ನವದೆಹಲಿ: ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಗ್ನಿವೀರರಿಗೆ ಕೇಂದ್ರ ಸರ್ಕಾರವು ಬಿಗ್ ಆಫರ್ ನೀಡಿದ್ದು, ಹೆಚ್ಚುವರಿ ಎರಡು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿದ ನಂತರ, ತಮ್ಮ ಆಸಕ್ತಿ ಮತ್ತು ಅರ್ಹತಾ ಮಾನದಂಡಗಳಿಗೆ ಒಳಪಟ್ಟ ಎಲ್ಲಾ ಅಗ್ನಿವೀರರು ಕಾಯಂ ಸೈನಿಕರಾಗಿ ಸೇರ್ಪಡೆಗೊಳ್ಳಲು ಅರ್ಹರಾಗಿರುತ್ತಾರೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.ಪಶ್ಚಿಮ ಬಂಗಾಳದ ಬಾಗ್‌ಡೋಗ್ರಾ ವಾಯುಪಡೆ ನಿಲ್ದಾಣದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ವೇಳೆ ಈ ವಿಷಯವನ್ನು ಪ್ರಕಟಿಸಿದ ರಾಜನಾಥ ಸಿಂಗ್, “ಈ ನಿರ್ಧಾರವು ಅಗ್ನಿವೀರರಿಗೆ ದೀಪಾವಳಿ ಕೊಡುಗೆಯಾಗಿದ್ದು, ದೇಶ ಸೇವೆ ಮಾಡಲು ಮತ್ತೊಂದು ಸುವರ್ಣ ಅವಕಾಶವನ್ನು ಕಲ್ಪಿಸುತ್ತದೆ” ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ನಿರ್ಧಾರ:2022ರ ಜೂನ್‌ನಲ್ಲಿ ಆರಂಭವಾದ ಅಗ್ನಿಪಥ ಯೋಜನೆಯಡಿ ಸೈನಿಕರನ್ನು 4 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು ಮತ್ತು ಅವರಲ್ಲಿ ಕೇವಲ ಶೇ. 25 ರಷ್ಟು ಜನರನ್ನು ಮಾತ್ರ ಕಾಯಂ ಸೇವೆಗೆ ಉಳಿಸಿಕೊಳ್ಳುವ ಅವಕಾಶವಿತ್ತು. ಪ್ರಸ್ತುತ 3,00,000 ಕ್ಕೂ ಹೆಚ್ಚು ಸೈನಿಕರು ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಹೆಚ್ಚುವರಿ 2 ವರ್ಷಗಳ ಸೇವಾವಧಿ ವಿಸ್ತರಣೆ ಮತ್ತು ನಂತರದ ಕಾಯಂ ನೇಮಕಾತಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಕಾಯಂ ಸೈನಿಕರಾಗಲು ಪ್ರಕ್ರಿಯೆ ಹೇಗೆ?

2 ವರ್ಷಗಳ ಸೇವಾ ವಿಸ್ತರಣೆ: 4 ವರ್ಷಗಳ ಸೇವಾವಧಿ ಪೂರ್ಣಗೊಳಿಸುವ ಅಗ್ನಿವೀರರಿಗೆ ಮೊದಲು ಹೆಚ್ಚುವರಿ 2 ವರ್ಷಗಳ ಸೇವಾ ವಿಸ್ತರಣೆ ನೀಡಲಾಗುತ್ತದೆ.

ಅರ್ಹತೆಯ ಆಧಾರದಲ್ಲಿ ಕಾಯಂ: 2 ವರ್ಷಗಳ ಹೆಚ್ಚುವರಿ ಸೇವೆ ಮುಗಿದ ನಂತರ, ಆಸಕ್ತಿ ಹೊಂದಿರುವ ಹಾಗೂ ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸುವ ಎಲ್ಲಾ ಅಗ್ನಿವೀರರನ್ನು ಕಾಯಂ ಸೈನಿಕರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಸುಮಾರು 18,300 ಅಗ್ನಿವೀರರು ತಮ್ಮ 4 ವರ್ಷಗಳ ಸೇವಾವಧಿ ಪೂರ್ಣಗೊಳಿಸಿ ಸಶಸ್ತ್ರ ಪಡೆಗಳಿಂದ ನಿರ್ಗಮಿಸಲು ಮೂರು ವಾರಗಳಿಗಿಂತ ಕಡಿಮೆ ಸಮಯವಿದ್ದಾಗ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಅವರು ಸೇವಾ ವಿಸ್ತರಣೆಯ ಈ ಸಿಹಿ ಸುದ್ದಿಯನ್ನು ಘೋಷಿಸಿದ್ದರು.







































