
ಲೇಖನ : ಕ್ಯಾಪ್ಟನ್ ಬ್ರಿಜೇಶ್ ಚೌಟ,
ಸಂಸದರು, ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ
ಅದು 2013. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ನಾನು ಊರಿಗೆ ಮರಳಿದ್ದೆ. ನನ್ನ ಪೀಳಿಗೆಯ ಅನೇಕ ಯುವಕರಂತೆ, ನಾನೂ ಜೀವನದ ಮಹತ್ವದ ತಿರುವಿನಲ್ಲಿದ್ದೆ. ರಾಷ್ಟ್ರ ಸೇವೆ ಮುಂದುವರಿಸಬೇಕೆಂಬ ದೃಢ ಸಂಕಲ್ಪ ನನ್ನಲ್ಲಿದ್ದರೂ, ಕಂಡುಕೊಳ್ಳಬೇಕಾದ ಹಾದಿಯ ಶೋಧನೆಯಲ್ಲಿದ್ದೆ. ಆಗ ದೇಶವೂ ಒಂದು ಮಹತ್ವದ ತಿರುವಿನಲ್ಲಿತ್ತು.
ಭಾರತಕ್ಕೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಸಾಮರ್ಥ್ಯವಿದೆ ಎಂಬ ಭಾವನೆ ಜನರಲ್ಲಿ ಗಟ್ಟಿಯಾಗುತ್ತಿತ್ತು ಮತ್ತು ಹಳ್ಳಿ, ಪಟ್ಟಣ, ನಗರಗಳ ಜನರಲ್ಲಿ ಹೊಸ ಚೈತನ್ಯ ರೂಪುಗೊಳ್ಳತೊಡಗಿತ್ತು. ಜನ ತಮ್ಮ ಆಶಯ, ಆತ್ಮವಿಶ್ವಾಸ ಮತ್ತು ಭವಿಷ್ಯದ ನಾಯಕತ್ವದ ಬಗ್ಗೆ ಚರ್ಚಿಸುತ್ತಿದ್ದರು. ಆಗ ಜನ-ಸಂವಾದದ ಕೇಂದ್ರಬಿಂದುವಾಗಿದ್ದವರು ಗುಜರಾತಿನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು. ಬಲಿಷ್ಠ ಭಾರತವನ್ನು ಕಾಣಲು ಬಯಸಿದ್ದ ಕೋಟ್ಯಂತರ ಭಾರತೀಯರ ಮನಸ್ಸನ್ನು ಅವರು ಅದಾಗಲೇ ತಲುಪಿದ್ದರು.
2013ರ ಜೂನ್ ತಿಂಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನನ್ನ ಹೆಗಲೇರಿತು. ನಾನು ಧರಿಸುವ ಸಮವಸ್ತ್ರ ಬದಲಾಗಿದ್ದರೂ, “ರಾಷ್ಟ್ರ ಮೊದಲು” ಎಂಬ ಧ್ಯೇಯ ಮಾತ್ರ ಬದಲಾಗಿರಲಿಲ್ಲ.
ನಾವಂದು ಕೇವಲ ರಾಜಕೀಯ ಪಕ್ಷದ ಪ್ರಚಾರ ಮಾಡಿರಲಿಲ್ಲ; ಮಹಾನ್ ಕಲ್ಪನೆಯ ಪರ ಪ್ರಚಾರ ಮಾಡಿದ್ದೆವು. ಭಾರತ ಇನ್ನಷ್ಟು ಬಲಿಷ್ಠವಾಗಬಹುದು, ಆತ್ಮವಿಶ್ವಾಸದಿಂದ ಕೂಡಿರಬಹುದು, ಮತ್ತಷ್ಟು ಸ್ವಾವಲಂಬಿಯಾಗಬಹುದು ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಗೌರವ-ಘನತೆ ಹೆಚ್ಚಿಸಿಕೊಳ್ಳಬಹುದು ಎಂಬ ಕಲ್ಪನೆಯ ಸಾಕಾರಕ್ಕಾಗಿ ಧ್ವನಿ ಎತ್ತಿದ್ದೆವು.
ಅದಾಗಿ ದಶಕದ ಬಳಿಕ (2024) ಲಕ್ಷಾಂತರ ಯುವ ಭಾರತೀಯರಲ್ಲಿ ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸಿದ ಅದೇ ನಾಯಕನ ನೇತೃತ್ವದ ತಂಡದಲ್ಲಿ ಸಂಸತ್ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸುವ ಸೌಭಾಗ್ಯ ನನಗೆ ದೊರೆಯಿತು.
