ಪ್ರತಿ ವರ್ಷ 14 ವರ್ಷದೊಳಗಿನ 1,533 ಮಕ್ಕಳಲ್ಲಿ ಕ್ಯಾನ್ಸರ್: ಸಚಿವ ಶರಣ್ ಪ್ರಕಾಶ್ ಪಾಟೀಲ್

Picture of Savistara

Savistara

Bureau Report

ಬೆಂಗಳೂರು: “ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಬೋನ್ ಮ್ಯಾರೋ ಆಸ್ಪಿರೇಟ್ ಆ್ಯಂಡ್ ಟ್ರಿಪೈನ್ ಬಯಾಪ್ಸಿ (ಬಿಎಂಎಟಿ) ಸಂಸ್ಥೆಗಳನ್ನು ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಗುವುದು” ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.ವಿಧಾನ ಪರಿಷತ್ತಿನಲ್ಲಿ ಸೋಮವಾರ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಪಾಟೀಲ್, “ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಈ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಉದ್ದೇಶವಿದೆ. ಪ್ರಾರಂಭಿಕ ಹಂತದಲ್ಲಿ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು” ಎಂದರು.”ಈಗಾಗಲೇ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಕಲಬುರಗಿಯಲ್ಲೂ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲೂ ಇದನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಸಚಿವರು ಉತ್ತರಿಸಿದರು.ಮಕ್ಕಳಲ್ಲಿ ಕ್ಯಾನ್ಸರ್‌ ಆತಂಕಕಾರಿ: “ಮಕ್ಕಳಲ್ಲಿ ಇತ್ತೀಚೆಗೆ ಕ್ಯಾನ್ಸರ್ ಕಂಡುಬರುತ್ತಿರುವುದು ಅತ್ಯಂತ ಆತಂಕಕಾರಿ. ಇದರ ಬಗ್ಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ಸಾರ್ವಜನಿಕರಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲೂ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಆದರೂ ಕ್ಯಾನ್ಸರ್ ಹೆಚ್ಚಳವಾಗುತ್ತಿರುವುದು ಆತಂಕ ಸೃಷ್ಟಿಸಿದೆ” ಎಂದು ಕಳವಳ ವ್ಯಕ್ತಪಡಿಸಿದರು.”ಪ್ರತಿ ವರ್ಷ 14 ವರ್ಷದೊಳಗಿನ 876 ಗಂಡು ಮಕ್ಕಳು, 657 ಹೆಣ್ಣು ಮಕ್ಕಳು ಸೇರಿ 1,533 ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ. ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲೇ ಅರಿವು ಮೂಡಿಸುವ ಕೆಲಸವಾಗಬೇಕು. ಕೇವಲ ಸರ್ಕಾರದಿಂದ ಮಾತ್ರವಲ್ಲದೆ ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸುವ ಮೂಲಕ ತಡೆಗಟ್ಟಬಹುದೆಂದು” ಸಚಿವ ಶರಣಪ್ರಕಾಶ್ ಪಾಟೀಲ್ ಸಲಹೆ ನೀಡಿದರು.