ಖ್ಯಾತ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ. ಚೆನ್ನೈನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ, ಪಕ್ಷದ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಈ ಘೋಷಣೆ ಮಾಡಿದರು.
ಚೆನ್ನೈ: ಖ್ಯಾತ ನಟಿ ಹಾಗೂ ರಾಜಕಾರಣಿ ಖುಷ್ಟೂ ಸುಂದರ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ. ಚೆನ್ನೈನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ. ಪಕ್ಷದ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಈ ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ. ಪ್ರೊ. ರಾಮ ಶ್ರೀನಿವಾಸನ್ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಆರ್. ತ್ಯಾಗರಾಜನ್ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು.
ಖುಷ್ಟೂ ರಾಜಕೀಯ ಹಿನ್ನೆಲೆ
2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಖುಷ್ಟೂ, 2021ರ ವಿಧಾನಸಭಾ ಚುನಾವಣೆಯಲ್ಲಿ ಚೆನ್ನೈನ ‘ಫೌಸಂಡ್ ಲೈಟ್ಸ್’ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಕ್ಕೂ ಮುನ್ನ ಅವರು ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿದ್ದರು.
ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಖುಷ್ಟೂ, “ನನ್ನ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರಿಗೆ ನಾನು ಆಭಾರಿಯಾಗಿದ್ದೇನೆ” ಎಂದು ಧನ್ಯವಾದ ಅರ್ಪಿಸಿದ್ದಾರೆ.
ಬಿಜೆಪಿಯ ಲೆಕ್ಕಾಚಾರವೇನು?
ತಮಿಳುನಾಡಿನಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಮಹಿಳಾ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಖುಷ್ಟೂ ಅವರ ತಾರಾ ವರ್ಚಸ್ಸು ಮತ್ತು ವಾಕ್ಚಾತುರ್ಯ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.ಮತ್ತೊಂದು ಪ್ರಮುಖ ಅಂಶವೆಂದರೆ, ಖುಷಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿರುವುದು. ತಮಿಳುನಾಡಿನಲ್ಲಿ ಸುಮಾರು 6% ಮುಸ್ಲಿಂ ಮತ್ತು 6.1% ಕ್ರೈಸ್ತ ಮತದಾರರಿದ್ದು, ಈ ಅಲ್ಪಸಂಖ್ಯಾತ ಸಮುದಾಯಗಳು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ನೇಮಕದ ಮೂಲಕ ಅಲ್ಪಸಂಖ್ಯಾತರನ್ನು ತಲುಪುವ ಸಂದೇಶವನ್ನು ಬಿಜೆಪಿ ರವಾನಿಸಿದೆ ಎನ್ನಲಾಗಿದೆ.











