ನರೇಂದ್ರ ಮೋದಿ ಅವರು ಭಾರತದಲ್ಲಿ ಅತಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಪ್ರಧಾನಮಂತ್ರಿಯಾಗಿರುವ ಈ ಸಂದರ್ಭದಲ್ಲಿ, ಕೇವಲ ರಾಷ್ಟ್ರದ ಪರಿವರ್ತನೆಯನ್ನಷ್ಟೇ ಅಲ್ಲ, ಈ ಅವಧಿಯು ನನ್ನಂತಹ ಸಾಮಾನ್ಯ ಭಾರತೀಯರಿಗೆ ಸೃಷ್ಟಿಸಿರುವ ಅಸಾಧಾರಣ ಅವಕಾಶಗಳನ್ನೂ ನೆನಪಿಸಿಕೊಳ್ಳುತ್ತಿದ್ದೇನೆ.
ಭಾರತದ ಸ್ಥಾನಮಾನದ ಚಿತ್ರಣ :
ಕಳೆದೆರಡು ವರ್ಷಗಳು ಜಾಗತಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ವರ್ಷಗಳು. ಭೌಗೋಳಿಕ-ರಾಜಕೀಯ ಸಂಘರ್ಷ, ಇಂಧನ ಭದ್ರತೆಯ ಕುರಿತ ಆತಂಕ, ಆರ್ಥಿಕ ಅನಿಶ್ಚಿತತೆ ಮತ್ತು ಭಯೋತ್ಪಾದನೆಯ ಬೆದರಿಕೆಗಳ ಮುಂದುವರಿಕೆ…ಹೀಗೆ ಇವುಗಳ ವಿರುದ್ಧ ಜಗತ್ತು ಈಗಲೂ ಹೋರಾಡುತ್ತಿದೆ. ಸಂಸತ್ ಸದಸ್ಯನಾಗಿ ನಾನು ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಪಾಲ್ಗೊಂಡದ್ದರಿಂದ ಈ ಕ್ಷೇತ್ರದ ಬೆಳವಣಿಗೆಗಳನ್ನು ಸಮೀಪದಿಂದ ಗಮನಿಸಿದ್ದೇನೆ. ಆದರೂ, ಸಂಸದನಾಗಿ ಮೊದಲ ಅವಧಿಯಲ್ಲೇ ನನಗೆ ನೀಡಲಾದ ಎರಡು ಅಂತರ್ ರಾಷ್ಟ್ರೀಯ ಜವಾಬ್ದಾರಿಗಳು ಜಾಗತಿಕವಾಗಿ ಭಾರತದ ಸ್ಥಾನಮಾನದ ಬಗ್ಗೆ ನನ್ನಲ್ಲಿ ಆಳವಾದ ಅರಿವು ಮೂಡಿಸಿದವು ಎಂದು ಖುಷಿಯಿಂದ ಹೇಳುತ್ತೇನೆ. ಪಾಕ್ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಂತರ 2025ರ ಮೇ ತಿಂಗಳಲ್ಲಿ, ಭಯೋತ್ಪಾದನೆ ವಿರುದ್ಧದ ಭಾರತದ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ವಿಶ್ವಕ್ಕೆ ತಲುಪಿಸುವ ಜವಾಬ್ದಾರಿ ಹೊಂದಿದ್ದ ಸಂಸತ್ತಿನ ಸರ್ವಪಕ್ಷಗಳ ನಿಯೋಗದ ಸದಸ್ಯನಾಗಿ ನನ್ನನ್ನು ಕೂಡ ಆಯ್ಕೆ ಮಾಡಲಾಗಿತ್ತು. ಈ ನಿಯೋಗ ಮಾಸ್ಕೋ, ಮ್ಯಾಡ್ರಿಡ್, ಅಥೆನ್ಸ್, ಲ್ಯೂಬ್ಲಿಯಾನಾ ಮತ್ತು ಲಾತ್ವಿಯಾ ದೇಶದ ರೀಗಾ ನಗರಗಳಿಗೆ ತೆರಳಿತ್ತು. ಓರ್ವ ಸೈನಿಕನಾಗಿ ನೋಡಿದರೆ, ಈ ಜವಾಬ್ದಾರಿ ನನ್ನ ಹೃದಯಕ್ಕೆ ಹತ್ತಿರವಾಗಿತ್ತು. ದಶಕಗಳಿಂದ ಭಾರತ ಎದುರಿಸುತ್ತಿದ್ದ ಉಗ್ರವಾದದ ವಾಸ್ತವಿಕತೆಯನ್ನು ನಾವು ಜಗತ್ತಿಗೆ ವಿವರಿಸಬೇಕಿತ್ತು. ವಿದೇಶಗಳಲ್ಲಿ ನಡೆದ ನಮ್ಮ ಸಂವಾದಗಳ ಸಂದರ್ಭದಲ್ಲಿ, ನಾನು ಒಂದು ವಿಭಿನ್ನ ವಾಸ್ತವಿಕತೆಗೆ ಸಾಕ್ಷಿಯಾಗಿದ್ದೆ. ಭಾರತದ ಧ್ವನಿಗೆ ಜಾಗತಿಕ ಮಟ್ಟದಲ್ಲಿ ಮಹತ್ವವಿತ್ತು ಮತ್ತು ಭಯೋತ್ಪಾದನೆ ವಿರುದ್ಧದ ನಮ್ಮ ಶೂನ್ಯ ಸಹಿಷ್ಣುತೆಯ ನಿಲುವಿಗೆ ಬೆಂಬಲ-ಮಾನ್ಯತೆ ದೊರೆಯುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಸರ್ವಪಕ್ಷಗಳ ನಿಯೋಗದ ಮೂಲಕ ಭಾರತ ತನ್ನ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಪ್ರದರ್ಶಿಸಿತ್ತು. ಭಾರತದ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಭಯೋತ್ಪಾದನೆ, ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕರ ರಕ್ಷಣೆಯ ವಿಚಾರ ಬಂದಾಗ, ಭಾರತ ಒಂದೇ ಧ್ವನಿಯಲ್ಲಿ ಮಾತನಾಡುತ್ತದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದೆವು. ಪ್ರಜಾಪ್ರಭುತ್ವದ ವೈವಿಧ್ಯತೆಯನ್ನು ದೇಶದ ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಬಳಸಿಕೊಳ್ಳಬಹುದು ಎಂದು ಭಾವಿಸುವವರಿಗೂ ಇದೊಂದು ಕಟು ಸಂದೇಶವಾಗಿತ್ತು. ವೈವಿಧ್ಯತೆಯೇ ನಮ್ಮ ಶಕ್ತಿ. ರಾಷ್ಟ್ರ ಹಿತಾಸಕ್ತಿಯ ವಿಷಯಗಳಲ್ಲಿ ಏಕತೆಯೇ ನಮ್ಮ ಅತಿದೊಡ್ಡ ಬಲ.
ವೈಯಕ್ತಿಕವಾಗಿ ಈ ಜವಾಬ್ದಾರಿ ನನಗೆ ಇನ್ನಷ್ಟು ವಿಶೇಷವಾಗಿತ್ತು. ಏಕೆಂದರೆ ಯೋಧನಾಗಿದ್ದಾಗಿನ ನನ್ನ ಆರಂಭಿಕ ದಿನಗಳನ್ನು ಅದು ನೆನಪಿಸಿತ್ತು. ಭಾರತೀಯ ಸೇನೆಯ 8 ಗೋರ್ಖಾ ರೈಫಲ್ಸ್‌ನಲ್ಲಿ ನಾನು ಯುವ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎರಡನೇ ವರ್ಷದಲ್ಲೇ ಮಣಿಪುರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ವೇಳೆ ಕಮಾಂಡಿಂಗ್ ಆಫೀಸರ್ ಅವರು ಘಾತಕ್ ಪ್ಲಾಟೂನ್ ಟ್ರೂಪ್ ನಾಯಕತ್ವದ ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿದ್ದರು. ಅದೇ ರೀತಿ, ಮೊದಲ ಬಾರಿಗೆ ಸಂಸದನಾಗಿದ್ದ ನನ್ನನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಸರ್ವಪಕ್ಷ ನಿಯೋಗದ ಸದಸ್ಯನಾಗಿ ಆಯ್ಕೆ ಮಾಡಿದಾಗ, ಅದೇ ನಂಬಿಕೆ ಮತ್ತು ಜವಾಬ್ದಾರಿಯ ಭಾವನೆ ನನ್ನಲ್ಲಿ ಮತ್ತೆ ಮೂಡಿತ್ತು. ಭರವಸೆ ಹಾಗೂ ನಂಬಿಕೆಯಿಂದ ಜವಾಬ್ದಾರಿ ನೀಡುವ ನಾಯಕತ್ವ ನಮ್ಮ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ.
