ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಅತಿಯಾದ ಉಷ್ಣತೆ ಮತ್ತು ಅತಿಯಾದ ತಾಪಮಾನ, ಬಿಸಿಲ ಝಳ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39ರಿಂದ 41 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇರಲಿದೆ.
ಮಂಗಳೂರು, ಫೆ.27: ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ನಾಲ್ಕುದಿನ ಅತಿಯಾದ ಉಷ್ಣತೆ ಮತ್ತು ಅತಿಯಾದ ತಾಪಮಾನ, ಬಿಸಿಲ ಝಳ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39ರಿಂದ 41 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇರಲಿದೆ.ಮುಂದಿನ ಎರಡು ದಿನ ತಾಪಮಾನ ಹೆಚ್ಚಲಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಜನರು ಬಿಸಿಲನ ಹೊಡೆತವನ್ನು ತಪ್ಪಿಸಿಕೊಳ್ಳುವುದು ಉತ್ತಮ ಎಂದು ಸೂಚನೆ ನೀಡಿದೆ. 37-38 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದರೂ, 40ರಿಂದ 50 ಡಿಗ್ರಿಯಷ್ಟು ಉಷ್ಣತೆ ಇರುವಂತೆ ಅನುಭವ ಆಗಲಿದೆ. ವಾತಾವರಣದಲ್ಲಿ ಆದ್ರ್ರತೆ ಹೆಚ್ಚಿರುವುದರಿಂದ ತೀವ್ರ ಉಷ್ಣತೆಯಂತೆ ಭಾಸವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಫೆ.27ರಿಂದ ಹಿಂದಿನ 24 ಗಂಟೆಯಲ್ಲಿ ಸುಳ್ಯದಲ್ಲಿ 40.4, ಉಪ್ಪಿನಂಗಡಿಯಲ್ಲಿ 39.6, ಪಾಣೆ ಮಂಗಳೂರಿನಲ್ಲಿ 39.4, ಕೊಕ್ಕಡದಲ್ಲಿ 40.4, ಬ್ರಹ್ಮಾವರದಲ್ಲಿ 39.1, ಕೋಟ 39.5, ವಂಡ್ರೆ 39.9 ಡಿಗ್ರಿ, ಅಜೆಕಾರು 39.5, ಕಾರವಾರದ ಸೇವಂತಿವಾಡದಲ್ಲಿ ಅತಿ ಹೆಚ್ಚು 41.1 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಭಟ್ಕಳದಲ್ಲಿ 40.4, ಅಂಕೋಲಾದ ಬೆಳ್ಳಿಕೆರೆಯಲ್ಲಿ 39.8, ಮಾವಳ್ಳಿ 39 ಡಿಗ್ರಿ ಉಷ್ಣತೆ ಕಾಣಿಸಿಕೊಂಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಎಂದಿಗಿಂತ 2-3 ಡಿಗ್ರಿ ಉಷ್ಣತೆ ಹೆಚ್ಚಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.













































