ಸುತ್ತಲೂ ಸಮುದ್ರವೇ ಇದ್ದರೂ ಲಂಕಾದಲ್ಲೀಗ ಉಪ್ಪಿಗೇ ಬರ!

Picture of Savistara

Savistara

Bureau Report

ಮಳೆಯಿಂದ ಉಪ್ಪು ಉತ್ಪಾದನೆ ಕುಸಿತ, ಕೆ.ಜಿ.ಗೆ 145 ರೂ., ಉಪ್ಪು ಎರವಲು ನೀಡಿ ಶ್ರೀಲಂಕಾವನ್ನು ಕಾಪಾಡಿದ ಭಾರತ

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಹೊಸ ಬಿಕ್ಕಟ್ಟೋಂದು ಜನರನ್ನು ಹೈರಾಣಾಗಿಸಿದೆ. ಹಣಕಾಸಿನ ಕೊರತೆಯಿಂದ ದಿವಾಳಿಯಾದ ರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ದತೆ ಉಂಟಾಗಿತ್ತು. ಬಳಿಕ ಆಹಾರ, ಔಷಧಗಳ ಕೊರತೆಯುಂಟಾಗಿತ್ತು. ಆದರೆ ಶ್ರೀಲಂಕಾ ಈಗ ಉಪ್ಪಿನ ಕೊರತೆಯನ್ನು ಎದುರಿಸುತ್ತಿದೆ! ಸುತ್ತಲೂ ಸಮುದ್ರವನ್ನೇ ಹೊಂದಿರುವ ಶ್ರೀಲಂಕಾದಲ್ಲಿ ಉಪ್ಪು ಸಿಗುತ್ತಿಲ್ಲ ಎಂಬುದನ್ನು ನಂಬಲು ಕಷ್ಟವಾದರೂ ಇದು ನೈಜ ಸಂಗತಿ. ಇತ್ತೀಚಿನ ದಿನಗಳಲ್ಲಿ ಲಂಕಾದಲ್ಲಿ ಉಪ್ಪಿಗೆ ಭಾರೀ ಕೊರತೆ ಉಂಟಾಗಿದ್ದು, ಉಪ್ಪು ಖರೀದಿಸಲು ಜನರು ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಆ ದೇಶಕ್ಕೊದಗಿದೆ. ಇಂತಹ ದುಸ್ಥಿತಿ ಯಲ್ಲಿರುವ ನೆರೆರಾಷ್ಟ್ರಕ್ಕೆ ಮಾನವೀಯ ನೆಲೆಯಿಂದ ಭಾರತ ಉಪ್ಪನ್ನು ರಫ್ತು ಮಾಡಿದೆ. ಆದರೆ ದ್ವೀಪರಾಷ್ಟ್ರವೊಂದು ಉಪ್ಪನ್ನು ಇನ್ನೊಂದು ರಾಷ್ಟ್ರದಿಂದ ಖರೀದಿಸುವಂತಹ ಪರಿಸ್ಥಿತಿ ಏಕಾಯ್ತು? ಉಪ್ಪು ಕೊರತೆಗೆ ಕಾರಣವೇನು? ಭಾರತ ಹೇಗೆ ಸಹಾಯ ಮಾಡಿದೆ ಇನ್ನಿತರ ಸಂಬಂಧಿತ ವಿಚಾರಗಳು ಇಲ್ಲಿವೆ.