ಬದಲಾಯಿತು ನೋಡುವ ಬಗೆ :
ಕೆಲ ತಿಂಗಳುಗಳ ಬಳಿಕ ನನ್ನ ಮುಂದೆ ಎರಡನೇ ಅಂತರ್ ರಾಷ್ಟ್ರೀಯ ಜವಾಬ್ದಾರಿಯಿತ್ತು. 2025ರ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯ 80ನೇ ಸಾಮಾನ್ಯ ಸಭೆಯಲ್ಲಿ ಭಾರತದ ಸಂಸದೀಯ ನಿಯೋಗ ಪಾಲ್ಗೊಂಡಿತ್ತು. ಈ ನಿಯೋಗದ ಸದಸ್ಯನಾಗಿ ನಾನೂ ನ್ಯೂಯಾರ್ಕ್‌ಗೆ ತೆರಳಿ ಸಭೆಯಲ್ಲಿ ಭಾಗವಹಿಸಿದ್ದೆ. ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿನಿಧಿಸಲು, ವಿವಿಧ ದೇಶಗಳ ಜನಪ್ರತಿನಿಧಿಗಳು ಮತ್ತು ನೀತಿ ನಿರೂಪಕರೊಂದಿಗೆ ಸಂವಾದ ನಡೆಸಲು, ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಹಾಗೂ ದೇಶದ ಧ್ವನಿಯನ್ನು ವಿಶ್ವಸಂಸ್ಥೆಯ ಮುಂದಿಡಲು ಈ ನಿಯೋಗ ರಚಿಸಲಾಗಿತ್ತು. 2014ರ ನಂತರವಷ್ಟೇ ಮೊದಲ ವಿದೇಶ ಪ್ರವಾಸ ಮಾಡಿದ್ದ ನನ್ನಲ್ಲಿ ಈ ಪ್ರವಾಸ ಆಳವಾದ ಪ್ರಭಾವ ಬೀರಿತು. ಅಲ್ಲಿನ ಚರ್ಚೆ-ಭಾಷಣಗಳು ಕಳೆದೊಂದು ದಶಕದಲ್ಲಿ ಲಕ್ಷಾಂತರ ಭಾರತೀಯರಲ್ಲಿ ಮೂಡಿದ್ದ ಸಾಧ್ಯತೆಗಳ ವಿಶ್ವಾಸದ ಪ್ರತಿಬಿಂಬವಾಗಿದ್ದವು. ಜಗತ್ತು ಭಾರತವನ್ನು ನೋಡುವ ಮತ್ತು ಚರ್ಚಿಸುವ ವಿಧಾನ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ನಾವು ಅಲ್ಲಿ ಭೇಟಿ ಮಾಡುತ್ತಿದ್ದ ಅನಿವಾಸಿ ಭಾರತೀಯರೆಲ್ಲರೂ ಭಾರತದ ನಾಯಕತ್ವ ಹಾಗೂ ಜಾಗತಿಕ ಸ್ಥಾನಮಾನದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಉದ್ಯಮಿಗಳು, ವಿದ್ಯಾರ್ಥಿಗಳು, ವೃತ್ತಿಪರರು, ವೈದ್ಯರು, ಇಂಜಿನಿಯರ್‌ಗಳು ಹಾಗೂ ವಿವಿಧ ಸಮುದಾಯದ ನಾಯಕರು ಕೂಡ ವಿಶ್ವದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ಮರೆಯದೆ ಉಲ್ಲೇಖಿಸುತ್ತಿದ್ದರು. ಇಂದು 3.5 ಕೋಟಿಗೂ ಹೆಚ್ಚು ಜನರನ್ನು ಒಳಗೊಂಡಿರುವ ಅನಿವಾಸಿ ಭಾರತೀಯ ಸಮುದಾಯ ವಿಶ್ವದ ಅತಿದೊಡ್ಡ ವಲಸಿಗ ಸಮುದಾಯವಾಗಿದೆ.
