ಉಳ್ಳಾಲದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ಓರ್ವ ಮಹಿಳೆ ಸೇರಿ ಎರಡು ಕಂದಮ್ಮಗಳ ದಾರುಣ ಸಾವು! ಫಲ ನೀಡದ ಸತತ 8 ಗಂಟೆ ನಡೆಸಿದ ರಕ್ಷಣಾ ಕಾರ್ಯ

Picture of Savistara

Savistara

Bureau Report

ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಶುಕ್ರವಾರ ಮುಂಜಾನೆ ಸುರಿದ ಧಾರಾಕಾರ ಮಳೆಗೆ ಗುಡ್ಡವೊಂದು ಕುಸಿದು, ಮನೆಯೊಂದು ಸಂಪೂರ್ಣವಾಗಿ ಧರೆಗುರುಳಿದ ಪರಿಣಾಮ ಓರ್ವ ಮಹಿಳೆ ಹಾಗೂ ಇಬ್ಬರು ಮುದ್ದು ಕಂದಮ್ಮಗಳು ದಾರುಣವಾಗಿ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಈ ಘೋರ ದುರಂತ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಉಳ್ಳಾಲ (ದಕ್ಷಿಣ ಕನ್ನಡ), ಮೇ 30: ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಶುಕ್ರವಾರ ಮುಂಜಾನೆ ಸುರಿದ ಧಾರಾಕಾರ ಮಳೆಗೆ ಗುಡ್ಡವೊಂದು ಕುಸಿದು, ಮನೆಯೊಂದು ಸಂಪೂರ್ಣವಾಗಿ ಧರೆಗುರುಳಿದ ಪರಿಣಾಮ ಓರ್ವ ಮಹಿಳೆ ಹಾಗೂ ಇಬ್ಬರು ಮುದ್ದು ಕಂದಮ್ಮಗಳು ದಾರುಣವಾಗಿ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಈ ಘೋರ ದುರಂತ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತರನ್ನು ಕಾಂತಪ್ಪ ಪೂಜಾರಿಯವರ ಪತ್ನಿ ಶ್ರೀಮತಿ ಪ್ರೇಮಾ (58) ಹಾಗೂ ಅವರ ಮೊಮ್ಮಕ್ಕಳಾದ, ಸೀತಾರಾಮ್ ಅಶ್ವಿನಿ ದಂಪತಿಯ ಪುತ್ರರಾದ ಆರ್ಯನ್ ಮತ್ತು ಆರುಷ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಶುಕ್ರವಾರ ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ, ಇಡೀ ಗ್ರಾಮವೇ ಗಾಢ ನಿದ್ರೆಯಲ್ಲಿದ್ದಾಗ, ಕಾಂತಪ್ಪ ಪೂಜಾರಿಯವರ ಮನೆಗೆ ಹೊಂದಿಕೊಂಡಿದ್ದ ಗುಡ್ಡವು ಭಾರಿ ಮಳೆಗೆ ಜರಿದು ಮನೆಯ ಮೇಲೆ ಬಿದ್ದಿದೆ. ಮನೆಯ ಯಜಮಾನ ಕಾಂತಪ್ಪ ಪೂಜಾರಿಯವರು ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು.ಅವರನ್ನು ತಕ್ಷಣ ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಅವರ ಪತ್ನಿ ಪ್ರೇಮಾ ಅವರು ಮನೆಯ ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮನೆಯ ಇನ್ನೊಂದು ಕೋಣೆಯಲ್ಲಿ ಕಾಂತಪ್ಪ ಪೂಜಾರಿಯವರ ಪುತ್ರ ಸೀತಾರಾಮ್, ಅವರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಚಿಣ್ಣರಾದ ಆರ್ಯನ್ ಮತ್ತು ಆರುಷ್ ಮಲಗಿದ್ದರು. ಗುಡ್ಡ ಕುಸಿತದ ರಭಸಕ್ಕೆ ಸೀತಾರಾಮ್ ಅವರು ಪವಾಡಸದೃಶವಾಗಿ ಪಾರಾಗಿದ್ದಾರೆ. ಆದರೆ, ಅವರ ಪತ್ನಿ ಅಶ್ವಿನಿ ಹಾಗೂ ಮುದ್ದು ಮಕ್ಕಳಿಬ್ಬರೂ ಮನೆಯ ಅವಶೇಷಗಳಡಿ ಸಿಲುಕಿಕೊಂಡಿದ್ದರು.