ಉಪ್ಪು ಉತ್ಪಾದನೆ ಮಾಡಲು ಅಡ್ಡಿಯಾಗುತ್ತಿರುವ ಅಕಾಲಿಕ ಮಳೆ ಸಮಸ್ಯೆ

ಶ್ರೀಲಂಕಾದಲ್ಲಿ ಉಪ್ಪಿನ ಕೊರತೆಯುಂಟಾಗಲು ಪ್ರಮುಖ ಕಾರಣ ಉತ್ಪಾದನೆ ಸಂಕಷ್ಟದಿಂದಾಗಿ. ಸಾಮಾನ್ಯವಾಗಿ ಈ ದೇಶದಲ್ಲಿ ಉಪ್ಪು ತಯಾರಿಕೆಯು ಮಾರ್ಚ್-ಎಪ್ರಿಲ್ ಹಾಗೂ ಅಕ್ಟೋಬ‌ರ್-ನವೆಂಬರ್‌ನಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಮಾರ್ಚ್‌ನಿಂದಲೂ ಶ್ರೀಲಂಕಾದ ಬಹುತೇಕ ಭಾಗಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಇದು ಉಪ್ಪು ತಯಾರಿಕೆಗೆ ಸಂಕಷ್ಟ ತಂದೊಡ್ಡಿದೆ. ಜತೆಗೆ ಈಗಾಗಲೇ ತಯಾರಿಸಿದ್ದ 15 ಟನ್ ಉಪ್ಪು ಸಹ ಈ ಮಳೆಯಿಂದಾಗಿ ನಾಶವಾಗಿದೆ.ಮಳೆ ಮುಂದುವರಿದಿರುವ ಕಾರಣ, ಸೂರ್ಯನ ಬೆಳಕೇ ಸಿಗದೆ ಪ್ರಸ್ತುತ ಕೆಲವು ತಿಂಗಳುಗಳಿಂದ ಉಪ್ಪಿನ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿದೆ. ಕೆಲವೆಡೆ ಮಳೆ ಕೊಂಚ ಬಿಡುವು ಕೊಟ್ಟರೂ, ಉಪ್ಪು ತಯಾರಿಕೆಗೆ ಬೇಕಾದಷ್ಟು ಪ್ರಮಾಣದಲ್ಲಿ ಬಿಸಿಲು ಬಾರದೇ ಸಂಕಷ್ಟ ಹೆಚ್ಚಾಗಿದೆ. ಮಾರ್ಚ್‌ನಲ್ಲಿ ಎದುರಾದ ಅಕಾಲಿಕ ಮಳೆ ಬಳಿಕ ಮೇನಲ್ಲಿ ಉತ್ಪಾದನೆ ಮಾಡುವ ಬಗ್ಗೆ ಯೋಚಿಸಿದ್ದ ದೇಶಕ್ಕೆ ಅಲ್ಲೂ ನಿರೀಕ್ಷೆ ಹುಸಿಯಾಯಿತು. ಮೇನಲ್ಲೂ ಮಳೆ ಮುಂದುವರಿದು ಈಗ ಲಂಕಾಗೆ ಉಪ್ಪು ಆಮದು ಮಾಡಿಕೊಳ್ಳುವುದು ಬಿಟ್ಟರೇ ಬೇರೆ ಆಯ್ಕೆಯಿಲ್ಲದಾಗಿದೆ.

ದೇಶೀಯವಾಗಿ ಉಪ್ಪು ಉತ್ಪಾದನೆ ಕುಂಠಿತ

ಹಂಬಂಟೋಟಾ, ಎಲಿಫೆಂಟ್ ಪಾಸ್, ಪುಟ್ಟಲಾಮ್, ಕುರುಂಚತೀವು ನಗರ ಗಳಲ್ಲಿ ದೇಶದ ಪ್ರಮುಖ ಉಪ್ಪು ತಯಾರಿಕಾ ಘಟಕಗಳಿವೆ. ಆದರೆ ಇಷ್ಟೂ ನಗರಗಳು ಅಕಾಲಿಕ ಮಳೆಗೆ ತುತ್ತಾಗಿ ಉಪ್ಪು ತಯಾರಿಸಲು ಸಾಧ್ಯವಾಗಿಲ್ಲ. ದೇಶದ ಶೇ.60ರಷ್ಟು ಉಪ್ಪಿನ ಪೂರೈಕೆಯನ್ನು ಪುಟ್ಟಲಾಮ್ ಒಂದರಿಂದಲೇ ಒದಗಿಸ ಲಾಗುತ್ತದೆ. ಇನ್ನು ಎಲಿಫೆಂಟ್ ಪಾಸ್ ಹಾಗೂ ಕುರುಂಚತೀವು ಘಟಕಗಳಲ್ಲಿ 1,990ಕ್ಕೂ ಮುನ್ನ ಸುಮಾರು 85,000 ಟನ್ ವಾರ್ಷಿಕವಾಗಿ ತಯಾರಿಸುತ್ತಿದ್ದವು. ಆದರೆ ಬಳಿಕ ಈ ಘಟಕಗಳನ್ನು ಎಲ್‌ಟಿಟಿಇ ಸಂಘಟನೆ ವಶಕ್ಕೆ ಪಡೆದು ಇಲ್ಲಿ ತಯಾರಿಕೆ ಸ್ಥಗಿತವಾಯಿತು.