ಹಲವು ದಶಕಗಳಿಂದ, ಭಾರತದ ಯಶಸ್ವೀಗಾಥೆಯನ್ನು ಜಗತ್ತಿಗೆ ಹೇಳುವ ಜವಾಬ್ದಾರಿ ರಾಯಭಾರ ಕಚೇರಿಗಳಾದ್ದಾಗಿತ್ತು. ಆದರೆ ಇಂದು, ವಿದೇಶಗಳಲ್ಲಿರುವ ಲಕ್ಷಾಂತರ ಭಾರತೀಯರೇ ದೇಶದ ಸಾಧನಾಗಾಥೆಯನ್ನು ಜಗತ್ತಿನ ಮೂಲೆಮೂಲೆಗಳಿಗೆ ತಲುಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಈ ಸಮುದಾಯದ ಶಕ್ತಿಯನ್ನು ಮೊದಲೇ ಗುರುತಿಸಿದ್ದರು. ವಿದೇಶ ಪ್ರವಾಸಗಳಲ್ಲಿ ಅವರ ಮತ್ತು ಅನಿವಾಸಿ ಭಾರತೀಯರ ನಡುವಿನ ಅಸಾಧಾರಣ ಬಾಂಧವ್ಯ ಕಾಣಬಹುದು.
ಪ್ರಭಾವದ ವಿಸ್ತರಣೆ :
ಭಾರತದ ಅನೇಕ ಕ್ಷೇತ್ರಗಳಲ್ಲೀಗ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯೋಗ, ಆಯುರ್ವೇದ, ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆ, ಭಾರತೀಯ ಆಹಾರ ಪದ್ಧತಿ, ಸಿನಿಮಾ, ತಂತ್ರಜ್ಞಾನ ಮತ್ತು ನವೋದ್ಯಮಗಳ ಮೂಲಕ ಭಾರತದ ಸಾಂಸ್ಕೃತಿಕ ಪ್ರಭಾವ ವಿಸ್ತರಣೆಯಾಗಿದೆ. ಅಂತರ್ ರಾಷ್ಟ್ರೀಯ ಯೋಗ ದಿನವನ್ನು ವಿವಿಧ ಖಂಡಗಳಲ್ಲಿ ಆಚರಿಸಲಾಗುತ್ತಿದೆ. ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಜಗತ್ತಿನ ಅನೇಕ ಸರ್ಕಾರಗಳು ಅಧ್ಯಯನ ಮಾಡುತ್ತಿವೆ. ಭಾರತೀಯ ಮೂಲದ ವೃತ್ತಿಪರರು ವಿಶ್ವದ ಕೆಲ ಅತಿದೊಡ್ಡ ಕಂಪನಿಗಳ ನೇತೃತ್ವ ವಹಿಸಿದ್ದಾರೆ. ಭಾರತೀಯ ಉದ್ಯಮಿಗಳು ಜಾಗತಿಕವಾಗಿ ಗುರುತಿಸಲ್ಪಟ್ಟ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ/ಸ್ಥಾಪಿಸುತ್ತಿದ್ದಾರೆ. ವಿಶ್ವ ನಾಯಕರಿಂದ ಪ್ರಧಾನಿ ಮೋದಿಯವರಿಗೆ ದೊರೆಯುತ್ತಿರುವ ಗೌರವಗಳು ಈ ವಿಶಾಲ ಪರಿವರ್ತನೆಯ ಪ್ರತಿಬಿಂಬವಾಗಿವೆ. ಜಾಗತಿಕ ನಾಯಕರೊಂದಿಗೆ ಅವರ ಸಭೆಗಳು ಕೇವಲ ರಾಜತಾಂತ್ರಿಕ ಶಿಷ್ಟಾಚಾರದ ಕಾರಣಕ್ಕಾಗಿ ಅಲ್ಲ; ಜಾಗತಿಕ ಚರ್ಚೆಗಳಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ ಸ್ಥಾನವನ್ನು ಪಡೆದಿರುವುದರಿಂದಲೇ ವಿಶೇಷವಾಗಿ ಗಮನಸೆಳೆಯುತ್ತಿವೆ.
