Congress;ಇನ್ನೂ ನಿಲ್ಲದ ಸಿಎಂ ಚರ್ಚೆ!:ಡಿಕೆಶಿ ಬೆಂಬಲಿಗ ಶಾಸಕರ ಕೂಗು

Picture of Savistara

Savistara

Bureau Report

ಹೈಕಮಾಂಡ್ ಕಟ್ಟಪ್ಪಣೆ ನಗಣ್ಯ

ಬೆಂಗಳೂರು: “ಐದು ವರ್ಷ ನಾನೇ ಮುಖ್ಯಮಂತ್ರಿ’ಎಂದು ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ, “ಡಿ.ಕೆ. ಶಿವಕುಮಾರ್ ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗ ಬೇಕು’ ಎಂದು ಪಕ್ಷದ ಕೆಲವು ಶಾಸಕರು ಮತ್ತೆ ಡಿ.ಕೆ. ಶಿವ ಕುಮಾರ್ ಪರ ಧ್ವನಿಯೆತ್ತಿದ್ದಾರೆ.ಡಿಕೆಶಿ ಆಪ್ತ ಬಳಗದಲ್ಲಿ ಗುರು ತಿಸಿಕೊಂಡಿರುವ ಶಾಸಕರಾದ ಡಾ| ಎಚ್.ಡಿ. ರಂಗನಾಥ್, ಇಟ್ಬಾಲ್ ಹುಸೇನ್ ಹಾಗೂ ಡಿಕೆಶಿ ಸೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, “ಡಿ.ಕೆ. ಶಿವಕುಮಾರ್ ಶ್ರಮಕ್ಕೆ ಖಂಡಿತವಾಗಿಯೂ ಪ್ರತಿಫಲ ಸಿಗಲಿದೆ’ ಎನ್ನುವ ಮೂಲಕ “ಸಿಎಂ ಚರ್ಚೆ’ಯನ್ನು ಜೀವಂತ ವಾಗಿರಿಸಿದ್ದಾರೆ.ರಾಮನಗರದಲ್ಲಿ ಮಾತನಾಡಿದ ಇಟ್ಬಾಲ್ ಹುಸೇನ್, “ಡಿಕೆಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬುದು ನಮ್ಮ ಅಭಿಲಾಷೆ. ಪಕ್ಷ ಉಳಿಯಬೇಕು, 2028ರಲ್ಲಿ ಪಕ್ಷ ಅ ಧಿಕಾರಕ್ಕೆ ಬರಬೇಕು. ಇದಕ್ಕಾಗಿ ಡಿ.ಕೆ. ಶಿವಕುಮಾ‌ರ್ ಸಿಎಂ ಆಗಬೇಕು’ ಎಂದು ಸಮರ್ಥಿಸಿಕೊಂಡರು.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಂಸದ, ಬಮೂಲ್‌ ಅಧ್ಯಕ್ಷ ಡಿ.ಕೆ. ಸುರೇಶ್, “ನಮ್ಮಣ್ಣ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನ್ನದು’ ಎಂದು ಮಾರ್ಮಿಕವಾಗಿ ಹೇಳಿದರು.“ಮುಂದಿನ ಮೂರು ವರ್ಷ ನಾನೇ ಸಿಎಂ’ ಎಂದು ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ಡಿ.ಕೆ. ಸುರೇಶ್, “ಶಿವಕುಮಾರ್ ಅವರ ಶ್ರಮಕ್ಕೆ ಖಂಡಿತ ವಾಗಿ ಯಾವುದಾದರೂ ಒಂದು ದಿನ ಪ್ರತಿಫಲ ಸಿಗಬೇಕು. ಸಿಕ್ಕೇ ಸಿಗುತ್ತದೆ. ಈ ವಿಷಯವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಸದ್ಯಕ್ಕೆ ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಡಿಕೆಶಿ ಸಿಎಂ ಆಗುತ್ತಾರೆ ಎಂಬ ಭರವಸೆ ಇಂದೂ ಇದೆ. ನಾಳೆಯೂ ಇರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕುಣಿಗಲ್‌ನಲ್ಲಿ ಮಾತನಾಡಿದ ಶಾಸಕ ಡಾ| ಎಚ್.ಡಿ. ರಂಗನಾಥ್, “ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ನೋಡುವ ಆಸೆ ನನಗೆ ಇದೆ’ ಎಂದರು. “ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುಜೇÌವಾಲ ಅವರೊಂದಿಗೆ ನನ್ನ ಕೆಲವು ವಿಷಯಗಳನ್ನು ಹೇಳಿಕೊಳ್ಳುವುದಕ್ಕಾಗಿ ಸಮಯ ಕಾಯ್ದಿರಿಸಲು ತೀರ್ಮಾನಿಸಿದ್ದೇನೆ. ನನ್ನ ಮನದಾಳದ ಮಾತನ್ನು ಅವರಲ್ಲಿ ಹೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