ಮುಂದಿನ ದಿನಗಳಲ್ಲಿ ಉತ್ಪಾದನೆ ಪುನರಾರಂಭವಾದರೂ ಹಿಂದಿನಷ್ಟು ಪ್ರಮಾಣದಲ್ಲಿ ತಯಾರಾಗುತ್ತಿಲ್ಲ. ಪ್ರಸ್ತುತ ಎಲಿಫೆಂಟ್ ಪಾಸ್‌ನಲ್ಲಿ 20,000 ಟನ್‌ ಉಪ್ಪು ವಾರ್ಷಿಕವಾಗಿ ತಯಾರಾಗುತ್ತದೆ. ಶ್ರೀಲಂಕಾದಲ್ಲಿ ವಾರ್ಷಿಕ ಉಪ್ಪಿನ ಬೇಡಿಕೆ 1,80,000 ಟನ್ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಎಲ್ಲ ಘಟಕಗಳೂ ಸೇರಿ 1,35,000 ಟನ್ ನಿಂದ 1,40,000 ಟನ್ ಉಪ್ಪು ಪೂರೈಸುತ್ತಿದೆ. ಆದರೆ ಪ್ರಸ್ತುತ 3 ತಿಂಗಳಿನಿಂದ ಉಂಟಾದ ಮಳೆಯಿಂದ ಅದೂ ಕ್ಷೀಣಗೊಂಡು ಬೇಡಿಕೆಯ ಶೇ.23ರಷ್ಟು ಉತ್ಪಾದನೆಯನ್ನು ಮಾಡಲಷ್ಟೇ ದೇಶಕ್ಕೆ ಸಾಧ್ಯವಾಗುತ್ತಿದೆ. ಈ ಮೊದಲು ಶ್ರೀಲಂಕಾವು ಕೊರತೆ ಬೀಳುತ್ತಿದ್ದ ಉಪ್ಪನ್ನು ಭಾರತ, ಥಾಯ್ಲೆಂಡ್, ಪಾಕಿಸ್ಥಾನ ಹಾಗೂ ಪೋಲೆಂಡ್‌ಗಳಿಂದ ಆಮದು ಮಾಡಿಕೊಳ್ಳುತ್ತಿತ್ತು.

ಶ್ರೀಲಂಕಾದಲ್ಲಿ ಉಪ್ಪು ಬೇಡಿಕೆ-ಪೂರೈಕೆ ಅಸಮತೋಲನದಿಂದ ದುಪ್ಪಟ್ಟು ದರ

ದೇಶದಲ್ಲಿನ ಉಪ್ಪಿನ ಬೇಡಿಕೆಗೆ ತಕ್ಕಂತೆ ಅಲ್ಲಿನ ಸರಕಾರ ಉಪ್ಪು ಪೂರೈಕೆ ಮಾಡಲಾಗದೆ, ಇತರೆ ರಾಷ್ಟ್ರಗಳಿಂದ ಉಪ್ಪು ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ.ಮೊದಲೇ ಹಣದುಬ್ಬರ, ಆರ್ಥಿಕ ಬಿಕ್ಕಟ್ಟುಎದುರಿಸುತ್ತಿರುವ ರಾಷ್ಟ್ರ ಬೇರೆಡೆಯಿಂದ ಖರೀದಿಸಿ ತಂದಉತ್ಪನ್ನವನ್ನು ಕಡಿಮೆ ಬೆಲೆಗೆ ನೀಡುವುದು ಕಷ್ಟಸಾಧ್ಯ.ಹಾಗಾಗಿ ಶ್ರೀಲಂಕಾದಲ್ಲಿ ಉಪ್ಪಿನ ಕೊರತೆ ಹೆಚ್ಚಾಗಿದೆ.ಬೇಡಿಕೆ ಹೆಚ್ಚಿದಷ್ಟೇ ಬೆಲೆಯೂ ಹೆಚ್ಚುತ್ತಿದ್ದು, ಈ ಹಿಂದೆ 420 ರೂ.ಗೆ ದೊರೆಯುತ್ತಿದ್ದ 50 ಕೆ.ಜಿ. ಉಪ್ಪಿನ ಚೀಲ ಈಗ 2,000 ರೂ. ಸನಿಹ ತಲುಪಿದೆ. ಪ್ರಸ್ತುತ ದೇಶದಲ್ಲಿ ಒಂದು ಕೆ.ಜಿ. ಉಪ್ಪು 145 ರೂ.ಗೆ ಬಿಕರಿಯಾಗುತ್ತಿದೆ. ಅದರಲ್ಲೂ ಇಷ್ಟು ಹಣ ಕೊಟ್ಟರೂ ದಿನಗಟ್ಟಲೇ ಹುಡುಕಾಡಿ ಇತರೆ ನಗರಗಳಿಂದ ಉಪ್ಪನ್ನು ತರಿಸಿಕೊಳ್ಳುವಂತಹ ಪರಿಸ್ಥಿತಿ ಲಂಕಾದಲ್ಲಿ ಇದೆ.