ಮನಸ್ಥಿತಿಯ ಪರಿವರ್ತನೆ :
ಒಬ್ಬ ನಿವೃತ್ತ ಸೈನಿಕನಾಗಿ, ನಾನು ಈ ಬೆಳವಣಿಗೆಗಳನ್ನು ಕೊಂಚ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೇನೆ. ಕಳೆದೊಂದು ದಶಕದಲ್ಲಿ ಭಾರತ ತನ್ನ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಎರಡನ್ನೂ ಬಲಪಡಿಸಿಕೊಂಡಿದೆ. 2014ರಲ್ಲಿ ಸುಮಾರು ₹2.27 ಲಕ್ಷ ಕೋಟಿ ಇದ್ದ ಭಾರತದ ರಕ್ಷಣಾ ಬಜೆಟ್ ಇಂದು ಸುಮಾರು ₹7.85 ಲಕ್ಷ ಕೋಟಿಗೆ ಏರಿಕೆಯಾಗಿದೆ. ರಕ್ಷಣಾ ರಫ್ತುಗಳು ಗಮನಾರ್ಹವಾಗಿ ಹೆಚ್ಚಿವೆ. ಸ್ವದೇಶಿ ರಕ್ಷಣಾ ಶಸ್ತ್ರಾಸ್ತ್ರಗಳು, ಕ್ಷಿಪಣಿ ವ್ಯವಸ್ಥೆ ಮತ್ತು ರಕ್ಷಣಾ ಉತ್ಪಾದನಾ ಸಾಮರ್ಥ್ಯಗಳು ವಿಸ್ತರಿಸಿವೆ. ಅತ್ಯಗತ್ಯ ರಕ್ಷಣಾ ವ್ಯವಸ್ಥೆಗಳನ್ನು ಸ್ವತಃ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಸ್ವಾವಲಬಿ ರಾಷ್ಟ್ರವಾಗಿ ಭಾರತ ರೂಪುಗೊಳ್ಳುತ್ತಿದೆ. ಇದು ಅಂಕಿ-ಅಂಶಗಳಲ್ಲಿನ ಬದಲಾವಣೆಯಲ್ಲ. ಇದು ಮನಸ್ಥಿತಿಯ ಪರಿವರ್ತನೆಯೂ ಹೌದು. ರಾಷ್ಟ್ರೀಯ ಭದ್ರತೆ, ರಾಜತಾಂತ್ರಿಕತೆ, ತಂತ್ರಜ್ಞಾನ, ಇಂಧನ ಅಥವಾ ಆರ್ಥಿಕ ಬೆಳವಣಿಗೆ ಯಾವುದೇ ವಿಷಯ ಇರಲಿ, ಜಗತ್ತಿನೊಂದಿಗೆ ನಡೆಸುತ್ತಿರುವ ಮಾತುಕತೆ/ಸಂವಾದದಲ್ಲಿ ಭಾರತದ ಹೆಚ್ಚಿದ ಆತ್ಮವಿಶ್ವಾಸ ಎದ್ದುಕಾಣುತ್ತಿದೆ.
ನಿರಂತರತೆ ಮತ್ತು ಸ್ಥೈರ್ಯದ ಸಂಕೇತ :
ಸಮವಸ್ತ್ರ ಧರಿಸಿ ದೇಶಸೇವೆ ಮಾಡಿದ ನಮ್ಮಂತಹವರಿಗೆ ಇಂಥಾ ಬೆಳವಣಿಗೆಗಳು ಬಹಳ ವಿಶೇಷ ಎನಿಸಿಕೊಳ್ಳುತ್ತವೆ. ರಾಷ್ಟ್ರೀಯ ಭದ್ರತೆ ಎನ್ನುವುದು ರಾತ್ರಿ ಕಳೆದು ಹಗಲಾಗುವ ಒಳಗೆ ದೃಢಗೊಳ್ಳುವಂಥದ್ದಲ್ಲ. ಅದಕ್ಕೆ ತಾಳ್ಮೆ ಬೇಕು. ಹೂಡಿಕೆ ಬೇಕು. ಬಲಿಷ್ಠ ಸಂಸ್ಥೆಗಳಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ದೀರ್ಘಕಾಲೀನ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಕೇಂದ್ರೀಕೃತವಾಗಿರುವ ನಾಯಕತ್ವ ಬೇಕು. ಭಾರತದ ಅತಿ ದೀರ್ಘಾವಧಿಯ ಪ್ರಧಾನಮಂತ್ರಿಯಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಇದು ಕೇವಲ ಚುನಾವಣಾ ಯಶಸ್ಸಿನ ದಾಖಲೆಯಲ್ಲ; ನಿರಂತರತೆ ಮತ್ತು ಸ್ಥೈರ್ಯದ ಸಂಕೇತ. ಸಾರ್ವಜನಿಕ ಜೀವನದಲ್ಲಿ ನಾಯಕತ್ವವನ್ನು ಗೆಲುವುಗಳ ಮೂಲಕ ಅಳೆಯಲಾಗುತ್ತದೆ. ಸಶಸ್ತ್ರ ಪಡೆಗಳಲ್ಲಿ ನಾಯಕತ್ವ ಕೇವಲ ವಿಜಯದ ಸಂಕೇತವಲ್ಲ; ಅದು ನಿರಂತರವಾಗಿ ನಿಲ್ಲುವ ಶಕ್ತಿಯೂ ಹೌದು.