40 ವರ್ಷಗಳಿಂದ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿ ದುಡಿಯುತ್ತಿರುವ ಡಿಕೆಶಿ ಒಂದು ಬಾರಿ ಮುಖ್ಯಮಂತ್ರಿಯಾಗುವುದನ್ನು ನೋಡುವ ಆಸೆ ನನ್ನದು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುಜೇàವಾಲ ಅವರೊಂದಿಗೆ ಮನದಾಳದ ಮಾತನ್ನು ಹೇಳಿಕೊಳ್ಳುತ್ತೇನೆ ಎಂದು ಹೇಳಿದರು.“ಮುಖ್ಯಮಂತ್ರಿ ಬದಲಾವಣೆ’ ಕುರಿತ ಚರ್ಚೆಗೆ ಬುಧವಾರವಷ್ಟೇ ಸಿದ್ದರಾಮಯ್ಯ ಅವರು ತೆರೆ ಎಳೆಯುವಂತೆ ಮಾತನಾಡಿದ್ದರು. ಇದಕ್ಕೆ ಪ್ರತಿಯಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ, “ನನಗೆ ಇನ್ನು ಬೇರೆ ಆಯ್ಕೆ ಏನಿದೆ? ಸಿಎಂಗೆ ಸಹಕಾರ ನೀಡುತ್ತೇನೆ’ ಎಂದು ಹೇಳಿದ್ದರು.

ಈ ಅವಧಿಯಲ್ಲಿ ಡಿಕೆಶಿ ಸಿಎಂ ಕಷ್ಟ: ಲಿಂಗಪ್ಪ

ಒಂದೆಡೆ ಶಾಸಕ ಇಕ್ಷಾಲ್ ಹುಸೇನ್ ಡಿ.ಕೆ.ಶಿವಕುಮಾ‌ರ್ ಅವರು ಸೆಪ್ಟೆಂಬ‌ರ್ ಬಳಿಕ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಿದ್ದರೆ, ಮತ್ತೂಂದೆಡೆ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರು, ಈ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಕಷ್ಟ. ಮೊದಲು ಅವರು ತಮ್ಮ ವರ್ತನೆ ಬದಲಿಸಬೇಕು. ಪ್ರತಿದಿನ ಜನರಿಗಾಗಿ ಒಂದು ಗಂಟೆ ಮೀಸಲಿಡಬೇಕು ಎಂದು ಹೇಳಿದ್ದಾರೆ.

ಬಿ.ಕೆ. ಹರಿಪ್ರಸಾದ್‌- ಡಿಸಿಎಂ ಡಿಕೆಶಿ ಭೇಟಿ

“ಮುಂದಿನ ಮೂರು ವರ್ಷ ನಾನೇ ಸಿಎಂ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮರುದಿನವೇ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.ಗುರುವಾರ ಬೆಳಗ್ಗೆಯೇ ಸದಾಶಿವ ನಗರದಲ್ಲಿರುವ ಡಿ.ಕೆ. ಶಿವಕುಮಾ‌ರ್ ನಿವಾಸಕ್ಕೆ ತೆರಳಿದ ಬಿ.ಕೆ. ಹರಿಪ್ರಸಾದ್, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಪಕ್ಷದಲ್ಲಿ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆ ಹಾಗೂ ಅದರ ಬೆನ್ನಲ್ಲೇ ನೀಡಿದ ಮುಖ್ಯಮಂತ್ರಿ ಹೇಳಿಕೆಯೂ ಚರ್ಚೆಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಅಹಿಂದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಹೈಕಮಾಂಡ್ ಜತೆಗೂ ಉತ್ತಮ ನಂಟು ಹೊಂದಿದ್ದಾರೆ.

ಶಿವಕುಮಾ‌ರ್ ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು; ಸಿಗುತ್ತದೆ. ಈ ವಿಷಯವನ್ನು ವರಿಷ್ಠರು ತೀರ್ಮಾನ ಮಾಡ ಬೇಕು. ಸದ್ಯಕ್ಕೆ ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಡಿಕೆಶಿ ಸಿಎಂ ಆಗುತ್ತಾರೆ ಎಂಬ ಭರವಸೆ ಇಂದೂ ಇದೆ. ನಾಳೆಯೂ ಇರುತ್ತದೆ.

ಡಿ.ಕೆ.ಸುರೇಶ್, ಮಾಜಿ ಸಂಸದ

ಡಿಕೆಶಿ ಅವರನ್ನು ಸಿಎಂ ಆಗಿ ಮಾಡಬೇಕು ಎಂಬುದು ನಮ್ಮ ಅಭಿಲಾಷೆ. ಪಕ್ಷ ಉಳಿಯಬೇಕು. 2028ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು. ಇದಕ್ಕೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು.

ಇಟ್ಬಾಲ್ ಹುಸೇನ್, ಶಾಸಕ

[t4b-ticker]
error: Content is protected !!