
ಸಂಘದ ಸಹಕಾರವಿಲ್ಲದೆ ಮತಾಂತರ ಸಮಸ್ಯೆ ಪರಿಹಾರವಾಗುವುದಿಲ್ಲ – ಬುಡಕಟ್ಟು ನಾಯಕ, ಮಾಜಿ ಕೇಂದ್ರ ಸಚಿವ ಅರವಿಂದ್ ನೇತಮ್
‘ಮತಾಂತರ ಮತ್ತು ನಕ್ಸಲಿಸಂ’ ನಮ್ಮ ಮುಂದಿರುವ ದೊಡ್ಡ ಸಮಸ್ಯೆ
“ಮತಾಂತರವು ಅತ್ಯಂತ ದೊಡ್ಡ ಸಮಸ್ಯೆ, ಆದರೆ ಯಾವುದೇ ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎಲ್ಲಾ ಸರ್ಕಾರಗಳು ಕೂಡ ಮತಾಂತರದ ವಿಷಯ ಬಂದರೆ ಹಿಂದಿನ ಸರ್ಕಾರವನ್ನು ದೂಷಿಸಲು ಪ್ರಾರಂಭಿಸುತ್ತವೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ದೃಢ ಕ್ರಮ ತೆಗೆದುಕೊಂಡಿಲ್ಲ. ದೀರ್ಘ ಚಿಂತನೆಯ ನಂತರ ಸಂಘವು ನಮಗೆ ಸಹಾಯ ಮಾಡುವ ಮತ್ತು ದಾರಿ ತೋರಿಸುವ ಏಕೈಕ ಸಂಘಟನೆ ಎಂದು ನಾನು ಅರಿತುಕೊಂಡೆ. ಆರ್‌ಎಸ್‌ಎಸ್ ಬಹಳ ಸಮಯದಿಂದ ಮತಾಂತರದ ವಿಷಯದಲ್ಲಿ ಕೆಲಸ ಮಾಡುತ್ತಿದೆ ಎಂದು ನನಗೆ ತಿಳಿದಿದೆ, ನಾನು ಅವರ ಪ್ರಯತ್ನಗಳನ್ನು ಬೆಂಬಲಿಸುತ್ತೇನೆ” ಎಂದು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಬುಡಕಟ್ಟು ನಾಯಕ ಅರವಿಂದ್ ನೇತಮ್ ಗುರುವಾರ ನಾಗ್ಪುರದಲ್ಲಿ ನಡೆದ ‘ಕಾರ್ಯಕರ್ತ ವಿಕಾಸ ವರ್ಗ – ದ್ವಿತೀಯ’ ಸಮಾರೋಪ ಸಮಾರಂಭದಲ್ಲಿ ಹೇಳಿದ್ದಾರೆ. ನಮ್ಮ ಸಮಾಜ ಎರಡು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ, ಅವು ‘ಮತಾಂತರ ಮತ್ತು ನಕ್ಸಲಿಸಂ’. ಸಂಘ ಮತ್ತು ಬುಡಕಟ್ಟು ಸಮಾಜವು ಈ ಎರಡೂ ವಿಷಯಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ ವರ್ಷ ಮತಾಂತರದ ವಿಷಯದಲ್ಲಿ ನಾನು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಮುಖಂಡರನ್ನು ಕರೆದಿದ್ದೆ ಆದರೆ ಕೆಲವರು ಅದನ್ನು ವಿರೋಧಿಸಿದರು. ಆದರೂ ಕಾರ್ಯಕ್ರಮ ನಡೆಯಿತು. ಅದಕ್ಕಿಂತ ಮೊದಲು ಮತಾಂತರದ ಬಗ್ಗೆ ಸಂಘದೊಂದಿಗೆ ಯಾವುದೇ ಮಾತುಕತೆಗಳು ನಡೆದಿರಲಿಲ್ಲ, ಆದರೆ ಕಾರ್ಯಕ್ರಮದ ನಂತರ ಎಲ್ಲಾ ಬದಲಾಯಿತು. ಸಂಘದ ಸಹಕಾರದ ಬಗ್ಗೆ ನಮಗೆ ಭರವಸೆ ಇದೆ ಮತ್ತು ಸಂಘದ ಸಹಕಾರವಿಲ್ಲದೆ ಈ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ ಎಂದಿದ್ದಾರೆ.













































