ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿಮಂಗಳವಾರ (ಏ.22) ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬರು ಸಾ*ವನ್ನಪ್ಪಿ, ಇತರ ಹನ್ನೆರಡು ಜನರು ಗಾಯಗೊಂಡ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ದುಷ್ಕರ್ಮಿಗಳನ್ನು ನ್ಯಾಯದ ಕಟಕಟೆಗೆ ತರಲಾಗುವುದು ಮತ್ತು ಅವರನ್ನು ಬಿಡಲಾಗುವುದಿಲ್ಲ ಎಂದು ಅವರು ಹೇಳಿದರು.ಎರಡು ದಿನಗಳ ಭೇಟಿಗಾಗಿ ಜೆಡ್ಡಾದಲ್ಲಿರುವ ಪ್ರಧಾನಿ ಮೋದಿ ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಬಲಿಪಶುವಿನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.“ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಬಾಧಿತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ” ಎಂದು ಪಿಎಂ ಮೋದಿ ಹೇಳಿದರು.
“ಈ ಹೇಯ ಕೃತ್ಯದ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಲಾಗುವುದು. ಅವರನ್ನು ಬಿಡಲಾಗುವುದಿಲ್ಲ! ಅವರ ದುಷ್ಟ ಕಾರ್ಯಯೋಜನೆ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ” ಎಂದು ಮೋದಿ ಹೇಳಿದರು.
ಅಮಿತ್ ಶಾಗೆ ಸೂಚನೆ
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಪಹಲ್ಲಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ದಾಳಿಯ ಸ್ಥಳಕ್ಕೆ ಭೇಟಿ ನೀಡುವಂತೆಯೂ ಅವರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.ಭಯೋತ್ಪಾದಕ ದಾಳಿಯ ನಂತರ, ಅಮಿತ್ ಶಾ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ಕರೆದರು. ಸಭೆಯಲ್ಲಿ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಸಹ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.













































