FIFA 2026: ‘ಏನು ಬೇಕಾದರೂ ಸಾಧಿಸಬಹುದು’ ಇದು ಕೇಪ್ ವರ್ಡ್ ಕಲಿಸಿದ ಪಾಠ

Picture of Savistara

Savistara

Bureau Report

ವಿಶ್ವಚಾಂಪಿಯನ್ ಅರ್ಜೆಂಟೀನಾ ಎದುರು ನಡೆದ ’32ರ ಘಟ್ಟದ’ ಪಂದ್ಯದಲ್ಲಿ 3 – 2 ಗೋಲುಗಳ ಅಂತರದಿಂದ ಸೋಲು ಕಂಡಿರುವ ಕೇಪ್ ವರ್ಡ್, ಫಿಫಾ ವಿಶ್ವಕಪ್-2026 ಟೂರ್ನಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದೆ.

ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದರೂ, ‘ಯಾರು ಬೇಕಾದರೂ, ಏನನ್ನಾದರೂ ಸಾಧಿಸಬಹುದು’ ಎಂಬ ಸ್ಫೂರ್ತಿಯ ಸಂದೇಶವನ್ನು ಜಗತ್ತಿಗೆ ಸಾರಿ ಹೊರಟಿದೆ.ಮಿಯಾಮಿ ಕ್ರೀಡಾಂಗಣದಲ್ಲಿ ಶನಿವಾರ ಮುಂಜಾನೆ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರ ಎದುರು ಛಲ ಬಿಡದೆ ಆಡಿದ ಕೇಪ್ ವರ್ಡ್ ಪಡೆ, ನಿಗದಿತ ಸಮಯ ಹಾಗೂ ಹೆಚ್ಚುವರಿ ಅವಧಿ; ಎರಡರಲ್ಲೂ ಸಮಬಲದ ಹೋರಾಟ ನಡೆಸಿತು.90 ನಿಮಿಷಗಳ ಆಟ ಮುಗಿದಾಗ ಪಂದ್ಯವು 1 – 1 ಅಂತರದಿಂದ ಸಮವಾಗಿತ್ತು. ಹೀಗಾಗಿ, ಹೆಚ್ಚುವರಿ ಅವಧಿಯ ಆಟ ನಡೆಯಿತು. ಆರಂಭದಲ್ಲೇ (92ನೇ ನಿಮಿಷ) ಗೋಲು ಬಾರಿಸಿದ ಅರ್ಜೆಂಟೀನಾ 2 – 1 ಅಂತರದ ಮುನ್ನಡೆ ಸಾಧಿಸಿತು. ಪ್ರತಿಯಾಗಿ 103ನೇ ನಿಮಿಷದಲ್ಲಿ ಗೋಲು ಗಳಿಸಿದ ಕೇಪ್ ವರ್ಡ್, ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ ಎಂಬುದನ್ನು ಪ್ರತಿಪಾದಿಸಿತು.

ಆದರೆ, 111ನೇ ನಿಮಿಷದಲ್ಲಿ ವರ್ಡ್ ಪಡೆಗೆ ಅದೃಷ್ಟ ಕೈಕೊಟ್ಟಿತು. ಅರ್ಜೆಂಟೀನಾದ ಕ್ರಿಸ್ಟಿಯನ್ ರೊಮೆರೊ ಅವರು ಬಾರಿಸಿದ ಚೆಂಡನ್ನು ಹೆಡರ್ ಮೂಲಕ ತಡೆಯಲು ಹೋದ ಡೈನಿ ಬೋರ್ಗೆಸ್, ಎಡವಟ್ಟು ಮಾಡಿದರು. ಅವರ ತಲೆಗೆ ತಾಗಿದ ಚೆಂಡು ನೇರವಾಗಿ ಗೋಲು ಪೆಟ್ಟಿಗೆ ಸೇರಿತು. ಇದರೊಂದಿಗೆ ಅರ್ಜೆಂಟೀನಾ ಜಯ ಖಾತ್ರಿಯಾಯಿತು. ಕೇಪ್ ವರ್ಡ್ ಪಾಲಿಗೆ ವಿಶ್ವಕಪ್‌ ಅಭಿಯಾನ ಮುಗಿಯಿತು.

