ನನ್ನ ಕೆಣಕಿದರೆ ಕಾಂಗ್ರೆಸ್‌ ಸರಕಾರಕ್ಕೇ ಕಷ್ಟ: ಎಚ್.ಡಿ.ಕುಮಾರಸ್ವಾಮಿ

Picture of Savistara

Savistara

Bureau Report

ಜೆಡಿಎಸ್‌ನಿಂದ “ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ’ ಹೋರಾಟ, ನಾನು ದಾಖಲೆ ಕೊಟ್ಟರೆ ಜನರೇ ಇವರನ್ನು ಓಡಿಸುತ್ತಾರೆ: ಕೇಂದ್ರ ಸಚಿವ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪುಢಾರಿಗಳು ನನ್ನನ್ನುಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಹೆದರುವ ವ್ಯಕ್ತಿ ಅಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡಿ ಲಾರಿಯಲ್ಲಿ ದಾಖಲೆಗಳನ್ನು ತಂದು ಕೊಡುತ್ತಾರಂತೆ. ತಂದು ಕೊಡಲಿ ನಾನೂ ನೋಡುತ್ತೇನೆ. ನನ್ನಲ್ಲಿರುವ ದಾಖಲೆಗಳನ್ನು ಬಿಚ್ಚಿಟ್ಟರೆ ಜನರೇ ಇವರನ್ನು ಓಡಿಸುತ್ತಾರೆ ಎಂದು ಕೇಂದ್ರ ಸಚಿವ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜೆಡಿಎಸ್‌ ಆಯೋಜಿಸಿದ್ದ “ಸಾಕಪ್ಪಾ ಸಾಕು ಕಾಂಗ್ರೆಸ್ ಸರಕಾರ ಎಂಬ ಬೃಹತ್‌ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದೆ ಅಧಿಕಾರದಲ್ಲಿದ್ದಾಗ ನನ್ನ ಧ್ವನಿ ಅಡಗಿಸುವ ಕೆಲಸ ಮಾಡಿದ್ದರು. ನನ್ನ ಕೆಣಕಿದರೆ ಅವರಿಗೆ ಕಷ್ಟ, ನಾನು ಯಾವುದೇ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ನ್ಯಾಯ, ಕೋರ್ಟ್ ಇದೆ ಎಂದು ಹೋರಾಟ ಮಾಡುತ್ತಿದ್ದೇನೆ. ನನ್ನಲ್ಲಿ ಅಧಿಕಾರ ಇದ್ದಾಗಲೂ ನಾನು ನನ್ನ ಕೆಲಸ ಮಾಡಿಕೊಳ್ಳಲಿಲ್ಲ. ಈಗ ಕೇಂದ್ರ ಸಚಿವನಾಗಿದ್ದಾಗಲೂ ಕಾಂಗ್ರೆಸ್‌ನವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯಗೆ ಸವಾಲು

ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿ ಆಗಿದ್ದಾಗ ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ಆರೋಪವನ್ನು ರಾಮಮೂರ್ತಿ ಗೌಡ ಮಾಡಿದ್ದು, ಅಭಿಯೋಜನೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಗಣಿ ಗುತ್ತಿಗೆ ನವೀಕರಣದಿಂದ ಸರಕಾರದ 5,000 ಕೋಟಿ ರೂ. ನಷ್ಟ ಉಂಟು ಮಾಡಿರುವ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ. ಇದಕ್ಕೇನು ಉತ್ತರ ಕೊಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವಾಲೆಸಿದಿದ್ದಾರೆ.

ನಾನು ಕೇಂದ್ರದ ಮುಂದೆ ಭಿಕ್ಷೆ ಬೇಡಿರಲಿಲ್ಲ

ಕರ್ನಾಟಕದಲ್ಲಿ ಇಂತ ಕೆಟ್ಟ ಸರಕಾರ ಎಂದೂ ಅಧಿಕಾರಕ್ಕೆ ಬಂದಿರಲಿಲ್ಲ. ಗ್ಯಾರಂಟಿ ಹೆಸರು ಹೇಳಿಕೊಂಡು ಬಂದ ಇವರು, ಈಗ ಜನರನ್ನು ಕಿತ್ತು ತಿನ್ನುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ; ಹಾಗೆಂದರೆ ಜನರನ್ನು ಕಿತ್ತು ತಿನ್ನುವುದೇ? ಇದೇ ಸರಕಾರ ಮುಂದುವರಿದರೆ ರಾಜ್ಯದ ಸಾಲ 10 ಲಕ್ಷ ಕೋಟಿ ರೂ. ಆಗುತ್ತದೆ. ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರದ ಮುಂದೆ ಹೋಗಿ ಭಿಕ್ಷೆ ಬೇಡಲಿಲ್ಲ. ಜನ ಕೊಟ್ಟ ತೆರಿಗೆ ಹಣವನ್ನೇ ಬಳಸಿದೆ. ಮೈತ್ರಿ ಸರಕಾರದ ಅವಧಿಯಲ್ಲಿ ಸಾಲಮನ್ನಾ ಮಾಡಿದೆ. ಆಗ ಜನರ ಮೇಲೆ ತೆರಿಗೆ ಹಾಕಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಗುತ್ತಿಗೆದಾರರಿಗೆ ತೊಂದರೆ ಕೊಟ್ಟಿದ್ದರೆ ನೀವು ಕೊಡುವ ಶಿಕ್ಷೆ ಅನುಭವಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಸಂಕಷ್ಟದಲ್ಲಿ ರಾಜ್ಯದ ಜನ

ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರಕಾರ ಉಸಿರಾಡುವ ಗಾಳಿ ಬಿಟ್ಟು ಬೇರೆಲ್ಲದಕ್ಕೂ ತೆರಿಗೆ ಹಾಕಿದೆ. ಪ್ರತಿಯೊಂದಕ್ಕೂ ನಿರಂತರವಾಗಿ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದೆ. ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿ ಚಟುವಟಿಕೆ ಸ್ಥಗಿತಗೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಾದ ಶಾರದ ಪೂರ್ಯ ನಾಯಕ್, ಕರೆದ್ದು ನಾಯಕ್‌, ಎ. ಮಂಜು, ಶರಣ ಪಾಟೀಲ್ ಕಂದಕೂ।, ಸಿ.ಎನ್. ಬಾಲಕೃಷ್ಣ ಭೋಜೇಗೌಡ ಸೇರಿ ಪಕ್ಷದ ಹಲವು ಮುಖಂಡರು, ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ನಮ್ಮ ಪಕ್ಷದ 16 ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜೆಡಿಎಸ್‌ ಪಕ್ಷವನ್ನು ಸರ್ವನಾಶ ಮಾಡುತ್ತೇವೆ ಎಂದು ಕಾಂಗ್ರೆಸ್‌ ಮತ್ತು ಕೆಲ ಸಂಘಟನೆಗಳು ಹೇಳಿದ್ದವು. ಆ ಸಂಚನ್ನು ವಿಫಲ ಮಾಡಿದ್ದೇವೆ. ನಾವೆಲ್ಲ ಒಗ್ಗಟ್ಟಿನಿಂದ ಹೋರಾಟಕ್ಕೆ ಸೇರಿದ್ದೇವೆ.

– ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ವಿಧಾನಸೌಧಕ್ಕೆ ಮುತ್ತಿಗೆ ಯತ್ನ

ಪ್ರತಿಭಟನಾ ಸಭೆಯ ಬಳಿಕ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು, ಮುಖಂಡರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡರು.

[t4b-ticker]
error: Content is protected !!