ಬಿಹಾರ್ SIR: ಆಧಾರ್, ಇತರೆ 11 ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಲು ಮತದಾರರಿಗೆ ಸುಪ್ರೀಂ ಕೋರ್ಟ್ ಅವಕಾಶ

Picture of Savistara

Savistara

Bureau Report

ಬಿಹಾರದಲ್ಲಿ ಮತದಾರರ ಪಟ್ಟಿಯ SIR ಪ್ರಕ್ರಿಯೆಯಲ್ಲಿ ಹೊರಗುಳಿದ ಮತದಾರರು ಭೌತಿಕ ಅರ್ಜಿ ಸಲ್ಲಿಕೆ ಜೊತೆಗೆ ಆನ್‌ಲೈನ್ ವಿಧಾನದ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು.

ನವದೆಹಲಿ: ಬಿಹಾರ ವಿಶೇಷ ಸಮಗ್ರ ಪರಿಷ್ಕರಣೆ (SIR)ಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದವರು ಆಧಾರ್ ಕಾರ್ಡ್ ಅಥವಾ ಯಾವುದೇ 11 ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಭಾರತೀಯ ಚುನಾವಣಾ ಆಯೋಗ ಅವಕಾಶ ನೀಡಬೇಕೆಂದು ಶುಕ್ರವಾರ ಸುಪ್ರೀಂ ಕೋರ್ಟ್ ಸೂಚಿಸಿತು.ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ SIR ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. SIR ಸಮಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಜನರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಬಿಹಾರ ರಾಜಕೀಯ ಪಕ್ಷಗಳು ಸಹಾಯ ಮಾಡಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 65 ಲಕ್ಷಕ್ಕೂ ಹೆಚ್ಚು ಮತದಾರರಿಗೆ ರಾಜಕೀಯ ಪಕ್ಷಗಳು ಏಕೆ ಸಹಾಯ ಮಾಡಿಲ್ಲ ಎಂದು ಪೀಠ ಪ್ರಶ್ನಿಸಿತು. “ರಾಜಕೀಯ ಪಕ್ಷಗಳು ತಮ್ಮ ಕೆಲಸಗಳನ್ನು ಮಾಡುತ್ತಿಲ್ಲ. ನಿಮ್ಮ BLAಗಳು (ಬೂತ್-ಲೆವೆಲ್ ಏಜೆಂಟ್‌ಗಳು) ಏನು ಮಾಡುತ್ತಿದ್ದಾರೆ? ರಾಜಕೀಯ ಪಕ್ಷಗಳು ಮತದಾರರಿಗೆ ಸಹಾಯ ಮಾಡಬೇಕು” ಎಂದು ಪೀಠ ತಿಳಿಸಿತು.

ರಾಜಕೀಯ ಪಕ್ಷಗಳ ಸುಮಾರು 1.6 ಲಕ್ಷ BLA ಗಳು ಇದ್ದರೂ ಕೇವಲ ಎರಡು ಆಕ್ಷೇಪಣೆಗಳು ಬಂದಿವೆ ಎಂಬುದನ್ನು ಪೀಠ ಗಮನಿಸಿತು. BLA ಗಳು ನೀಡಿದ ಆಕ್ಷೇಪಣೆಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ಅಂಗೀಕರಿಸುತ್ತಿಲ್ಲ ಎಂಬ ವಾದವೂ ಸುಪ್ರೀಂ ಕೋರ್ಟ್ ಮುಂದೆ ಬಂದಿತು.ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ SIR ಪ್ರಕ್ರಿಯೆಯಲ್ಲಿ ಹೊರಗುಳಿದ ಮತದಾರರು ಭೌತಿಕ ಅರ್ಜಿ ಸಲ್ಲಿಕೆ ಜೊತೆಗೆ ಆನ್‌ಲೈನ್ ವಿಧಾನದ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಪೀಠ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು. ಆಧಾರ್ ಕಾರ್ಡ್ ಅಥವಾ ರೆಸಿಡೆನ್ಸಿಯ ಯಾವುದೇ ದಾಖಲೆಗಳೊಂದಿಗೆ ಆನ್​ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕೆಂದು ತಿಳಿಸಿತು.

SIR ಪ್ರಕ್ರಿಯೆ ಮತದಾರರ ಸ್ನೇಹಿಯಾಗಿರಬೇಕು ಎಂದು ಒತ್ತಿ ಹೇಳಿದ ಪೀಠ, ಜನರು ತಮ್ಮ ದೂರುಗಳನ್ನು ಸಲ್ಲಿಸುವಲ್ಲಿ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರಿಗೆ ನಿರ್ದೇಶನಗಳನ್ನು ನೀಡುವಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶಿಸಿತು.ಮತದಾರರ ಪಟ್ಟಿಯಿಂದ ಹೊರಗುಳಿದವರು ನಮೂನೆ-6 ಜೊತೆ ಆಧಾರ್ ಕಾರ್ಡ್ ಅಥವಾ ಚುನಾವಣೆ ಆಯೋಗವು ತಿಳಿಸಿರುವ ಯಾವುದೇ 11 ಗುರುತಿನ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಲು ಸಹಾಯ ಮಾಡಲು ಏಜೆಂಟ್‌ಗಳಿಗೆ ಸೂಚನೆ ನೀಡಬೇಕೆಂದು ಪಕ್ಷಗಳಿಗೆ ಪೀಠ ಸೂಚಿಸಿ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ನಿಗದಿಪಡಿಸಿದೆ.ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಪಟ್ಟಿಯಿಂದ ತೆಗೆದುಹಾಕಲು ಪ್ರಸ್ತಾಪಿಸಲಾದ 65 ಲಕ್ಷ ಮತದಾರರ ವಿವರಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಆಗಸ್ಟ್ 14ರಂದು ನಡೆದ ವಿಚಾರಣೆ ವೇಳೆ ಕೋರ್ಟ್ ಸೂಚಿಸಿತ್ತು.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!