ಇಂಧನ ರಿಲೀಫ್ ಯಾವಾಗ?ಕುಸಿದ ಕಚ್ಚಾತೈಲ ದರ | ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸಿದ ನಯಾರಾ| ಸರಕಾರಿ ಒಡೆತನದ ಸಂಸ್ಥೆಗಳಿಂದ ತೈಲ ದರ ಇಳಿಕೆಗೆ ಮೀನ-ಮೇಷ

Picture of Savistara

Savistara

Bureau Report

ಹೊಸದಿಲ್ಲಿ: ಹರ್ಮುಜ್ ಬಿಕ್ಕಟ್ಟು ಶಮನದಿಂದ ಜಾಗತಿಕಕಚ್ಚಾತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾದ ಬೆನ್ನಲ್ಲೇ, ಖಾಸಗಿ ಇಂಧನ ಮಾರಾಟ ಸಂಸ್ಥೆ ‘ನಯಾರಾ’ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ ಲೀಟರ್‌ಗೆ 5 ರೂ. ಮತ್ತು 3 ರೂ. ಇಳಿಕೆ ಮಾಡಿದೆ. ಆ ಮೂಲಕ ದರ ಇಳಿಕೆಗೆ ಮೇಲ್ಪಂಕ್ತಿ ಹಾಕಿದೆ.ದೇಶಾದ್ಯಂತ ನಯಾರಾ ಹೊಂದಿರುವ 7,000ಕ್ಕೂ ಹೆಚ್ಚು ಬಂಕ್ಗಳಲ್ಲಿ ತಕ್ಷಣದಿಂದ ಬೆಲೆ ಇಳಿಕೆ ಜಾರಿ ಮಾಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ಅಮೆರಿಕ-ಇರಾನ್ ಯುದ್ಧದ ವೇಳೆ ಜಾಗತಿಕ ಕಚ್ಚಾತೈಲ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದಾಗ ಪೆಟ್ರೋಲ್, ಡೀಸೆಲ್ ದರಗಳನ್ನು “ನಯಾರಾ’ ಹೆಚ್ಚಿಸಿತ್ತು. ಈಗ ದರ ಇಳಿಕೆಯ ಮೂಲಕಗ್ರಾಹಕರಿಗೆ ಲಾಭವನ್ನು ವರ್ಗಾಯಿಸಿದೆ.

ಸರಕಾರಿ ಕಂಪನಿಗಳ ಸರದಿ ಯಾವಾಗ?

ಕಚ್ಚಾತೈಲ ಪೂರೈಕೆ ವ್ಯತ್ಯಯದಿಂದಾಗಿ ಪೆಟ್ರೋಲ್, ಡೀಸೆಲ್ ದರಗಳನ್ನು ಲೀಟರ್‌ಗೆ ಸುಮಾರು 8 ರೂ. ಹೆಚ್ಚಿಸಿರುವ ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ದರ ಇಳಿಕೆಗೆ ಕಾದು ನೋಡುವ ತಂತ್ರ ಅನುಸರಿಸುತ್ತಿವೆ. ಯುದ್ಧದ ಸಮಯದಲ್ಲಿ ಬ್ಯಾರಲ್‌ಗೆ 120 ಡಾಲರ್ ದಾಟಿದ್ದ ಕಚ್ಚಾತೈಲ ದರ ಪ್ರಸ್ತುತ 60-70 ಡಾಲರ್‌ಗೆ ಇಳಿದಿರುವ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಕಂಪನಿಗಳೂ ಇದೇ ಹಾದಿ ತುಳಿಯುವ ಸಾಧ್ಯತೆಯಿದೆ. ಒಂದು ವೇಳೆ ಡೀಸೆಲ್ ದರ ಇಳಿಕೆಯಾದರೆ, ಸರಕು-ಸಾಗಣೆ ವೆಚ್ಚ ಕಡಿಮೆಯಾಗುವ ಮೂಲಕ ದಿನಬಳಕೆ ವಸ್ತುಗಳ ಬೆಲೆಯೂ ಇಳಿಮುಖವಾಗುವ ನಿರೀಕ್ಷೆಯಿದೆ.ಜಾಗತಿಕ ಪೇಟೆಯಲ್ಲಿ ಕಚ್ಚಾತೈಲ ದರ ಸ್ಥಿರೀಕರಣದ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಈ ಹಿಂದೆ ಹೇಳಿದ್ದರು.

[t4b-ticker]
error: Content is protected !!