ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ: ಜೆಡಿಯು ನಲ್ಲಿ ಭಿನ್ನಮತ ಸ್ಫೋಟ, ನಿತೀಶ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ನಾಯಕರು! ರಾಜೀನಾಮೆ

Picture of Savistara

Savistara

Bureau Report

1995ರ ವಕ್ಸ್ ಕಾಯ್ದೆಗೆ ತರಲಾದ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಜೆಡಿಯು ಪಕ್ಷವು ಬೆಂಬಲ ಸೂಚಿಸಿರುವುದು, ಪಕ್ಷದ ಆಂತರಿಕ ವಲಯದಲ್ಲಿ, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಲುವನ್ನು ಪ್ರತಿಭಟಿಸಿ, ಹಲವು ಮುಖಂಡರು ತಮ್ಮ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಾಟ್ನಾ: 1995ರ ವಕ್ಸ್ ಕಾಯ್ದೆಗೆ ತರಲಾದ ತಿದ್ದುಪಡಿಮಸೂದೆಗೆ ಸಂಸತ್ತಿನಲ್ಲಿ ಜೆಡಿಯು ಪಕ್ಷವು ಬೆಂಬಲ ಸೂಚಿಸಿರುವುದು, ಪಕ್ಷದ ಆಂತರಿಕ ವಲಯದಲ್ಲಿ. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಲುವನ್ನು ಪ್ರತಿಭಟಿಸಿ, ಹಲವು ಮುಖಂಡರು ತಮ್ಮ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಜೆಡಿಯು ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ, ಪಕ್ಷದ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಮೊಹಮ್ಮದ್ ಅಶ್ರಫ್ ಅನ್ಸಾರಿ ಮತ್ತು ಅಲ್ಪಸಂಖ್ಯಾತ ಘಟಕದ ಪ್ರದೇಶ ಕಾರ್ಯದರ್ಶಿ ಶಹನವಾಜ್ ಮಲ್ಲಿಕ್ ಅವರು ರಾಜೀನಾಮೆ ನೀಡಿದ ಪ್ರಮುಖರಲ್ಲಿ ಸೇರಿದ್ದಾರೆ.

ಪಕ್ಷದ ಈ ಕ್ರಮವು ಜಾತ್ಯತೀತ ತತ್ವಗಳಿಗೆ ಅನುಗುಣವಾಗಿಲ್ಲ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾ‌ರ್ ಅವರ ಜಾತ್ಯತೀತ ನಿಲುವಿನ ಬಗೆಗಿನ ತಮ್ಮ ನಂಬಿಕೆಗೆ ಧಕ್ಕೆಯುಂಟಾಗಿದೆ ಎಂದು ಈ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಮೊಹಮ್ಮದ್ ಖಾಸಿಂ ಅನ್ಸಾರಿ ಅವರು, “ವಕ್ಸ್ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಪಕ್ಷ ಬೆಂಬಲ ನೀಡಿದ್ದು ತೀವ್ರ ನಿರಾಶೆ ತಂದಿದೆ. ಭಾರತದ ಮುಸ್ಲಿಮರು ನಿಮ್ಮನ್ನು ಜಾತ್ಯತೀತ ಸಿದ್ಧಾಂತದ ಪ್ರಮುಖ ಪ್ರತಿಪಾದಕರೆಂದು ಪರಿಗಣಿಸಿದ್ದರು, ಆದರೆ ಆ ನಂಬಿಕೆ ಈಗ ಉಳಿದಿಲ್ಲ.” ಎಂದು ತಿಳಿಸಿದ್ದಾರೆ.

ಅದೇ ರೀತಿ, ಮೊಹಮ್ಮದ್ ಅಶ್ರಫ್ ಅನ್ಸಾರಿ ಅವರು, “ಲೋಕಸಭೆಯಲ್ಲಿ ಜೆಡಿಯು ನಾಯಕ ಲಲನ್ ಸಿಂಗ್ ಅವರು ಮಸೂದೆಯನ್ನು ಬೆಂಬಲಿಸಿದ ರೀತಿ ನೋವುಂಟುಮಾಡಿದೆ. ಈ ಮಸೂದೆಯು ಭಾರತೀಯ ಮುಸ್ಲಿಮರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಈ ವಿವಾದದ ನಡುವೆ, ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿ ಮಾತನಾಡಿದ್ದ ಕೇಂದ್ರ ಸಚಿವ ಹಾಗೂ ಜೆಡಿಯು ನಾಯಕ ರಾಜೀವ್ ರಂಜನ್ (ಲಲನ್) ಸಿಂಗ್ ಅವರು, “ಈ ಕಾನೂನು ವಕ್ಸ್ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಮುಸ್ಲಿಂ ಸಮುದಾಯದ ಎಲ್ಲ ವರ್ಗಗಳ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿದೆ,” ಎಂದು ಪ್ರತಿಪಾದಿಸಿದ್ದರು.ಈ ರಾಜೀನಾಮೆ ಸರಣಿಯು ಬಿಹಾರದಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಯು ಪಕ್ಷಕ್ಕೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಜಕೀಯವಾಗಿ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.

[t4b-ticker]
error: Content is protected !!