ಕೊಟ್ಟಾಯಂ: ದೇವಸ್ಥಾನದ ಉತ್ಸವವೊಂದರಲ್ಲಿ ಭಜನಾ ತಂಡವೊಂದು ಕ್ರೈಸ್ತ ಭಕ್ತಿಗೀತೆ ಹಾಡಿರುವುದು ಈಗ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿದೆ. ಕೇರಳದ ಕೊಟ್ಟಾಯಂನ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಿಡಿ ಹಚ್ಚಿದೆ.
ಘಟನೆ ಏನು?
ದೇವಸ್ಥಾನದ ಕಾರ್ಯಕ್ರಮದಲ್ಲಿ ‘ನಂದಗೋವಿಂದಂ’ ಎಂಬ ಹೆಸರಾಂತ ಭಜನಾ ತಂಡ ಪ್ರದರ್ಶನ ನೀಡುತ್ತಿತ್ತು. ಈ ವೇಳೆ ಗಾಯಕ ನವೀನ್ ಮೋಹನ್ ಅವರು, ದೇವಸ್ಥಾನದ ಕಾರ್ಯಕ್ರಮಕ್ಕೆ ಸ್ಥಳೀಯ ಚರ್ಚ್ ನೀಡಿದ ಸಹಕಾರಕ್ಕೆ (ಪಾರ್ಕಿಂಗ್ ಮತ್ತು ಇತರೆ ಸೌಲಭ್ಯ) ಕೃತಜ್ಞತೆ ಸಲ್ಲಿಸಲು “ಈ ಪರದೇವನಹೋ…” ಎಂಬ ಕ್ರೈಸ್ತ ಗೀತೆಯನ್ನು ಹಾಡಿದ್ದಾರೆ. ಇದು ಸೌಹಾರ್ದತೆಯ ಸಂಕೇತ ಎಂದು ತಂಡ ಹೇಳಿಕೊಂಡಿದೆ.
ಹಿಂದೂ ಸಂಘಟನೆಗಳ ಆಕ್ರೋಶ:
ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ನಾಯಕಿ ಕೆ.ಪಿ. ಶಶಿಕಲಾ ಅವರು ಮಾರ್ಮಿಕವಾಗಿ ಟೀಕಿಸಿದ್ದು ಹೀಗೆ:”ಚಿಕನ್ ಮಸಾಲಾ ರುಚಿಯಾಗಿರಬಹುದು, ಆದರೆ ಅದನ್ನು ಪಾಯಸಕ್ಕೆ ಹಾಕಬೇಡಿ. ಧಾರ್ಮಿಕ ಸಂಪ್ರದಾಯಗಳನ್ನು ಈ ರೀತಿ ಬೆರೆಸಬೇಡಿ.”
ಭಜನಾ ತಂಡ ಹಾಗೂ ಸಮಿತಿಯ ಸಮರ್ಥನೆ:
ವಿವಾದ ಬೆಳೆಯುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಭಜನಾ ತಂಡ, “ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನಮಗಿರಲಿಲ್ಲ. ದೇವಸ್ಥಾನದ ಪುನರ್ನಿರ್ಮಾಣಕ್ಕೆ ಎಲ್ಲ ಧರ್ಮದವರು ಸಹಾಯ ಮಾಡುತ್ತಿದ್ದಾರೆ, ಹೀಗಾಗಿ ಸಂಘಟಕರ ಅನುಮತಿ ಪಡೆದೇ ಹಾಡಿದ್ದೇವೆ” ಎಂದಿದೆ. ದೇವಸ್ಥಾನ ಸಮಿತಿಯು ಕೂಡ ತಂಡದ ಬೆಂಬಲಕ್ಕೆ ನಿಂತಿದ್ದು, ಇದು ಇಲ್ಲಿನ ವಾಡಿಕೆ ಎಂದು ಸಮರ್ಥಿಸಿಕೊಂಡಿದೆ.
ಸಾರ್ವಜನಿಕ ಚರ್ಚೆ:
ಒಂದೆಡೆ ಇದು ‘ಧಾರ್ಮಿಕ ಸೌಹಾರ್ದತೆ’ ಎಂದು ಕೆಲವರು ಬೆಂಬಲಿಸುತ್ತಿದ್ದರೆ, ಇನ್ನೊಂದೆಡೆ ದೇವಸ್ಥಾನದ ಆವರಣದಲ್ಲಿ ಭಜನೆಯ ಹೆಸರಲ್ಲಿ ಅನ್ಯ ಧರ್ಮದ ಗೀತೆಗಳು ಬೇಡ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.












































