ಪ್ರದೀಪ್‌ ಪೂಜಾರಿ ಸಾವು ಪ್ರಕರಣ: ಎಸ್‌ಪಿ ತನಿಖೆ, ಎಸ್‌ಐ ಅಮಾನತಿಗೆ ಆಗ್ರಹ; ನ.11ರಂದು ಉಡುಪಿಯಲ್ಲಿ ಪ್ರತಿಭಟನೆ!

Picture of Savistara

Savistara

Bureau Report

ಉಡುಪಿ: ಪ್ರದೀಪ್ ಪೂಜಾರಿ ಅವರ ಸಂಶಯಾಸ್ಪದ ಸಾವುಪ್ರಕರಣದಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವಿದೆ ಎಂದು ಆರೋಪಿಸಿರುವ ಹಿಂದೂಪರ ಸಂಘಟನೆಯ ಮುಖಂಡ ಶ್ರೀಕಾಂತ್‌ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ತನಿಖೆಗೆ ಒಳಪಡಿಸಬೇಕು ಹಾಗೂ ಎಸ್‌ಐ ಪುನೀತ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರದೀಪ್ ಸಾವಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಆರೋಪಿಸಿದರು. ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆ‌ರ್ ದಾಖಲಿಸದಿರುವುದು ಹಾಗೂ ಆರೋಪಿಗಳನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂಬ ನೋವಿನಿಂದಲೇ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ದೂರಿದರು. ಈ ಪ್ರಕರಣದಲ್ಲಿ ಸ್ಥಳೀಯ ಎಸ್‌ಐ ವಿರುದ್ಧ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದವರ ವಿರುದ್ಧವೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಪ್ರಕರಣದಲ್ಲಿ ನ್ಯಾಯಕ್ಕಾಗಿ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಹಾಗೂ ಎಸ್‌ಐ ಪುನೀತ್‌ ಅವರನ್ನು ರಜೆಯಲ್ಲಿ ಕಳುಹಿಸಿರುವುದನ್ನು ಹೊರತುಪಡಿಸಿ ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಸ್‌ಐ ಅವರನ್ನು ಅಮಾನತುಗೊಳಿಸುವ ಬದಲು ಕಡ್ಡಾಯ ರಜೆಯಲ್ಲಿ ಕಳುಹಿಸಿರುವ ಕ್ರಮದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಹೇಳಿಕೆ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಪ್ರದೀಪ್ ಜೊತೆ ಗುರುತಿಸಿಕೊಂಡಿರುವ ಸಂಘಟನೆಗಳ ಮುಖಂಡರಿಗೆ ನೋವುಂಟು ಮಾಡಿದೆ. ಅವರ ಹೇಳಿಕೆ ಏಕಪಕ್ಷೀಯವಾಗಿದ್ದು, ಯುವಕನ ಸಾವಿನ ಬಗ್ಗೆ ಕನಿಷ್ಠ ಸಂತಾಪವನ್ನೂ ವ್ಯಕ್ತಪಡಿಸಿಲ್ಲ. ಪ್ರದೀಪ್ ಕುಟುಂಬದ ನೋವು ಹಾಗೂ ಆತನ ಮೇಲೆ ನಡೆದಿತ್ತೆನ್ನಲಾದ ಅನೈತಿಕ ಪೊಲೀಸ್ ಗಿರಿಯ ಬಗ್ಗೆ ಮಾತನಾಡದೆ ಕೇವಲ ಸಂತ್ರಸ್ತ ಯುವತಿಯ ವಿಚಾರವನ್ನಷ್ಟೇ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.

ಸಂತ್ರಸ್ತ ಯುವತಿಯ ಪರವಾಗಿ ಪೊಲೀಸರು ಮಾತನಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಮೃತಪಟ್ಟ ಯುವಕನ ಬಗ್ಗೆಯೂ ಸಮಾನ ಕಾಳಜಿ ತೋರಿಸಬೇಕಿತ್ತು. ಪ್ರದೀಪ್‌ನನ್ನು ಅಪರಾಧಿಯಂತೆ ಬಿಂಬಿಸಲಾಗುತ್ತಿದೆ. ವೈದ್ಯಕೀಯ ವರದಿಯಲ್ಲಿ ಯುವತಿಗೆ ಬಾಹ್ಯ ಗಾಯಗಳಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಹಲವು ಅನುಮಾನಗಳಿದ್ದು, ಅವುಗಳಿಗೆ ಸಮರ್ಪಕ ಉತ್ತರ ದೊರೆಯಬೇಕು ಎಂದು ಶ್ರೀಕಾಂತ್ ಶೆಟ್ಟಿ ಒತ್ತಾಯಿಸಿದರು.

ಮುಂದಿನ ತನಿಖೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನೂ ವಿಚಾರಣೆಗೆ ಒಳಪಡಿಸಬೇಕು. ಪ್ರಕರಣದಲ್ಲಿ ಅವರ ಮೇಲೆ ಯಾರಾದರೂ ಪ್ರಭಾವ ಬೀರಿದ್ದಾರೆಯೇ ಅಥವಾ ಯಾರಾದರೂ ನೀಡಿದ ಸೂಚನೆಯಂತೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಪೊಲೀಸ್‌ ಇಲಾಖೆಯಿಂದಲೇ ನ್ಯಾಯ ಸಿಗುವ ವಿಶ್ವಾಸ ಕಡಿಮೆಯಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ನವೆಂಬ‌ರ್ 11ರಂದು ಉಡುಪಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ ನೀಡಿದರು.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!