ಬೇಡಿಕೆಗೆ ಸ್ಪಂದಿಸದೇ ವೇತನ ಪರಿಷ್ಕರಣೆ:ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾಸಮಿತಿ

Picture of Savistara

Savistara

Bureau Report

ಬೆಂಗಳೂರು: 2024ರ ಜನವರಿ 1ರಿಂದ ವೇತನ ಪರಿಷ್ಕರಣೆಮಾಡುವ ಬದಲು 2025ರ ಏಪ್ರಿಲ್‌ನಿಂದ ಪರಿಷ್ಕರಿಸುವ ಮೂಲಕ ಸಾರಿಗೆ ನಿಗಮಗಳ ನೌಕರರಿಗೆ ಅನ್ಯಾಯ ಮಾಡಲಾಗಿದೆ. ರಾಜಿ ಸಂಧಾನ ಸಭೆಯಲ್ಲಿ ನೀಡಿದ ಭರವಸೆ ಈಡೇರಿಸದೇ ಪರಿಷ್ಕೃತ ವೇತನ ಜಾರಿ ಮಾಡಿರುವುದನ್ನು ವಿರೋಧಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ಹೈಕೋರ್ಟ್ ನೀಡಿದ ಆದೇಶದ ಅನ್ವಯ ಮೇ 25ರಂದು ಕಾರ್ಮಿಕ ಆಯುಕ್ತರು ಸಂಧಾನ ಸಭೆ ಕರೆದಿದ್ದರು. ಅದರಲ್ಲಿ ಜಂಟಿ ಕ್ರಿಯಾ ಸಮಿತಿ ಪರಿಷ್ಕೃತ ಬೇಡಿಕೆಗಳನ್ನು ಸಲ್ಲಿಸಿತ್ತು. ಪಟ್ಟಿಯನ್ನು ಆಡಳಿತ ಮಂಡಳಿಯ ಮುಂದಿಟ್ಟು ಮುಂದಿನ ರಾಜಿ ಸಂಧಾನ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಸಭೆಯಲ್ಲಿ ತಿಳಿಸಲಾಗಿತ್ತು. ಜೂನ್ 10ಕ್ಕೆ ನಡೆದ ರಾಜಿ ಸಂಧಾನ ಸಭೆಯನ್ನು ಜೂನ್ 30ಕ್ಕೆ ಮುಂದೂಡಲಾಗಿತ್ತು. ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲು ಸಭೆಯೊಂದನ್ನು ಆಯೋಜಿಸಲಾಗುವುದು. ಹೈಕೋರ್ಟ್ ಆದೇಶವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ಸಭೆಯಲ್ಲಿ ಭರವಸೆ ನೀಡಿದ್ದರು.ಆದರೆ, ಸಭೆ ನಡೆಸದೇ, ಪರಿಷ್ಕೃತ ಬೇಡಿಕೆಗಳನ್ನು ಈಡೇರಿಸದೇ, ಆಡಳಿತ ಮಂಡಳಿಯ ಸಭೆಯಲ್ಲಿ ಒಪ್ಪಿಗೆಯನ್ನೂ ಪಡೆಯದೇ ವೇತನ ಪರಿಷ್ಕರಣೆಯ ಸುತ್ತೋಲೆ ಹೊರಡಿಸಲಾಗಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಎಂದೂ ನಡೆಯದ ಅತಿ ಕೆಟ್ಟ, ಕಾರ್ಮಿಕ ವಿರೋಧಿ ಬೆಳವಣಿಗೆ. ಹೈಕೋರ್ಟ್‌ಗೆ ತೋರಿದ ಅಗೌರವ. ಮುಂದೆ ಹೋರಾಟದ ದಾರಿ ಹಿಡಿಯಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಬಿ. ಜಯದೇವರಾಜೇ ಅರಸು ತಿಳಿಸಿದ್ದಾರೆ.

[t4b-ticker]
error: Content is protected !!