ಫಲ ಕೊಡದ ರಕ್ಷಣಾ ಯತ್ನ:

ಮುಂಜಾನೆಯಿಂದಲೇ ಸ್ಥಳೀಯರು ಒಗ್ಗೂಡಿ ತಾಯಿ ಮತ್ತು ಮಕ್ಕಳ ರಕ್ಷಣೆಗೆ ಧಾವಿಸಿದ್ದರು. ಅವಶೇಷಗಳಡಿಯಿಂದ ಅಶ್ವಿನಿಯವರ ಕ್ಷೀಣ ದನಿ ಹಾಗೂ ಒಂದು ಮಗುವಿನ ಅಳುವ ಸದ್ದು ಕೇಳಿಬರುತ್ತಿದ್ದು, ಇದರಿಂದ ಎಲ್ಲರನ್ನೂ ಜೀವಂತವಾಗಿ ಹೊರತೆಗೆಯಬಹುದೆಂಬ ಆಶಾಭಾವನೆ ಅಲ್ಲಿದ್ದವರಲ್ಲಿ ಮೂಡಿತ್ತು. ಆದರೆ, ಮನೆ ಸಂಪೂರ್ಣವಾಗಿ ನೆಲಸಮವಾಗಿದ್ದರಿಂದ ಮತ್ತು ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆಯುಂಟಾಯಿತು.ಬೆಳಗ್ಗೆ ಸ್ಥಳಕ್ಕೆ ದೌಡಾಯಿಸಿದ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಸಿಬ್ಬಂದಿ, ಸ್ಥಳೀಯರೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದರು 8. ಗಂಟೆಗಳ ಕಾಲ ನಡೆದ ಸತತ ಪ್ರಯತ್ನದ ಹೊರತಾಗಿಯೂ, ವಿಧಿಯಾಟ ಬೇರೆಯೇ ಇತ್ತು. ಪುಟ್ಟ ಕಂದ ಆರ್ಯನ್ ಮಣ್ಣಿನ ರಾಶಿಯಲ್ಲೇ ಉಸಿರುಚೆಲ್ಲಿದ್ದರೆ, ಮತ್ತೊಬ್ಬ ಕಂದ ಆರುಷನ್ನು ಗಂಭೀರ ಸ್ಥಿತಿಯಲ್ಲಿ ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟನು. ಈ ದೃಶ್ಯ ನೆರೆದವರ ಕಣ್ಣಂಚಲ್ಲಿ ನೀರು ತರಿಸಿತು.

ದುರಂತದ ನಡುವೆ ಸಣ್ಣ ಸಮಾಧಾನ:

ಈ ಘೋರ ದುರಂತದ ನಡುವೆಯೂ. ಇಬ್ಬರು ಮಕ್ಕಳ ತಾಯಿ ಅಶ್ವಿನಿಯವರನ್ನು ಜೀವಂತವಾಗಿ ರಕ್ಷಿಸಿ. ಆಸ್ಪತ್ರೆಗೆ ದಾಖಲಿಸಿರುವುದು ತುಸು ಸಮಾಧಾನ ತಂದಿದೆ. ಅವರು ಸದ್ಯ ಗಂಭೀರ ಸ್ಥಿತಿಯಲ್ಲಿದ್ದು. ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕಚೇರಿಯ ಎಡಿಸಿ ಸಂತೋಷ್ ಕುಮಾರ್, ತಹಶೀಲ್ದಾರ್ ಪುಟ್ಟರಾಜು, ಡಿಸಿಪಿ ಸಿದ್ದಾರ್ಥ್ ಫೋಯಲ್, ಪ್ರಾಕೃತಿಕ ವಿಕೋಪ ನಿರ್ವಹಣಾಧಿಕಾರಿ ವಿಜಯ್.ಕಾರ್ಯನಿರ್ವಹಣಾಧಿಕಾರಿ ಗುರುದತ್‌, ಮಂಜನಾಡಿ ಪಂಚಾಯತ್‌ ಅಧ್ಯಕ್ಷೆ ಸರೋಜಿನಿ, ನರಿಂಗಾನ ಪಂಚಾಯತ್‌ ಅಧ್ಯಕ್ಷ ನವಾಝ್ ನರಿಂಗಾನ ಹಾಗೂ ಸ್ಥಳೀಯ ಮುಖಂಡರಾದ ಐವನ್ ಡಿಸೋಜ, ಸತೀಶ್‌ ಕುಂಪಲ, ಸಂತೋಷ್‌ ಬೋಳಿಯಾರ್, ರಮೇಶ್‌ ಶೆಟ್ಟಿ ಬೋಳಿಯಾರ್. ಎನ್.ಎಸ್. ಕರೀಂ ಮೊದಲಾದವರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರುಈ ದುರ್ಘಟನೆಯು ಮಳೆಗಾಲದಲ್ಲಿ ಗುಡ್ಡ ಪ್ರದೇಶಗಳ ಸಮೀಪ ವಾಸಿಸುವವರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

[t4b-ticker]
error: Content is protected !!