ಚಿನ್ನಸ್ವಾಮಿಯಲ್ಲಿ ನಡೆದ ರೋಚಕ ಪಂದ್ಯದಲ್ಲಿ RCB ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ RCB ಮತ್ತೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಭರ್ಜರಿ ಆರಂಭ ಪಡೆದು 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಸಾಯಿ ಸುದರ್ಶನ್ ಅದ್ಭುತ ಶತಕ ಸಿಡಿಸಿ ಗಮನ ಸೆಳೆದರು. ಶುಭ್ಮನ್ ಗಿಲ್ (32) ಜೊತೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಿರ್ಮಿಸಿದರೂ ಮಧ್ಯಮ ಕ್ರಮಾಂಕದಲ್ಲಿ ರನ್ ವೇಗ ಸ್ವಲ್ಪ ಕುಸಿಯಿತು. ಜೋಸ್ ಬಟ್ಲರ್ 25 ರನ್‌ಗಳಿಗೆ ಔಟಾದರು. ಕೊನೆಯಲ್ಲಿ ಜೇಸನ್ ಹೋಲ್ಡರ್ 23 ರನ್‌ಗಳ ನೆರವಿನಿಂದ GT ಬೃಹತ್ ಮೊತ್ತ ತಲುಪಿತು. RCB ಪರ ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ ಮತ್ತು ಹ್ಯಾಜಲ್‌ವುಡ್ ತಲಾ ಒಂದು ವಿಕೆಟ್ ಪಡೆದರು.
206 ರನ್ ಗುರಿ ಬೆನ್ನಟ್ಟಿದ RCB ಆರಂಭದಲ್ಲೇ ಜಾಕೋಬ್ ಬೆಥೆಲ್ (14) ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಪಂದ್ಯದ ಗತಿಯನ್ನೇ ಬದಲಿಸಿದರು. ಸಿರಾಜ್ ಬೌಲಿಂಗ್‌ನಲ್ಲಿ ಕೊಹ್ಲಿಗೆ ದೊರೆತ ಜೀವದಾನವನ್ನು ಇಬ್ಬರೂ ಸದುಪಯೋಗ ಮಾಡಿಕೊಂಡರು. ಕೇವಲ ಕೆಲವೇ ಓವರ್‌ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ರನ್ ವೇಗವನ್ನು ಹೆಚ್ಚಿಸಿದರು.ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರೆ, ಕೊಹ್ಲಿ ಸಂಯಮದ ಆಟದೊಂದಿಗೆ ಇನ್ನಿಂಗ್ಸ್ ಕಟ್ಟಿದರು. ಇಬ್ಬರೂ ಸೇರಿ 47 ಎಸೆತಗಳಲ್ಲಿ ಶತಕದ ಜೊತೆಯಾಟ ನಿರ್ಮಿಸಿ GTಗೆ ದೊಡ್ಡ ಆಘಾತ ನೀಡಿದರು. ಕೊನೆಯಲ್ಲಿ ಕೃನಾಲ್ ಪಾಂಡ್ಯ ಅಜೇಯ 23 ರನ್‌ಗಳ ನೆರವಿನಿಂದ RCB 19ನೇ ಓವರ್‌ನಲ್ಲೇ ಗುರಿ ಮುಟ್ಟಿತು. ಕೊಹ್ಲಿ ಶತಕ ತಪ್ಪಿಸಿಕೊಂಡರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.











































