> ನವೀನ್ ಸೂರಿಂಜೆ ಅವರ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್’ ಕೃತಿ ಬಿಡುಗಡೆ
ಮಂಗಳೂರು, ಎ.25: ಕರ್ನಾಟಕ, ತಮಿಳುನಾಡು, ಕೇರಳದ ಬಹುಭಾಗವನ್ನು ಆಳ್ವಿಕೆ ಮಾಡಿದ್ದ ಮತ್ತು ಕೇವಲ 48 ವರ್ಷಗಳ ಕಾಲ ಬದುಕಿದ್ದ ಟಿಪ್ಪು ಸುಲ್ತಾನ್ ಅತ್ಯುತ್ತಮ ಆಡಳಿತಗಾರನಾಗಿದ್ದ ಯಾವ ತಂತ್ರಜ್ಞಾನವೂ ಇಲ್ಲದ ಆ ಕಾಲದಲ್ಲಿ ಫ್ರಾನ್ಸ್ ಜೊತೆ ಸಂಪರ್ಕ ಸಾಧಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಅಪ್ರತಿಮನೂ ಆಗಿದ್ದ ಟಿಪ್ಪು ಆಳ್ವಿಕೆಯ ಕಾಲದಲ್ಲಿ ಕರ್ನಾಟಕದ ಹಿರಿಮೆ ಎಲ್ಲೆಡೆ ಪಸರಿಸಿತ್ತು. ಹಾಗಾಗಿ ನಮಗೆ ಇಂದು ಟಿಪ್ಪು ಸುಲ್ತಾನ್ ಕಾಲದ ಆ ಕರ್ನಾಟಕ ಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ನವ ಕರ್ನಾಟಕ ಪ್ರಕಟಿಸಿದ ಪತ್ರಕರ್ತ ನವೀನ್ ಸೂರಿಂಜೆ ಬರೆದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕೃತಿಯನ್ನು ಅಭಿಮತ ಮಂಗಳೂರು ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಪತ್ರಕರ್ತ ಮಾತ್ರವಲ್ಲ, ಹೋರಾಟಗಾರರೂ ಆಗಿರುವ ನವೀನ್ ಸೂರಿಂಜೆ ಬರೆದಿರುವ ಈ ಕೃತಿ ವಿಭಿನ್ನವಾಗಿದೆ. ಇದು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್‌ಗೆ ಸೀಮಿತವಾದುದಲ್ಲ. ಇತಿಹಾಸವನ್ನು ಒಳಗಣ್ಣಿನಿಂದ ನೋಡುವ ಪ್ರಯತ್ನ ಈ ಕೃತಿಯ ಮೂಲಕ ಆಗಿದೆ ಎಂದ ದಿನೇಶ್ ಅಮೀನ್ ಮಟ್ಟು, ಸಂಘಪರಿವಾರವು ಟಿಪ್ಪುವನ್ನು ಮತೀಯ ಕಾರಣಕ್ಕಾಗಿ ಟೀಕಿಸುತ್ತಿದೆ. ಬಿಜೆಪಿ ರಾಜಕಾರಣದ ಭಾಗವಾಗಿ ಟಿಪ್ಪುವನ್ನು ಅವಹೇಳಿಸುತ್ತಿದೆ. ಇದೀಗ ಸಂಘ ಪರಿವಾರ-ಬಿಜೆಪಿಗರು ಬಸವಣ್ಣ, ಅಂಬೇಡ್ಕರ್, ನಾರಾಯಣಗುರು, ಕೋಟಿಚೆನ್ನಯ, ಕುವೆಂಪು ಮತ್ತಿತರರನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಹಾಗಾಗಿ ಯಾವ ಕಾರಣಕ್ಕೂ ಇಂತಹ ದಾರ್ಶನಿಕರನ್ನು ಹೈಜಾಕ್ ಮಾಡಲು, ರಾಜಕೀಯ ಅಸ್ತವಾಗಿಸಲು ಅವಕಾಶ ನೀಡಬಾರದು ಎಂದರು.
