ರಾಜ್ಯದಿಂದ ಪಾಕ್​ ಪ್ರಜೆಗಳ ವಾಪಸ್ ಕಳಿಸಲು ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

Picture of Savistara

Savistara

Bureau Report

ಪಾಕಿಸ್ತಾನದ ಪ್ರಜೆಗಳನ್ನು ರಾಜ್ಯದಿಂದ ವಾಪಸ್ ಕಳಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.

ಬೆಂಗಳೂರು: ಪಾಕಿಸ್ತಾನದ ಪ್ರಜೆಗಳನ್ನು ರಾಜ್ಯದಿಂದ ವಾಪಸ್ ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಇಂದು ಬಿಜೆಪಿ ನಿಯೋಗವು ಮನವಿ ಸಲ್ಲಿಸಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗವು ಈ ಕುರಿತಂತೆ ಸಂಗ್ರಹಿತ ಸಹಿಗಳುಳ್ಳ ಮನವಿ ಪತ್ರ ಸಲ್ಲಿಸಿತು. ಬಿಜೆಪಿಯು ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನೂ ಆಯೋಜಿಸಿತ್ತು.ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರಿಂದ ಪ್ರವಾಸಿಗರ ಮೇಲೆ ನಡೆದ ದಾಳಿಯ ಬಳಿಕ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದ ಕೇಂದ್ರ ಸರ್ಕಾರವು ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿರುವ ವೀಸಾ ರದ್ದುಗೊಳಿಸಿತ್ತು. ಅಲ್ಲದೇ, ದೀರ್ಘಾವಧಿ ವೀಸಾ ಹೊಂದಿರದ ಪಾಕ್​ ಪ್ರಜೆಗಳನ್ನು ಗಡಿಪಾರು ಮಾಡುವಂತೆ ಆದೇಶ ಹೊರಡಿಸಿತ್ತು.

ಈ ಆದೇಶದ ಬೆನ್ನಲ್ಲೇ, ಕರ್ನಾಟಕದ ಮೈಸೂರು, ಉತ್ತರ ಕನ್ನಡ, ತುಮಕೂರು ಮತ್ತು ದಾವಣಗೆರೆ ಮುಂತಾದ ಕಡೆಗಳಲ್ಲಿ ಒಟ್ಟು 92 ಜನ ಪಾಕ್ ಪ್ರಜೆಗಳು ವಾಸವಿರುವುದನ್ನು ಆಯಾ ಜಿಲ್ಲಾಡಳಿತ ಮತ್ತು ಪೊಲೀಸರು ಪತ್ತೆ ಮಾಡಿದ್ದರು. ಆದರೆ, ಆ ಪೈಕಿ ನಾಲ್ವರು ಮಾತ್ರ ತಕ್ಷಣ ಭಾರತ ತೊರೆಯಬೇಕಿತ್ತು. ಇನ್ನುಳಿದ 88 ಪಾಕ್ ಪ್ರಜೆಗಳು ದೀರ್ಘಾವಧಿ ವೀಸಾ (LTV) ಹೊಂದಿರುವುದರಿಂದ ಮುಂದಿನ ಆದೇಶದವರೆಗೆ ಯಾವುದೇ ಕ್ರಮ ಜರುಗಿಸಿರಲಿಲ್ಲ.

ಇದರಲ್ಲಿ, ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಪಾಕಿಸ್ತಾನ ಮೂಲದ 12 ಮಹಿಳೆಯರು ಹಾಗೂ ಮೂವರು ಮಕ್ಕಳು ಸಹಿತ ಒಟ್ಟು 15 ಜನ ವಾಸವಿರುವುದು ಗೊತ್ತಾಗಿತ್ತು. ಉದ್ಯೋಗದ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದವರ ಪೈಕಿ ಕೆಲವರು ಪಾಕ್ ಪ್ರಜೆಗಳನ್ನು ವಿವಾಹವಾಗಿ ಕರೆತಂದು ಜೀವನ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ದೀರ್ಘಾವಧಿ ವೀಸಾ ಹೊಂದಿರದವರನ್ನು ಕಡ್ಡಾಯವಾಗಿ ವಾಪಸ್ ಕಳಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದರು.ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗದಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಶಾಸಕ ವೇದವ್ಯಾಸ ಕಾಮತ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಹಲವರು ಇದ್ದರು.

[t4b-ticker]
error: Content is protected !!