ರಾಜ್ಯಾದ್ಯಂತ ದಾಖಲೆಯ 185 ಬಗರ್ ಹುಕುಂ ಸಭೆ: “ಬಡ ಹಾಗೂ ಭೂ ರಹಿತ ರೈತರಿಗೆ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಭೂ ಮಂಜೂರು ಮಾಡಲು ರಾಜ್ಯಾದ್ಯಂತ ಈವರೆಗೆ ಒಟ್ಟು 185 ಸಭೆಗಳನ್ನು ನಡೆಸಲಾಗಿದ್ದು, ಅರ್ಜಿ ವಿಲೇವಾರಿಯನ್ನೂ ತ್ವರಿತಗೊಳಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲೇ ಇದೊಂದು ಹೊಸ ದಾಖಲೆ” ಎಂದು ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ, ಅತೀ ಹೆಚ್ಚು ಬಗರ್ ಹುಕುಂ ಸಮಿತಿಗಳನ್ನು ರಚಿಸಿದ್ದು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ಅಲ್ಲದೆ, ಅರ್ಜಿ ವಿಲೇವಾರಿಗೊಳಿಸಿ ಅರ್ಹ ರೈತರಿಗೆ ಭೂ ಮಂಜೂರುಗೊಳಿಸುವ ಪ್ರಕ್ರಿಯೆಗೂ ಸಾಕಷ್ಟು ವೇಗ ತುಂಬಲಾಗುತ್ತಿದೆ. ಸ್ವತಃ ನಾನೇ ನೇರವಾಗಿ ಪರಿಶೀಲಿಸಿ ವಿಲೇವಾರಿ ಕೆಲಸಗಳನ್ನು ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಸಂಬಂಧ ಅಧಿಕಾರಿಗಳಿಗೆ ಗಡುವು ನೀಡಿದ್ದು ನಿಜ, ಸರ್ಕಾರವೇ ಅದನ್ನು ಬೆನ್ನಟ್ಟಿರುವುದೂ ನಿಜ” ಎಂದು ತಿಳಿಸಿದರು.”ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸಮಿತಿ ರಚನೆ ಆಗಿಲ್ಲ, ಆಗಬೇಕು ಎಂದು ಒಪ್ಪಿಕೊಳ್ಳುತ್ತೇನೆ. ಅಲ್ಲದೆ, ಆದಷ್ಟು ಶೀಘ್ರದಲ್ಲಿ ಅವರ ಕ್ಷೇತ್ರದಲ್ಲಿ ಸಮಿತಿ ರಚನೆಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳಲು ನಾನು ಬದ್ಧನಾಗಿದ್ದೇನೆ. ಆದರೆ, ರಾಜ್ಯಾದ್ಯಂತ ಎಲ್ಲೂ ಬಗರ್ ಹುಕುಂ ಸಮಿತಿಯೇ ರಚನೆಯಾಗಿಲ್ಲ ಎಂದು ಆಧಾರವಿಲ್ಲದೆ ಹೇಳುವುದು ಸರಿಯಲ್ಲ. ರಾಜ್ಯಾದ್ಯಂತ ದಾಖಲೆಯ 185 ಸಮಿತಿ ರಚನೆ ಆಗಿದೆ. ಆರ್​​ಟಿಐನಲ್ಲಿ ಪ್ರಶ್ನೆ ಕೇಳಿದರೂ ಸೂಕ್ತ ಮಾಹಿತಿ ನೀಡುತ್ತೇನೆ” ಎಂದು ಸವಾಲು ಹಾಕಿದರು.ಅರ್ಜಿ ವಿಲೇವಾರಿಯಾಗದೆ ರೈತರಿಗೆ ತೊಂದರೆ ಸಲ್ಲ: “ಬಗರ್ ಹುಕುಂ ಯೋಜನೆಯ ಅಡಿ ಸಲ್ಲಿಸಲಾಗಿರುವ ನಮೂನೆ 53 ಹಾಗೂ ನಮೂನೆ 57 ಅರ್ಜಿ ವಿಲೇವಾರಿಯಾಗದೆ ರೈತರಿಗೆ ಅಧಿಕಾರಿಗಳು ತೊಂದರೆ ನೀಡುವುದು ಅಥವಾ ಒಕ್ಕಲೆಬ್ಬಿಸುವಂತಿಲ್ಲ. ರಾಜ್ಯದಲ್ಲಿ ಇಂತಹ ಯಾವುದೇ ಪ್ರಕರಣ ಕಂಡುಬಂದರೆ ನನ್ನ ಗಮನಕ್ಕೆ ತನ್ನಿ” ಎಂದು ಸಚಿವರು ಸದನಕ್ಕೆ ತಿಳಿಸಿದರು.

[t4b-ticker]
error: Content is protected !!