ಕಠಿಣ ಕಾರ್ಯಾಚರಣೆಗಳಿಗೆ ಕೇವಲ ಧೈರ್ಯವೊಂದಿದ್ದರಷ್ಟೇ ಸಾಲದು. ಅದಕ್ಕೆ ಶಿಸ್ತು, ಸ್ಥಿರತೆ ಬೇಕು. ಅನಿಶ್ಚಿತತೆ, ಹಿನ್ನಡೆ ಮತ್ತು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ದೃಢವಾಗಿ ನಿಲ್ಲುವ ದಿಟ್ಟತನ, ಸಾಮರ್ಥ್ಯ ಬೇಕು. ಶತ್ರುವನ್ನು ನಿಶಸ್ತ್ರಗೊಳಿಸುವ ಧೈರ್ಯ ಬೇಕು. ಸ್ಥಿರವಾಗಿ ನಿಲ್ಲುವ ದೃಢ ಸಂಕಲ್ಪವಿರಬೇಕು. ಹೀಗಾಗಿ, 12 ವರ್ಷಗಳಿಂದ ಅಧಿಕಾರದಲ್ಲಿರುವುದು ಬರೀ ರಾಜಕೀಯ ಮೈಲಿಗಲ್ಲಲ್ಲ. ಅದು ಪ್ರಾಮಾಣಿಕ ಮತ್ತು ಸುಸ್ಥಿರ ಬದ್ಧತೆಯ ಸಂಕೇತ. ಬದಲಾಗುತ್ತಿರುವ ರಾಷ್ಟ್ರೀಯ ಮತ್ತು ಜಾಗತಿಕ ಪರಿಸ್ಥಿತಿಗಳ ನಡುವೆಯೂ ತಮ್ಮ ವಿಶಿಷ್ಟ ಚಿಂತನೆ ಹಾಗೂ ಆಡಳಿತದ ಮೂಲಕ ಜನಮನ ಗೆಲ್ಲುವುದೂ ಒಂದು ಸಾರ್ವಜನಿಕ ತಪಸ್ಸೇ ಆಗಿದೆ.
ನಮ್ಮ ಯೋಜನೆಗೆ ಸ್ಫೂರ್ತಿ :
ಭಾರತವನ್ನು ಪರಿವರ್ತಿಸುವ ಮೊದಲು ಪ್ರಧಾನಿ ಮೋದಿ ಅವರು ಗುಜರಾತ್‌ನ್ನು ಪರಿವರ್ತಿಸಿದ್ದರು. ತಾಯ್ನೆಲದೊಂದಿಗೆ ಜೋಡಿಸಿಕೊಂಡ ನಾಯಕತ್ವವು ರಾಜ್ಯದಲ್ಲಿ ಏನನ್ನು ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ನಮ್ಮ ಆಲೋಚನೆ, ಬದ್ಧತೆಯನ್ನು ನಮ್ಮದೇ ಜನ ಮತ್ತು ಪ್ರದೇಶದ ಅಭಿವೃದ್ಧಿಗೆ ಸಮರ್ಪಿಸುವುದರಿಂದ ಬದಲಾವಣೆ ಸಾಧ್ಯ ಎನ್ನುವುದನ್ನು ಗುಜರಾತ್ ಸಾಬೀತುಪಡಿಸಿತು. ಅದು ನನ್ನ ಚಿಂತನೆಗಳ ಮೇಲೂ ಆಳವಾದ ಪ್ರಭಾವ ಬೀರಿತು.
