆ ಬಂದಿದ್ದಾನೆ ಎನ್ನಲಾಗಿದೆ. ಪಚ್ಚನಾಡಿ ಪ್ರದೇಶದಲ್ಲಿ ರಾತ್ರಿ ವೇಳೆ ಆತನ ಆಲ್ಟೋ ಕಾರು ಸಂಚರಿಸುತ್ತಿರುವುದು ಕಂಡುಬಂದಿದ್ದು, ಆತ ಕಾರಿನಲ್ಲೇ ರಾತ್ರಿ ಕಳೆದಿರಬಹುದು ಎಂದು ಶಂಕಿಸಲಾಗಿದೆ.ಘಟನೆಯ ಕುರಿತು ಮಾತನಾಡಿದ ಗಿರೀಶ್, ತಾನು ಗುರುಪುರ, ಕೈಕಂಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೋಳಿ ಅಂಗಡಿಗಳ ತ್ಯಾಜ್ಯವನ್ನು ಪಿಕಪ್ ವಾಹನದಲ್ಲಿ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

“ಶುಕ್ರವಾರ ಬೆಳಗ್ಗೆ ಸುಮಾರು 8:30ಕ್ಕೆ ತ್ಯಾಜ್ಯ ಘಟಕದ ಸಮೀಪದ ಅಂಗಡಿಯ ಮುಂದೆ ಒಂದು ಕಾರು ಬಂದು ನಿಂತಿತು. ನಾನು ಅಂಗಡಿಯ ಹೊರಗಿದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಮೊಬೈಲ್ ನೋಡುತ್ತಿದ್ದೆ. ಕಾರಿನ ಚಾಲಕನತ್ತ ಗಮನ ಹರಿಸಿದಾಗ, ಲಾವಣ್ಯ ಹತ್ಯೆ ಪ್ರಕರಣದ ಸಂಬಂಧ ಮೊಬೈಲ್‌ನಲ್ಲಿ ಈಗಾಗಲೇ ನೋಡಿದ್ದ ಚೇತನ್‌ನ ಫೋಟೋಗೆ ಹೋಲಿಕೆಯಿರುವುದು ಕಂಡುಬಂತು. ತಕ್ಷಣ ಕಾರಿನ ಬಳಿ ಹೋಗಿ ಮಾತನಾಡಲು ಪ್ರಯತ್ನಿಸಿದೆ. ಆತ ಕಾರಿನ ಗಾಜನ್ನು ಸ್ವಲ್ಪ ಕೆಳಗಿಳಿಸಿದ. ‘ಏನು ಬೇಕು?’ ಎಂದು ಕೇಳಿದಾಗ, ‘ಬಿ.ಸಿ.ರೋಡ್‌ನಲ್ಲಿ ಯುವತಿಯನ್ನು ಕೊಲೆ ಮಾಡಿದವನು ನೀನೇನಾ?’ ಎಂದು ನೇರವಾಗಿ ಪ್ರಶ್ನಿಸಿದೆ. ಕೂಡಲೇ ಆತ ತೀವ್ರ ಆತಂಕಕ್ಕೆ ಒಳಗಾದಂತೆ ಕಂಡುಬಂತು” ಎಂದು ಗಿರೀಶ್ ವಿವರಿಸಿದ್ದಾರೆ.”ಆ ವ್ಯಕ್ತಿ ಚೇತನ್ ಎಂಬುದು ಖಚಿತವಾದ ಬಳಿಕ ಗಿರೀಶ್ ಆತನನ್ನು ಕಾರಿನಿಂದ ಹೊರಗೆಳೆಯಲು ಪ್ರಯತ್ನಿಸಿದರು. ಆರಂಭದಲ್ಲಿ ಚೇತನ್ ನಿರಾಕರಿಸಿದರೂ, ಬಳಿಕ ‘ಮುಖ ತೊಳೆಯಬೇಕು’ ಎಂದು ಹೇಳಿ ಕಾರಿನಿಂದ ಇಳಿದನು. ಆದರೆ ನನ್ನ ಮೇಲೆಯೇ ನಿಗಾ ಇಟ್ಟುಕೊಂಡಿದ್ದ ಆತ, ಮತ್ತೆ ಕಾರಿನೊಳಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ” ಎಂದರು.”