5 ಲಕ್ಷ ಜನಸಂಖ್ಯೆಯ ಪುಟ್ಟ ದೇಶ

ಕೇಪ್ ವರ್ಡ್ ಕೇವಲ 5.3 ಲಕ್ಷ ಜನಸಂಖ್ಯೆಯುಳ್ಳ, ಪಶ್ಚಿಮ ಆಫ್ರಿಕಾದ ಕರಾವಳಿಯಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ.ಟೂರ್ನಿಯ ಆರಂಭಿಕ ಹಂತದಲ್ಲಿ ಸ್ಪೇನ್, ಉರುಗೈ ಮತ್ತು ಸೌದಿ ಅರೇಬಿಯಾ ತಂಡಗಳೊಂದಿಗೆ ‘ಎಚ್’ ಗುಂಪಿನಲ್ಲಿದ್ದ ಈ ತಂಡ, ಒಂದೇ ಒಂದು ಪಂದ್ಯವನ್ನೂ ಸೋತಿರಲಿಲ್ಲ. ಸ್ಪೇನ್, ಸೌದಿ ಅರೇಬಿಯಾ ಎದುರು ಗೋಲಿಲ್ಲದೆ ಡ್ರಾ ಮಾಡಿಕೊಂಡಿದ್ದ ಈ ತಂಡ, ಉರುಗೈ ಎದುರು 2 – 2 ಅಂತರದಿಂದ ಸಮಬಲದ ಹೋರಾಟ ನಡೆಸಿತ್ತು.ಅಂದಹಾಗೆ, ಕೇಪ್ ವರ್ಡ್ ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲೆಂಬುದು ವಿಶೇಷ.

ಸ್ಟಾರ್ ಆದ ವೊಜಿನ್ಹಾಗೆ 2 ಕೋಟಿ ಫಾಲೋವರ್ಸ್

ಕೇಪ್ ವರ್ಡ್ ಗೋಲ್ ಕೀಪರ್ ವೊಜಿನ್ಹಾ ಅವರು ಗುಂಪು ಹಂತದ ಮೊದಲ ಪಂದ್ಯದಲ್ಲಿ ಅಮೋಘ ಸಾಮರ್ಥ್ಯ ತೋರುತ್ತಿದ್ದಂತೆ ಸ್ಟಾ‌ರ್ ಪಟ್ಟಕ್ಕೇರಿದರು. ಸ್ಪೇನ್ ವಿರುದ್ಧದ ಹೋರಾಟದಲ್ಲಿ ಅಕ್ಷರಶಃ ಮಹಾಗೋಡೆಯಂತೆ ನಿಂತ ಅವರು, ಒಂದೇ ಒಂದು ಸಲುವೂ ಚೆಂಡು ಗೋಲು ಪೆಟ್ಟಿಗೆಯನ್ನು ಸೇರದಂತೆ ನೋಡಿಕೊಂಡರು.ಆ ಪಂದ್ಯದಲ್ಲಿ ಸ್ಪೇನ್ ಪಡೆ ಒಟ್ಟು 27 ಬಾರಿ ಗೋಲು ಬಾರಿಸುವ ಪ್ರಯತ್ನ ಮಾಡಿತ್ತು. ಅದರಲ್ಲಿ 8 ಶಾಟ್‌ಗಳು ನೇರವಾಗಿ ಗೋಲು ಪೆಟ್ಟಿಗೆಯತ್ತಲೇ ನುಗ್ಗಿದ್ದವು. ಅವೆಲ್ಲವನ್ನೂ ವೊಜಿನ್ಹಾ ಹಿಮ್ಮೆಟ್ಟಿಸಿ ನಿಂತಿದ್ದರು.