ಆರ್ಥಿಕ ಬಿಕ್ಕಟ್ಟು ರಾಜಕೀಯ ಅಸ್ಥಿರತೆಗೆ ಸಿಲುಕಿ ತತ್ತರಿಸಿದ್ದ ಲಂಕಾ

2022-23ರ ಅವಧಿಯಲ್ಲಿ ಶ್ರೀಲಂಕಾದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟು ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಇತಿ ಮಿತಿಯಿಲ್ಲದ ಉಚಿತ ಕೊಡುಗೆಗಳಿಂದ ದೇಶದ ಬೊಕ್ಕಸ ಬರಿದಾಗಿಸಿದ್ದ ಅಂದಿನ ಸರಕಾರದ ವಿರುದ್ಧ ಬೀದಿಗಿಳಿದಿದ್ದ ಜನರು ಸರಕಾರ ಪತನವಾಗುವಂತೆ ಮಾಡಿದ್ದರು. ಅದಾದ ಬಳಿಕ ದೇಶವು ಇನ್ನಿಲ್ಲದಂತೆ ಸಂಕಷ್ಟಗಳನ್ನು ಎದುರಿಸಿದ್ದು, ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ದೇಶದ 60 ಲಕ್ಷ ಅಂದರೆ ದೇಶದ ಜನಸಂಖ್ಯೆಯ 3ನೇ ಒಂದು ಭಾಗದಷ್ಟು ಜನ ಆಹಾರದ ಅಭದ್ರತೆಗೆ ತುತ್ತಾದರು. ಈ ಸಂದರ್ಭದಲ್ಲೂ ಭಾರತ ಶ್ರೀಲಂಕಾ ಜತೆಗಿದ್ದು ನೆರವಾಗಿದೆ.