ನಾನು ಕಾರಿನ ಕೀ ಕಸಿದುಕೊಳ್ಳಲು ಪ್ರಯತ್ನಿಸಿದಾಗ ಆತ ವಿರೋಧಿಸಿದ. ಕೆಲ ಹೊತ್ತು ನಡೆದ ಹೋರಾಟದ ಬಳಿಕ ಕೀಯನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದೆ. ಸ್ವಲ್ಪ ಸಮಯದ ಬಳಿಕ ಆತ ತನ್ನ ಬಳಿ ಇದ್ದ ಸಣ್ಣ ಬಾಟಲಿಯಲ್ಲಿದ್ದ ದ್ರವವನ್ನು ಕುಡಿದ” ಎಂದು ಹೇಳಿದರು.ಈ ವೇಳೆ ಗಿರೀಶ್ ಸ್ಥಳೀಯರ ಸಹಾಯ ಪಡೆದು ಆರೋಪಿಯನ್ನು ಅಲ್ಲೇ ತಡೆದು ನಿಲ್ಲಿಸಿದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳದಲ್ಲಿದ್ದ ಇತರರೂ ಪೊಲೀಸರಿಗೆ ಕರೆ ಮಾಡಿದರು. ಸುಮಾರು ಅರ್ಧ ಗಂಟೆಯೊಳಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಚೇತನ್‌ನನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕರೆದೊಯ್ದರು.”ಆರೋಪಿಯ ಕಾರಿನಲ್ಲಿ ಎರಡು ಚಾಕುಗಳು ಪತ್ತೆಯಾಗಿದ್ದವು. ಕಾರಿನ ಕೀ ಕಸಿದುಕೊಳ್ಳುವ ವೇಳೆ ಆತ ನನ್ನನ್ನು ತಳ್ಳಿ ಚಾಕು ತೆಗೆಯಲು ಯತ್ನಿಸಿದ. ಕೂಡಲೇ ನಾನು ಕಾಲಿನಿಂದ ಚಾಕುವನ್ನು ದೂರ ತಳ್ಳಿದೆ” ಎಂದು ಗಿರೀಶ್ ಹೇಳಿದ್ದಾರೆ.”ತಮ್ಮ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಪೊಲೀಸರು ಶ್ಲಾಘಿಸಿದ್ದಾರೆ. ನಿನ್ನ ಎಚ್ಚರಿಕೆಯಿಂದ ಆರೋಪಿಯನ್ನು ಸುಲಭವಾಗಿ ಬಂಧಿಸಲು ಸಾಧ್ಯವಾಯಿತು. ಕಳೆದ ರಾತ್ರಿಯಿಂದಲೇ ನಾವು ಆತನಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೆವು. ನಿನ್ನ ಧೈರ್ಯ ನಿಜಕ್ಕೂ ಶ್ಲಾಘನೀಯ” ಎಂದು ಪೊಲೀಸರು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.”ನನಗೆ ಸಾವಿನ ಭಯ ಇರಲಿಲ್ಲ. ಕೊಲೆ ಮಾಡಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂಬುದೇ ನನ್ನ ಒಂದೇ ಉದ್ದೇಶವಾಗಿತ್ತು. ಬಿ.ಸಿ.ರೋಡ್‌ನಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯವಾಗಿತ್ತು. ಅದರ ವಿಡಿಯೋವನ್ನು ಮೊಬೈಲ್‌ನಲ್ಲಿ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗಿತ್ತು” ಎಂದು ಗಿರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!