ಸುಳ್ಯ: ಅಕ್ಕೋಜಿಪಾಲ್- ಜೋಗಿಯಡ್ಕ-ಅಜ್ಜನಗದ್ದೆ-ಚೊಕ್ಕಾಡಿ-ಶೇಣಿ ರಸ್ತೆ ಅಭಿವೃದ್ಧಿಗಾಗಿ ಸಾರ್ವಜನಿಕರ ಒಗ್ಗಟ್ಟಿನ ಹೋರಾಟಕ್ಕೆ ಚಾಲನೆ ನೀಡಲು ನ.5 ರಂದು ಕುಕ್ಕುಜಡ್ಕ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಅಮರ ಪಡ್ನೂರು ಹಾಗೂ ಅಮರಮುಡ್ನೂರು ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 300 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಅಕ್ಕೋಜಿಪಾಲ್‌ನಿಂದ ಶೇಣಿವರೆಗಿನ ಪ್ರಮುಖ ಸಂಪರ್ಕ ರಸ್ತೆಯು ಕಳೆದ 15 ವರ್ಷಗಳಿಂದ ಸಮರ್ಪಕ ದುರಸ್ತಿ ಹಾಗೂ ಮರು ಡಾಮರೀಕರಣ ಕಾಣದೆ ಹೊಂಡಗುಂಡಿಗಳಿಂದ ಕೂಡಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆ ಅಭಿವೃದ್ಧಿಗಾಗಿ ಕಳೆದ 2 ರಿಂದ 2.5 ವರ್ಷಗಳಿಂದ ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗಟ್ಟಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.ಸಭೆಯಲ್ಲಿ ಮಾತನಾಡಿದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಪಕ್ಷ, ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದರು.

ಹೋರಾಟ ಸಮಿತಿ ರಚನೆ:ರಸ್ತೆ ಅಭಿವೃದ್ಧಿ ಹೋರಾಟವನ್ನು ಸಂಘಟಿತವಾಗಿ ಮುನ್ನಡೆಸಲು ನೂತನ ಹೋರಾಟ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಹರ್ಷ ಕುಮಾರ್ ಎಂ.ಎಸ್, ಉಪಾಧ್ಯಕ್ಷರಾಗಿ ಪವನ್ ಮುಂಡ್ರಾಜೆ, ಹೇಮಲತಾ ತಂಟೆಪ್ಪಾಡಿ, ಹರಿಪ್ರಸಾದ್ ರೈ ಶೇಣಿ, ಜಯಂತ ನಾಯರ್ ಕಲ್ಲು, ಗಂಗಾಧರ ಹಿರಿಯಡ್ಕ,ಕಾರ್ಯದರ್ಶಿಯಾಗಿ ಅರುಣ ಕುಮಾರ್ ಮುಂಡಾಜೆ,ಜೊತೆ ಕಾರ್ಯದರ್ಶಿಯಾಗಿ ಪುನೀತ್ ಸಂಕೇಶ, ಖಜಾಂಜಿಯಾಗಿ ಶಶಿಕಾಂತ್ ಮಿತ್ತೂರು,ಸಂಚಾಲಕರಾಗಿ ಚೈತನ್ಯ ಭಟ್ ಪಾರೆ, ಹೋರಾಟಕ್ಕೆ ಸಹಕಾರ ನೀಡಿದ 20 ಸಂಘ-ಸಂಸ್ಥೆಗಳಿಂದ ತಲಾ ಐವರು ಪ್ರತಿನಿಧಿಗಳನ್ನು ಸಮಿತಿಯ ಸದಸ್ಯರನ್ನಾಗಿ ಸೇರಿಸಿಕೊಳ್ಳಲು ತೀರ್ಮಾನಿಸಲಾಯಿತು.
ಗೌರವ ಸಲಹೆಗಾರಾಗಿ ರಾಧಾಕೃಷ್ಣ ಭಟ್ ಜೋಗಿಯಡ್ಕ, ತಿರುಮಲೇಶ್ವರ ದಂಬೆತೋಟ, ಎಂ.ಜಿ. ಸತ್ಯನಾರಾಯಣ ಭಟ್, ಶಿವಶಂಕರ ಭಟ್, ಜಯರಾಮ ಪಿ.ಕೆ., ಪದ್ಮನಾಭ ಬೊಳ್ಳೂರು, ವಸಂತ ಮಾಡಬಾಗಿಲು, ಪುರುಷೋತ್ತಮ ಮೂಕಮಲೆ, ವೆಂಕಟ್ರಮಣ ಇಟ್ಟಿಗುಂಡಿ, ಚಂದ್ರಶೇಖರ ಸುಬ್ಬಯಮೂಲೆ, ಆನಂದ ಗೌಡ ಕೇನಡ್ಕ, ಸುಪ್ರೀತ್ ಮೊಂಟಡ್ಕ, ಯಶವಂತ ಪಿಲಿಕಜೆ, ಪದ್ಮಯ ಗೌಡ ಬೊಳ್ಳೂರು, ವಿವೇಕ್ ರೈ ಶೇಣಿ, ಜಯಪ್ರಕಾಶ್ ಅನೇಕರ್, ಲಕ್ಷ್ಮೀಶ ನಡುಗಲ್ಲು ಮೊದಲಾದವರು ಆಯ್ಕೆ ಮಾಡಲಾಯಿತು.
ನವೆಂಬರ್ 7ರಂದು ಸಾಂಕೇತಿಕ ಪ್ರತಿಭಟನೆ:ಹೋರಾಟದ ಮೊದಲ ಹಂತವಾಗಿ ನವೆಂಬರ್ 7, ಶನಿವಾರ ಚೊಕ್ಕಾಡಿ ವಠಾರದಲ್ಲಿ ಶಾಂತಿಯುತ ಸಾಂಕೇತಿಕ ಪ್ರತಿಭಟನೆ ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

