ಮಂಗಳೂರಿನಲ್ಲಿ ನಾವು ಆರಂಭಿಸಿರುವ “ಬ್ಯಾಕ್ ಟು ಊರು” (BackToOoru) ಯೋಜನೆ ಹಿಂದಿರುವ ಸ್ಫೂರ್ತಿಯೂ ಇದೇ. ಈ ಯೋಜನೆ ಪ್ರತಿಭಾವಂತ ಯುವಕರು ತಮ್ಮ ಊರಿನಲ್ಲಿಯೇ ಅವಕಾಶಗಳನ್ನು ಮರುಶೋಧಿಸಲು ಪ್ರೋತ್ಸಾಹಿಸುತ್ತಿದೆ. ಅದೇ ರೀತಿ “ಬೊಲ್ಪು” (Bolpu) ಯೋಜನೆಯು ಸ್ಥಳೀಯ ಉದ್ಯಮಶೀಲತೆ ಮತ್ತು ಸಮುದಾಯ ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಎರಡೂ ಯೋಜನೆಗಳ ಹಿಂದಿನ ನಂಬಿಕೆ ಏನೆಂದರೆ ; ನಮ್ಮನ್ನು ರೂಪಿಸಿದ ನೆಲ ಮತ್ತು ಸಮುದಾಯಗಳಿಗೆ ನಾವು ಮರಳಿ ಕೊಡುಗೆ ನೀಡಿದಾಗ ಮಾತ್ರ ಶಾಶ್ವತ ಬದಲಾವಣೆ ಸಾಧ್ಯ ಎನ್ನುವುದು.
ನಾಯಕತ್ವದಿಂದ ಆತ್ಮವಿಶ್ವಾಸ :
12 ವರ್ಷಗಳ ಹಿಂದೆ ಪ್ರಧಾನಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಾಗ, ನರೇಂದ್ರ ಮೋದಿ ಅವರು ಲಕ್ಷಾಂತರ ಭಾರತೀಯರಿಗೆ ದೊಡ್ಡ ಕನಸು ಕಾಣಲು ಪ್ರೇರಣೆ ನೀಡಿದರು. ಲಕ್ಷಾಂತರ ಜನರು ಆ ಕನಸು ಕಂಡರು. ನನ್ನ ಕಥೆ ಅವುಗಳಲ್ಲಿ ಕೇವಲ ಒಂದಷ್ಟೇ. ಫರಂಗಿಪೇಟೆಯಿಂದ ಸಂಸತ್ತಿನವರೆಗೆ, ಸೇನೆಯಿಂದ ಸಾರ್ವಜನಿಕ ಜೀವನದವರೆಗೆ, ದಕ್ಷಿಣ ಕನ್ನಡವನ್ನು ಪ್ರತಿನಿಧಿಸುವುದರಿಂದ ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುವವರೆಗೆ ಸಾಗಿದ ನನ್ನ ಪಯಣದತ್ತ ದೃಷ್ಟಿ ಹಾಯಿಸಿದಾಗ, ಸಾಮಾನ್ಯ ನಾಗರಿಕರಲ್ಲಿ ಹಾಗೂ ಒಂದು ದೇಶವಾಗಿ ಭಾರತದ ಆತ್ಮವಿಶ್ವಾಸ ದೊಡ್ಡ ಮಟ್ಟಿಗೆ ವೃದ್ಧಿಯಾಗಿದೆ ಎಂಬ ದೃಢ ನಂಬಿಕೆ ನನ್ನಲ್ಲಿ ಮೂಡಿದೆ. ಪ್ರಧಾನಿಯವರ ನಾಯಕತ್ವ ರೂಪಿಸಿದ ಆತ್ಮವಿಶ್ವಾಸ ಈ ದೇಶವನ್ನು ಕಲ್ಪನೆಗೂ ಮೀರಿದ ಮಟ್ಟಿಗೆ ಮುನ್ನಡೆಸಿದೆ. ಆ ಕಾರಣಕ್ಕಾಗಿ ಹಾಗೂ ಭಾರತವನ್ನು ಜಗತ್ತಿಗೆ ಮತ್ತು ನಮಗೆ ಮರುಪರಿಚಯ ಮಾಡಿಕೊಟ್ಟದ್ದಕ್ಕಾಗಿ ಪ್ರಧಾನ ಸೇವಕ ನರೇಂದ್ರ ಮೋದಿ ಅವರಿಗೆ ಓರ್ವ ಸೈನಿಕನಾಗಿ ನನ್ನ ಹೃದಯಪೂರ್ವಕ ಸೆಲ್ಯೂಟ್.












