ಅದರಲ್ಲೂ, ಆಕ್ರಮಣಕಾರಿ ಆಟದ ಮೂಲಕ ಸವಾರಿ ಮಾಡಲು ಹೊರಟ ಸ್ಪೇನ್ ತಂಡವನ್ನು ಕಂಗೆಡಿಸಿದ ವೊಜಿನ್ಹಾ ವಯಸ್ಸು 40 ಎಂಬುದು ಕ್ರೀಡಾ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದೆ.ವಿಶೇಷವೆಂದರೆ, ಸ್ಪೇನ್ ವಿರುದ್ಧದ ಪಂದ್ಯಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೊಜಿನ್ಹಾ ಅವರನ್ನು ಸುಮಾರು 50,000 ಮಂದಿ ಫಾಲೊ ಮಾಡುತ್ತಿದ್ದರು. ಆ ಸಂಖ್ಯೆ ಈಗ 2 ಕೋಟಿ ದಾಟಿದೆ.’ವಿಶ್ವಕಪ್‌ನಲ್ಲಿ ಆಡಬೇಕೆಂಬುದು ನಮ್ಮ ಬಹುದಿನಗಳ ಕನಸಾಗಿತ್ತು. ಅದನ್ನು ನನಸಾಗಿಸಿಕೊಂಡಿದ್ದೇವೆ. ನನಗೆ ಅಥವಾ ನಮ್ಮ ತಂಡಕ್ಕೆ ಮಾತ್ರವಲ್ಲ, ಇಡೀ ಕೇಪ್ ವರ್ಡ್ ಪಾಲಿಗೆ ಈ ಟೂರ್ನಿ ಅತ್ಯಮೂಲ್ಯವಾದದ್ದು’ ಎಂದು ವೊಜಿನ್ನಾ ಹೇಳಿದ್ದಾರೆ.“ಅರ್ಜೆಂಟೀನಾ ಎದುರಿನ ಸೋಲು ನಿರಾಸೆ ಮೂಡಿಸಿದೆ. ಆದರೆ, ಏನೆಲ್ಲ ಸಾಧಿಸಿದ್ದೇವೋ ಆ ಬಗ್ಗೆ ಹೆಮ್ಮೆ ಇದೆ. ನನ್ನ ತಂಡದ ಎಲ್ಲರೂ ಅದ್ಭುತವಾಗಿ ಆಡಿದರು. ಗರ್ವದಿಂದ ತಲೆ ಎತ್ತಿಕೊಂಡೇ ಹೊರ ನಡೆಯುತ್ತೇವೆ’ ಎಂದು ಹೇಳಿದ್ದಾರೆ.

