ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಇತ್ತೀಚಿನ ಮಳೆಯಿಂದಾಗಿ ಡೆಂಗ್ಯೂ ಶಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಬೆಳ್ತಂಗಡಿ, ಪುತ್ತೂರು, ಮತ್ತು ಸುಳ್ಯ ತಾಲೂಕುಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಎಚ್ಚರಿಸಿದ್ದಾರೆ.
ಮಂಗಳೂರು, ಜೂನ್ 3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಇತ್ತೀಚಿನ ಮಳೆಯಿಂದಾಗಿ ಡೆಂಗ್ಯೂ ಶಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಬೆಳ್ತಂಗಡಿ, ಪುತ್ತೂರು, ಮತ್ತು ಸುಳ್ಯ ತಾಲೂಕುಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಎಚ್ಚರಿಸಿದ್ದಾರೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ ನಿಯಂತ್ರಣಕ್ಕೆ ಶಾಲೆಗಳಲ್ಲಿ ಜಾಗೃತಿ, ವಿವಿಧ ಇಲಾಖೆಗಳ ಸಹಯೋಗ, ಹಾಗೂ ಸರ್ಕಾರಿ-ಖಾಸಗಿ ಕಚೇರಿಗಳು, ಶಾಲೆಗಳು. ಆಸ್ಪತ್ರೆಗಳಲ್ಲಿ ವಾರಕ್ಕೊಮ್ಮೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಸೂಚಿಸಲಾಗಿದೆ ಎಂದರು.
ಪ್ರಕರಣಗಳ ವಿವರ:
ಪ್ರಸಕ್ತ ಸಾಲಿನ ಜನವರಿಯಿಂದ ಮೇ 31ರವರೆಗೆ ಜಿಲ್ಲೆಯಲ್ಲಿ 43 ಶಂಕಿತ ಡೆಂಗ್ಯೂ ಹಾಗೂ 3 ಚಿಕುನ್‌ಗುನ್ಯ ಪ್ರಕರಣಗಳು ವರದಿಯಾಗಿವೆ.
ಮುಂಜಾಗ್ರತಾ ಕ್ರಮಗಳು:
- ಪ್ರತಿ ಶುಕ್ರವಾರ ‘ಡೈ ಡೇ’ ಆಚರಿಸಿ. ನೀರು ನಿಲ್ಲದಂತೆ ಎಚ್ಚರವಹಿಸಿ.
- ವಾರಕ್ಕೊಮ್ಮೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ಪರಿಶೀಲಿಸಿ, ಲಾರ್ವಾಗಳನ್ನು ನಾಶಪಡಿಸಿ.
- ಅಡಿಕೆ ಹಾಗೂ ರಬ್ಬರ್ ತೋಟಗಳಲ್ಲಿ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಿ.
ಇಲಾಖಾ ಕ್ರಮ:
ಒಂದು ಡೆಂಗ್ಯೂ ಪ್ರಕರಣ ವರದಿಯಾದರೆ, ಸುತ್ತಮುತ್ತಲಿನ 50 ಮನೆಗಳಲ್ಲಿ ಸಮೀಕ್ಷೆ ನಡೆಸಿ ಲಾರ್ವಾ ನಾಶಪಡಿಸಲಾಗುವುದು. ಆಗಸ್ಟ್‌ವರೆಗೆ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ.
ಡೆಂಗ್ಯೂ ಲಕ್ಷಣಗಳು ಮತ್ತು ಎಚ್ಚರಿಕೆ:
ತೀವ್ರ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು. ಮೈಕೈ ನೋವು ಡೆಂಗ್ಯೂವಿನ ಲಕ್ಷಣಗಳು. ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸ್ವಯಂ ಚಿಕಿತ್ಸೆ ಅಪಾಯಕಾರಿ.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಜೆಸಿಂತಾ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಉಪಸ್ಥಿತರಿದ್ದರು.













































