ಬೆಂಗಳೂರು: ಪೆಟ್ರೋಲ್‌ನಲ್ಲಿ ನಿಗದಿತ ಇ-20 ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿರುವ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಅರ್ಷದ್ ರಿಜ್ವಾನ್ ನೇತೃತ್ವದಲ್ಲಿ ‘ಮಿಷನ್ ನಿಖರ’ ಅಭಿಯಾನದಡಿ ನಡೆಸಿದ ತಪಾಸಣೆಯಲ್ಲಿ ಪ್ರಮುಖ ತೈಲ ಕಂಪನಿಗಳ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಪತ್ತೆಯಾಗಿದೆ. ಕೆಲವು ಮಾದರಿಗಳಲ್ಲಿ ಇದರ ಪ್ರಮಾಣ ಶೇ 31.2ರಷ್ಟಿದೆ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುವ, ಎಂಜಿನ್ ಹಾನಿ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುವ ಆತಂಕವಿದೆ. ಇದರ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳಬಾರದು ಎಂದು ಹೇಳಿದ್ದಾರೆ.ದೇಶಾದ್ಯಂತ ಪೆಟ್ರೋಲ್‌ನಲ್ಲಿನ ನೈಜ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಬೇಕು. ಮಿತಿ ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೆಟ್ರೋಲ್ ಬಂಕ್‌ಗಳ ತಪಾಸಣಾ ವರದಿಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಾಹನಗಳಿಗೆ ಎಥೆನಾಲ್ ಮಿಶ್ರಣದಿಂದ ಹಾನಿಯಾದವರಿಗೆ ಪರಿಹಾರ ನೀಡಲು ‘ಇ20 ಹಾನಿ ಪರಿಹಾರ ನಿಧಿ’ ಸ್ಥಾಪಿಸಬೇಕು. ಪ್ರತಿ ಪೆಟ್ರೋಲ್ ಬಂಕ್‌ನಲ್ಲೂ ಎಥೆನಾಲ್ ಪ್ರಮಾಣ ಪ್ರಕಟಿಸುವುದರ ಜತೆಗೆ, ವಾಹನಗಳಿಗೆ ಸೂಕ್ತವಾದ ಇಂಧನ ಆಯ್ಕೆ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.


