ಶ್ರೀಲಂಕಾಗೆ ಭಾರತದಿಂದ 3,050 ಟನ್ ಉಪ್ಪು ರಫ್ತು

ಈ ಹಿಂದಿನಿಂದಲೂ ಶ್ರೀಲಂಕಾ ಜತೆ ಉತ್ತಮ ಬಾಂಧವ್ಯ ಹೊಂದಿರುವ ಭಾರತ, ಆ ದೇಶದ ಎಲ್ಲ ಕಷ್ಟಕ್ಕೂ ನೆರವಾಗಿದೆ. ಹಲವು ವರ್ಷಗಳಿಂದ ಶ್ರೀಲಂಕನ್ನರ ನೆರವಿಗಿರುವ ಭಾರತ, ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಜತೆಯಾಗಿತ್ತು. ಆಹಾರ ಕೊರತೆ ಉಂಟಾದಾಗ, ಔಷಧಗಳ ಕೊರತೆಯುಂಟಾದಾಗಲೂ ಭಾರತ ಶ್ರೀಲಂಕಾಗೆ ಸಹಾಯಹಸ್ತ ಚಾಚಿದೆ. ಅದೇ ರೀತಿ ಈಗಲೂ ಶ್ರೀಲಂಕಾಗೆ ಸಹಾಯ ಮಾಡುತ್ತಿರುವ ಭಾರತ, 3,050 ಟನ್‌ ಉಪ್ಪನ್ನು ಲಂಕಾಗೆ ರಫ್ತು ಮಾಡಿದೆ.ಈ ಪೈಕಿ 2,800 ಟನ್ ಉಪ್ಪನ್ನು ಕೇಂದ್ರ ಸರಕಾರದಡಿ ಇರುವ ಸಂಸ್ಥೆಗಳಿಂದ ನೀಡಲಾಗುತ್ತಿದ್ದು, ಇನ್ನುಳಿದ 250 ಟನ್‌ ಉಪ್ಪನ್ನು ಖಾಸಗಿ ಸಂಸ್ಥೆಗಳಿಂದ ಪಡೆಯಲಾಗಿದೆ. ಈ ಬಗ್ಗೆ ಶ್ರೀಲಂಕನ್ನರು ಭಾರತಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಜತೆಗೇ ಅವರ ಪರಿಸ್ಥಿತಿ ಬಗ್ಗೆ ವಿಷಾದಿಸುತ್ತಿದ್ದಾರೆ. ಶ್ರೀಲಂಕಾ ನಾಗರಿಕರೊಬ್ಬರು ಟ್ವಿಟರ್‌ನಲ್ಲಿ ಈ ಬಗ್ಗೆ ಹೇಳಿದ್ದು, “ಈ ಹಿಂದೆ ಆಹಾರ, ತೈಲ, ಔಷಧಕ್ಕೆ ಭಾರತದ ಸಹಾಯ ಪಡೆದಿದ್ದ ನಾವು, ಈಗ ಅತೀ ಮೂಲಭೂತ ವಸ್ತು ಉಪ್ಪಿಗೂ ಅವರ ಬಳಿ ಕೈಚಾಚುತ್ತಿರುವುದು ವಿಷಾದನೀಯ’ ಎಂದಿದ್ದಾರೆ. ಕಳೆದ

ವರ್ಷದಿಂದಲೇ ಈ ಬಿಕ್ಕಟ್ಟು ಆರಂಭವಾಗಿದ್ದು, 15 ವರ್ಷಗಳಲ್ಲಿ ಇದೇ ಮೊದಲ ಬಾರಿ 2025ರ ಜನವರಿಯಲ್ಲಿ ಲಂಕಾ ಭಾರತದಿಂದ 35,000 ಟನ್ ಉಪ್ಪನ್ನು ಖರೀದಿಸಿತ್ತು.

ಉಪ್ಪನ್ನು ಹೇಗೆ ತಯಾರಿಸುತ್ತಾರೆ?

1. ಸಾಂಪ್ರದಾಯಿಕವಾಗಿ ಸಮುದ್ರದ ನೀರನ್ನು ಪುಟ್ಟ ಕೊಳಗಳಲ್ಲಿ ಸಂಗ್ರಹಿಸಿ ಬಿಸಿಲಿನಲ್ಲಿ ನೀರನ್ನು ಆವಿಗೊಳಿಸಿ ಉಪ್ಪಿನ ಅಂಶವನ್ನು ಪಡೆಯಲಾಗುತ್ತದೆ.

2. ಸಮುದ್ರದ ಉಪ್ಪು ನೀರನ್ನು ನಿರ್ವಾತವಿರುವ ಪಾತ್ರೆಯಲ್ಲಿರಿಸಿ ಅದಕ್ಕೆ ತಾಪ ನೀಡಿ ನೀರು ಆವಿಯಾಗು-ವಂತೆ ಮಾಡಿ ಉಪ್ಪಿನ ಹರಳನ್ನು ಉಳಿಸಲಾಗುತ್ತದೆ.

3. ಭೂಮಿಯಲ್ಲಿರುವ ಉಪ್ಪಿನ ಗಣಿಗಳಿಂದ ಉಪ್ಪನ್ನು ಪುಡಿ ಮಾಡಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ ಕಲ್ಲುಪ್ಪು ಹೀಗೆ ತಯಾರಾಗುತ್ತದೆ.

[t4b-ticker]
error: Content is protected !!