ಪುತ್ತೂರು: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಮೂಲಕ ಉಳುಮೆ, ನಾಟಿ ಹಾಗೂ ಕೊಯ್ಲು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡುವ ‘ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ’ಯ ಪ್ರಾಯೋಗಿಕ ಅನುಷ್ಠಾನಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕುಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.ಎಷ್ಟು ಸಹಾಯಧನ ಸಿಗಲಿದೆ? ನಿಯಮಗಳೇನು?ಯೋಜನೆಯಡಿ ಕನಿಷ್ಠ ಅರ್ಧ ಎಕರೆಯಿಂದ ಗರಿಷ್ಠ ಮೂರು ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿ ಚಟುವಟಿಕೆಗಳಿಗೆ ವರ್ಷಕ್ಕೆ ಗರಿಷ್ಠ ₹4,500 ವರೆಗೆ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.


ಕೃಷಿ ಯಂತ್ರೋಪಕರಣಗಳ ಸೇವೆಯ ಸರಾಸರಿ ವೆಚ್ಚವನ್ನು ಪ್ರತಿ ಎಕರೆಗೆ ₹1,000 ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಶೇ. 50ರಷ್ಟು ಅಂದರೆ ಪ್ರತಿ ಎಕರೆಗೆ ₹500ರಂತೆ ಮೂರು ಚಟುವಟಿಕೆಗಳಿಗೆ (ವರ್ಷಕ್ಕೆ ಗರಿಷ್ಠ ₹4,500) ಸರ್ಕಾರ ಸಹಾಯಧನ ಭರಿಸಲಿದೆ.



ನಾಟಿ, ಉಳುಮೆ, ಕೊಯ್ಲು ಹಾಗೂ ಸಂಯೋಜಿತ ಕೊಯ್ಲು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಈ ಸೌಲಭ್ಯ ಅನ್ವಯವಾಗಲಿದ್ದು, ಬೇರೆ ಬೇರೆ ಕೃಷಿ ಹಂಗಾಮುಗಳಲ್ಲಿ ಒಂದೇ ಚಟುವಟಿಕೆಯನ್ನು ಪುನರಾವರ್ತಿಸಲು ಅವಕಾಶವಿದೆ.
ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮತ್ತು ಬುಕ್ಕಿಂಗ್:ಯೋಜನೆಯ ಪ್ರಯೋಜನ ಪಡೆಯಲು ರೈತರು ಹಾಗೂ ಕೃಷಿ ಯಂತ್ರೋಪಕರಣ ಸೇವಾದಾರರು ‘ಮುಖ್ಯಮಂತ್ರಿ ನೇಗಿಲ ಯೋಗಿ’ ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಸೇವಾದಾರರ ವಿವರ, ಟ್ರ್ಯಾಕ್ಟರ್ ಹಾಗೂ ಒಟ್ಟು 17 ವಿಧಗಳ ಕೃಷಿ ಯಂತ್ರೋಪಕರಣಗಳ ಮಾಹಿತಿಯನ್ನು ಆ್ಯಪ್‌ನಲ್ಲಿ ದಾಖಲಿಸಲಾಗಿದ್ದು,
ಈಗಾಗಲೇ ಎರಡೂ ಜಿಲ್ಲೆಗಳಲ್ಲಿ 15 ಮಂದಿ ಸೇವಾದಾರರು ನೋಂದಾಯಿಸಿಕೊಂಡಿದ್ದಾರೆ. ರೈತರು ಆ್ಯಪ್ ಮೂಲಕವೇ ತಮಗೆ ಬೇಕಾದ ಯಂತ್ರೋಪಕರಣ ಮತ್ತು ದಿನಾಂಕವನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು.
ರೈತರ ಖಾತೆಗೆ ನೇರ ನಗದು ಜಮೆ:ಕೃಷಿ ಚಟುವಟಿಕೆ ಪೂರ್ಣಗೊಂಡ ಬಳಿಕ ರೈತರು ಸೇವಾದಾರರಿಗೆ ಪೂರ್ಣ ಮೊತ್ತವನ್ನು ಪಾವತಿಸಬೇಕು. ಸೇವಾದಾರರು ಕೃಷಿ ಕಾರ್ಯಕ್ಕೂ ಮುನ್ನ ಮತ್ತು ನಂತರದ ಜಮೀನಿನ ಛಾಯಾಚಿತ್ರಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.
ಕೃಷಿ ಇಲಾಖೆ ಅಧಿಕಾರಿಗಳು ಫೋಟೋ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅರ್ಹ ಸಹಾಯಧನವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಿದ್ದಾರೆ.














