ಪಿಕೊ ಈಗ ಐರ್ಲೆಂಡ್‌ನಲ್ಲೂ ಹೀರೊ

ಐರ್ಲೆಂಡ್‌ನ ‘ಶಾಮ್ರಾಕ್ ರೋವರ್ಸ್’ ಕ್ಲಬ್ ಪರ ಆಡುವ ಕೇಪ್ ವರ್ಡ್ ಆಟಗಾರ ಪಿಕೋ ಲೋಪ್ಸ್, ಅಲ್ಲಿಯೂ (ಐರ್ಲೆಂಡ್‌ನಲ್ಲೂ) ಹೀರೊ ಆಗಿದ್ದಾರೆ. ಅವರ ತಾಯಿ ಐರ್ಲೆಂಡ್ ಮೂಲದವರು. ತಂದೆ, ಕೇಪ್ ವರ್ಡ್‌ನವರು. ಪಿಕೊ ಕೇಪ್ ವರ್ಡ್‌ಲ್ಲಿ ಬ್ಲೂ ಶಾರ್ಕ್ಸ್ ತಂಡದ ಪರ ಆಡುತ್ತಾರೆ.ವಿಶ್ವಕಪ್‌ ಅಭಿಯಾನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಪಿಕೊ, ‘ಈ ಸಾಧನೆ ಮೂಲಕ, ಸಣ್ಣ ರಾಷ್ಟ್ರಗಳು ಕೂಡ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿದ್ದೇವೆ. ನೀವು ಏನನ್ನು ಬೇಕಾದರೂ ಸಾಧಿಸಲು ಸಾಧ್ಯ ಎಂಬ ಕನಸನ್ನು ಕಾಣಬಹುದು ಮತ್ತು ಅದನ್ನು ನನಸಾಗಿಸಿಕೊಳ್ಳುತ್ತೇವೆ ಎಂದು ಪೂರ್ಣ ಮನಸ್ಸಿನಿಂದ ನಂಬಬಹುದು’ ಎಂದು ಹೇಳಿದ್ದಾರೆ.ಐರ್ಲೆಂಡ್‌ನಲ್ಲಿ ಜನಿಸಿದ ಅವರು, ‘ಈಗ ಇಲ್ಲಿರುವ ನಮ್ಮ ತಂಡವು, ಕೇಪ್ ವರ್ಡ್‌ ಯುವಕರನ್ನು ಮತ್ತೊಮ್ಮೆ ಈ ಹಂತಕ್ಕೆ ತಲುಪಲು ಪ್ರೇರಿಪಿಸಲಿದೆ ಎಂದು ಭಾವಿಸಿದ್ದೇನೆ. ಏನೆಲ್ಲ ಸಾಧ್ಯ ಎಂಬುದನ್ನು ನಾವು ತೋರಿಸಿದ್ದೇವೆ. ಈ ಹಂತ ತಲುಪಿದಾಗ, ವಿಶ್ವದ ಅತ್ಯುತ್ತಮ ತಂಡಗಳ ಎದುರು ಸೆಣಸಾಡಿದಾಗ ಹೇಗೆ ಆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ’ ಎಂದಿದ್ದಾರೆ.

‘ವಿಶ್ವಕಪ್‌ಗೆ ಅರ್ಹತೆ ಪಡೆದಾಗ, ನಾವೂ ಈ ಹಂತ ತಲುಪಿದ್ದೇವೆ ಎಂಬುದನ್ನು ತೋರಿಸಿದ್ದೆವು. ಗುಂಪು ಹಂತ ಮತ್ತು ನಾಕೌಟ್ ಪಂದ್ಯದಲ್ಲಿ ನೀಡಿದ ಪ್ರದರ್ಶನದ ಮೂಲಕ ವಿಶ್ವದ ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸಬಲ್ಲೆವು ಎಂಬುದನ್ನೂ ಸಾರಿದ್ದೇವೆ’ ಎಂದು ಹರ್ಷಿಸಿದ್ದಾರೆ.’ಈ ವಿಶ್ವಕಪ್‌ನಿಂದ ನಮಗೆ ದೊರೆತ ಮತ್ತೊಂದು ಖುಷಿಯ ಸಂಗತಿ ಏನೆಂದರೆ, ‘ಕೇಪ್ ವರ್ಡ್’ ಎಂದರೇನು ಎಂದು ಇನ್ನುಮುಂದೆ ಯಾರೊಬ್ಬರೂ ಕೇಳುವಂತಿಲ್ಲ. ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದ್ದೇವೆ. ಒಂದು ತಂಡವಾಗಿ ನಮ್ಮ ಆಟ ಹೇಗಿರಲಿದೆ ಎಂಬುದನ್ನು ತೋರಿಸಿದ್ದೇವೆ. ಫುಟ್‌ಬಾಲ್ ಆಡ ಬಯಸುವ ಜಗತ್ತಿನ ಎಲ್ಲರನ್ನೂ ಹುರಿದುಂಬಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

[t4b-ticker]
error: Content is protected !!