ಮಂಗಳೂರು: ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ (ರಾ.ಹೆ. 100) 104 ಕಿ.ಮೀ ಉದ್ದದ ರಸ್ತೆಯನ್ನು ಕೇಂದ್ರ ಸರ್ಕಾರದ ಭಾರತ್‌ಮಾಲಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಅಭಿವೃದ್ಧಿಪಡಿಸಬೇಕು ಎಂದು ಸುಳ್ಯ ತಾಲೂಕಿನ ಸುಬ್ರಾಯ ಭಟ್ ಪಂಜ ಅವರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯಲ್ಲಿ ಸೋಮವಾರ ನಡೆದ ಸಾರ್ವಜನಿಕ ಅಹವಾಲು ಆಲಿಕೆ ವೇಳೆ ಅವರು ಈ ಮನವಿಯನ್ನು ಸಲ್ಲಿಸಿದರು.


ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯು ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಕಾಣಿಯೂರು, ಪುತ್ತೂರು, ಅಳಿಕೆ ಹಾಗೂ ಕೇರಳದ ಮಂಜೇಶ್ವರವನ್ನು ಸಂಪರ್ಕಿಸುವ ಪ್ರಮುಖ ಅಂತಾರಾಜ್ಯ ರಸ್ತೆಯಾಗಿದೆ. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳಿಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ದೃಷ್ಟಿಯಿಂದ ಈ ಕಾರಿಡಾರ್ ಅತ್ಯಂತ ಮಹತ್ವದ್ದಾಗಿದೆ.


ಪ್ರಸ್ತುತ ರಸ್ತೆಯ ದುಸ್ಥಿತಿಯಿಂದ ಯಾತ್ರಾರ್ಥಿಗಳು, ಅಂತಾರಾಜ್ಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಮಾರ್ಗವನ್ನು ಭಾರತ್‌ಮಾಲಾ ಯೋಜನೆಯಡಿ ಸೇರ್ಪಡೆಗೊಳಿಸಿದರೆ ಪ್ರಾದೇಶಿಕ ಸಂಪರ್ಕ ಉತ್ತಮಗೊಳ್ಳುವುದಲ್ಲದೆ,


ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ರಸ್ತೆಯ ಸಮಗ್ರ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿ ಕೇಂದ್ರ ಸರ್ಕಾರದ ಅನುದಾನ ಪಡೆಯಲು ಶಿಫಾರಸು ಮಾಡುವಂತೆ ಹಾಗೂ ಅಗತ್ಯ ಸಹಕಾರ ನೀಡುವಂತೆ ಸಂಸದರನ್ನು ಮನವಿಯಲ್ಲಿ ವಿನಂತಿಸಲಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ಉಪಸ್ಥಿತರಿದ್ದರು.














































