ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ ಕಬಕದಲ್ಲಿ ನಡೆಯಿತು.
ಕಬಕ ಜಂಕ್ಷನ್‌ನಿಂದ ಗ್ರಾಮ ಪಂಚಾಯತ್ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕಬಕ ಗ್ರಾಮಕ್ಕೆ ಸುಮಾರು 6.27 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.ಗ್ರಾಮದ ರಸ್ತೆಗಳು, ಶಾಲಾ-ಕಾಲೇಜುಗಳು, ಸ್ವಚ್ಛತಾ ಯಾರ್ಡ್, ರುದ್ರಭೂಮಿ, ಪಾರ್ಕ್, ಪಂಚಾಯತ್ ಕಟ್ಟಡ ಸೇರಿದಂತೆ ಪೋಳ್ಯ, ಕೆದುವಡ್ಕ, ಮುಂಗ್ಲಿಮನೆ, ನೆಕ್ಕರೆ, ದೇವಸ್ಯ, ಕಾಜುಬಳ್ಳಿ ಹಾಗೂ ಕಬಕ ವರ್ತುಲ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕಾಜುಬಳ್ಳಿ ಸೇತುವೆ ನಿರ್ಮಾಣ, ಜೆಜೆಎಂ ಯೋಜನೆಯಡಿ ಮನೆಮನೆಗೆ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರಕಾರದ ಅವಧಿಯಲ್ಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.ಆದರೆ, ಈಗಿನ ರಾಜ್ಯ ಸರಕಾರ ಹಾಗೂ ಪುತ್ತೂರಿನ ಶಾಸಕರು ಕಳೆದ ಮೂರು ವರ್ಷಗಳಲ್ಲಿ ಕಬಕ ಗ್ರಾಮಕ್ಕೆ ಕೇವಲ 25 ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಕಬಕ ಗ್ರಾಮಕ್ಕೆ ನೀಡಿರುವ ಅನುದಾನಗಳ ಕುರಿತು ಚರ್ಚೆಗೆ ಬರುವಂತೆ ಸವಾಲು ಹಾಕಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಮಾತನಾಡಿ, ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯೆ ದಿವ್ಯ ಪುರುಷೋತ್ತಮ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ವಿನಯ ಕುಮಾರ್ ಕಲ್ಲೇಗ ಸ್ವಾಗತಿಸಿದರು. ರುಕ್ಮಯ್ಯ ಗೌಡ ಪೋಳ್ಯ ವಂದಿಸಿದರು. ಜಯರಾಮ ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು.



