ಟಿಪ್ಪು ಸುಲ್ತಾನ್ ತನ್ನ ಆಡಳಿತದ ಅವಧಿಯಲ್ಲಿ ಮುಸ್ಲಿಮರಿಗೆ ಕೊಡುಗೆ ನೀಡಿದ್ದಕ್ಕಿಂತಲೂ ಹಿಂದೂಗಳಿಗೆ ಅಪಾರ ಕೊಡುಗೆ ನೀಡಿದ್ದ. ಆದರೂ ಸಂಘಪರಿವಾರದ ರಾಜಕಾರಣವು ಟಿಪ್ಪುವನ್ನು ಕೆಟ್ಟದಾಗಿ ಚಿತ್ರಿಸುತ್ತಿವೆ. ಆತನಿಂದ ನೆರವು ಪಡೆದ ಸಮಾಜದ ಜನರು ಕೂಡ ಟಿಪ್ಪು ಕೋಮುವಾದಿ ಅಲ್ಲ ಜನಪರ ಆಡಳಿತಗಾರ ಮತ್ತು ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಎಂದು ಹೇಳಲು ಹಿಂಜರಿಯುತ್ತಿರುವುದು ವಿಪರ್ಯಾಸ ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ ಮತ್ತು ಬ್ರಿಟಿಷರ ಪರವಾಗಿ ಸದಾ ಕೆಲಸ ಮಾಡಿದವರು ಟಿಪ್ಪುವನ್ನು ಟೀಕಿಸುತ್ತಿದ್ದಾರೆ. ಈ ಬಲಪಂಥೀಯರು ರಾಜಕಾರಣಿಗಳನ್ನು ಹುಟ್ಟುಹಾಕಬಹುದು. ಆದರೆ ಇತಿಹಾಸಕಾರರನ್ನು ಹುಟ್ಟುಹಾಕಲು ಎಂದಿಗೂ ಸಾಧ್ಯವಿಲ್ಲ. ಆದರೂ ಸಂಘಪರಿವಾರ ಮತ್ತು ಬಿಜೆಪಿಗರು ಆಡಳಿತಕ್ಕೆ ಬಂದಾಗಲೆಲ್ಲಾ ವಿದ್ವಾಂಸರು, ಚಿಂತಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಾರೆ. ಇತಿಹಾಸ ತಿರುಚುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ನಾವು ಎಂದಿಗೂ ಅವಕಾಶ ಮಾಡಿಕೊಡಬಾರದು. ಇದರ ವಿರುದ್ಧ ಪ್ರಬಲ ಹೋರಾಟ ಮಾಡಬೇಕು.
ಸಾಮರಸ್ಯ ಬಯಸುವವರು, ಜಾತ್ಯತೀತರು ಸಂಘಟಿತರಾಗಿ ಸಮಾಜ ಕಟ್ಟಬೇಕು. ಆ ಮೂಲಕ ಟಿಪ್ಪುಕಾಲದ ಕರ್ನಾಟಕವನ್ನು ಮರಳಿ ಪಡೆಯಬೇಕು ಎಂದು ದಿನೇಶ್ ಅಮೀನ್ ಮಟ್ಟು ಆಶಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ. ಸೈಯದ್ ಬರ್ಕತ್ ಕೆ.ಎ. ಮಾತನಾಡಿ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕೇವಲ 38 ವರ್ಷಗಳ ಕಾಲ ಮಾತ್ರ ಆಡಳಿತ ನಡೆಸಿದ್ದರು. ಈ ಅವಧಿಯಲ್ಲಿ ಅವರು ಎಂದೂ ಮತೀಯ ಕಾರಣಕ್ಕಾಗಿ ದಾಳಿ ಮಾಡಿಲ್ಲ. ರಾಜತಾಂತ್ರಿಕದ ಭಾಗವಾಗಿ ಕೆಲವೊಮ್ಮೆ ಆಕ್ರಮಣಕಾರಿಯಾಗಿ ವರ್ತಿಸಿರಬಹುದು. ಉಳುವವನೆ ಭೂ ಒಡೆಯ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದ ಟಿಪ್ಪು ಸುಲ್ತಾನ್‌ನ ಇತಿಹಾಸವು ವರ್ತಮಾನದ ಭಾಗವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳ ಮೂಲಕ ಗಮನ ಸೆಳೆದ ಕಾರಣದಿಂದಲೇ ಸಂವಿಧಾನದ ಮೂಲ ಪ್ರತಿಯಲ್ಲಿ ಟಿಪ್ಪುಸುಲ್ತಾನ್‌ರ ಚಿತ್ರವನ್ನು ಕಾಣಲು ನಮಗೆ ಸಾಧ್ಯವಾಗಿದೆ. ದೇಶದ ಸಂವಿಧಾನವನ್ನು ರೂಪಿಸಿದ 289 ಮಂದಿ ತಜ್ಞರು ಕೂಡ ಚಿತ್ರ ಲಗತ್ತಿಸಲಾದ ಪ್ರತಿಗೆ ಸಹಿ ಹಾಕಿದ್ದಾರೆ. ಟಿಪ್ಪು ಸುಲ್ತಾನ್‌ರ ಹಿರಿಮೆಗೆ ಇದೇ ಬಹುದೊಡ್ಡ ಸಾಕ್ಷಿಯಾಗಿದೆ ಎಂದರು.
ಲೇಖಕ, ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ಕವಿ ವಿಲ್ಸನ್ ಕಟೀಲ್ ಮಾತನಾಡಿದರು. ಕೃತಿಯ ಲೇಖಕ ನವೀನ್ ಸೂರಿಂಜೆ ಉಪಸ್ಥಿತರಿದ್ದರು.











































