ಪುತ್ತೂರು: ‘ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಮಾತ್ರಕ್ಕೆ ಜನ ಮತ ನೀಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಪಕ್ಷದ ಮತ ಹೆಚ್ಚಿಸಿಕೊಳ್ಳಬೇಕಾದರೆ ನಾವು ಬಿಜೆಪಿಯವರಿಗೂ ಸಹಾಯ ಮಾಡಬೇಕು’ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ಮೂಲಕ ₹ 2 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಶೇಖಮಲೆ-ದೇರ್ಲ ರಸ್ತೆ ಭಾಗದ ಕಾಂಕ್ರಿಟೀಕರಣ ಕಾಮಗಾರಿಗೆ ಅವರು ಭಾನುವಾರ ಚಾಲನೆ ನೀಡಿ ಮಾತನಾಡಿದರು.’ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡುತ್ತೇನೆ. ತಳಮಟ್ಟದ ಜನತೆಯ ಕಷ್ಟ-ತೊಂದರೆಗಳಿಗೆ ಸ್ಪಂದನೆ ನೀಡುವ ಮೂಲಕ ಜನರ ಮನಸ್ಸು ಗೆಲ್ಲುವ ಕೆಸವನ್ನು ನೀವು ಮಾಡಬೇಕು’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.’ಕಳೆದ ಸಾಲಿನಲ್ಲಿ ಕೆಯ್ಯರು ಗ್ರಾಮಕ್ಕೆ ಒಟ್ಟು ₹ 4.40 ಕೋಟಿ ಅನುದಾನದ ಕಾಮಗಾರಿ ನೀಡಲಾಗಿದೆ. ಅನುದಾನ ತರಿಸಿ ನಿರಂತರವಾಗಿ ಅಭಿವೃದ್ಧಿ ಮಾಡುತ್ತೇನೆ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸುವ ಜತೆಗೆ ಅಕ್ರಮ ಸಕ್ರಮ, 94ಸಿ ಆಗದಿರುವವರಿಗೆ ಹಾಗೂ ಅನಾರೋಗ್ಯ ಸೇರಿದಂತೆ ಕಷ್ಟದಲ್ಲಿರುವವರಿಗೆ ಪಕ್ಷಾತೀತವಾಗಿ ಸ್ಪಂದಿಸುವ ಕಾರ್ಯವನ್ನು ಬೂತ್, ವಲಯದ ಅಧ್ಯಕ್ಷರು, ಕಾರ್ಯಕರ್ತರು ತಳಮಟ್ಟದಲ್ಲಿ ಮಾಡಬೇಕು’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತಿದೆ. ಅವುಗಳನ್ನು ಎದುರಿಸಲು ಸಿದ್ಧವಾಗುವ ರೀತಿಯಲ್ಲಿ ಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಕೆಯ್ಯರು ಗ್ರಾ.ಪಂ.ಸದಸ್ಯ ಬಟ್ಯಪ್ಪ ರೈ ದೇರ್ಲ ಪ್ರಸ್ತಾವಿಕವಾಗಿ ಮಾತನಾಡಿದರು.ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೆಯ್ಯರು ದುರ್ಗಾಪರಮೇಶ್ವರಿ- ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ ರೈ, ಮಾಜಿ ಅಧ್ಯಕ್ಷ ಚೆನ್ನಪ್ಪ ರೈ ದೇರ್ಲ, ಕಾಂಗ್ರೆಸ್ ವಲಯಾಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಪ್ರಧಾನ ಕಾರ್ಯದರ್ಶಿ ಹನೀಫ್ ಮಾಡಾವು, ಗ್ರಾ.ಪಂ.ಸದಸ್ಯ ಎ.ಕೆ.ಅಬ್ದುಲ್ ಖಾದರ್ ಮೇರ್ಲ, ಸ್ಥಳೀಯ ಮುಖಂಡರಾದ ಸಂತೋಷ್ ರೈ ಇಳಂತಾಜೆ, ದಾಮೋದರ ಪೂಜಾರಿ ಕೆಂಗುಡೇಲು, ಶಿವರಂಜನ್ ರೈ ದೇರ್ಲ, ಗೋಪಾಲಕೃಷ್ಣ ಭಟ್ ಭಾಗವಹಿಸಿದ್ದರು.













































