ಬಿರುಬಿಸಿಲಿಂದ ಕಂಗೆಟ್ಟ ಕರಾವಳಿ ಜಿಲ್ಲೆ ಜನರಿಗೆ ಮಳೆಯ ಮುನ್ಸೂಚನೆ: ಏ.28 ರಿಂದ ಕರ್ನಾಟಕದಲ್ಲೆಡೆ ಮಳೆ ಪ್ರಮಾಣ ಹೆಚ್ಚಳ

Picture of Savistara

Savistara

Bureau Report

ಬೆಂಗಳೂರು: ಸಂಜೆ ವೇಳೆಗೆ ಬಾಗಲಕೋಟೆ, ವಿಜಯಪುರ ಹಾಗೂ ಕೊಡಗಿಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಸಿ.ಎಸ್. ಪಾಟೀಲ್ ವಿಜಯ ಕರ್ನಾಟಕದ ಜೊತೆ ಮಾತನಾಡಿದ್ದು, ಮುಂದಿನ ಒಂದು ವಾರ ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಕೂಡಿದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸುಮಾರು 0.9 ಕಿಲೋಮೀಟರ್ ಎತ್ತರದಲ್ಲಿ ಟ್ರಫ್ (Trough) ನಿರ್ಮಾಣವಾಗಿರುವುದರಿಂದ ಮಳೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಏಪ್ರಿಲ್ 26 ರಿಂದ ಮೇ 2 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಭಾವ ಹೆಚ್ಚಿರಲಿದೆ.

ಮಳೆ ಪ್ರಮಾಣದಲ್ಲಿ ಹೆಚ್ಚಳ

ಏಪ್ರಿಲ್ 28, 29 ಮತ್ತು 30 ರಂದು ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯ ಜೊತೆಗೆ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ 1 ಸೆ.ಮೀ ಮತ್ತು ಶಿವಮೊಗ್ಗ ಜಿಲ್ಲೆಯ ಜಾಗರದಲ್ಲಿ 4 ಸೆ.ಮೀ ನಷ್ಟು ಮಳೆ ದಾಖಲಾಗಿದೆ ಎಂದರು.

ತಾಪಮಾನ ಏರಿಕೆ

ರಾಜ್ಯದಲ್ಲಿ ತಾಪಮಾನ ಏರಿಕೆಯೂ ಮುಂದುವರಿದಿದ್ದು, ಕೊಪ್ಪಳದಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ 36 ಡಿಗ್ರಿ ಮತ್ತು ಮಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.

ಬೆಂಗಳೂರಲ್ಲಿ 29 ರಿಂದ ಮಳೆ

ರಾಜಧಾನಿ ಬೆಂಗಳೂರಿನ ಮಾಹಿತಿ ನೀಡಿರುವ ಸಿ.ಎಸ್. ಪಾಟೀಲ್ ಅವರು, ಏಪ್ರಿಲ್ 29 ರಿಂದ ಮೇ 2 ರವರೆಗೆ ನಗರದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮುಂದಿನ ಒಂದು ವಾರದವರೆಗೆ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

[t4b-ticker]
error: Content is protected !!