ಮಾಸ್ಕೊ: ರಷ್ಯಾದ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿ ಉಕ್ರೇನ್ ದಾಳಿ ನಡೆಸುತ್ತಿದೆ. ಇದರಿಂದ, ರಷ್ಯಾದಲ್ಲಿ ತೀವ್ರ ಇಂಧನ ಕೊರತೆ ಎದುರಾಗಿದೆ.
ಲಕ್ಷಾಂತರ ರಷ್ಯನ್ನರಿಗೆ ಸಂಕಷ್ಟ ಎದುರಾಗಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.ಕಳೆದ ಮಾರ್ಚ್‌ನಿಂದ ರಷ್ಯಾ ಮತ್ತು ಅದರ ಆಕ್ರಮಿತ ಕ್ರಿಮಿಯಾದಲ್ಲಿನ ತೈಲ ಸಂಸ್ಕರಣ ಘಟಕಗಳು ಮತ್ತು ಇತರ ಇಂಧನ ಸೌಲಭ್ಯಗಳ ಮೇಲೆ ಉಕ್ರೇನ್ 50ಕ್ಕೂ ಹೆಚ್ಚಿನ ದಾಳಿಗಳನ್ನು ನಡೆಸಿದೆ.ಮಾಸ್ಕೊದಲ್ಲಿರುವ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್ ಎರಡು ಬಾರಿ ದಾಳಿ ನಡೆಸಿದೆ. ಜೂನ್ 18ರಂದು ನಡೆದ ಎರಡನೇ ದಾಳಿಯಿಂದ ಬೆಂಕಿ ಹೊತ್ತಿಕೊಂಡು ಪ್ರಮುಖ ಉಪಕರಣಗಳಿಗೆ ಹಾನಿಯಾಗಿತ್ತು.
ಅನೇಕ ಪ್ರದೇಶಗಳಲ್ಲಿ ಪಡಿತರ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ವಾಹನ ಚಾಲಕರು ಇಂಧನ ತುಂಬಲು ಗಂಟೆಗಟ್ಟಲೆ ಸಾಲಿನಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾಕ್ಕೆ ಎದುರಾಗಿರುವ ಈ ಸಮಸ್ಯೆಯನ್ನು ಅಧ್ಯಕ್ಷ ಬ್ಲಾದಿಮಿರ್ ಪುಟಿನ್ ಗಂಭೀರವಾಗಿ ಪರಿಗಣಿಸಿಲ್ಲ. ಕದನ ವಿರಾಮ ಪ್ರಸ್ತಾವಗಳನ್ನು ತಿರಸ್ಕರಿಸಿದ್ದಾರೆ. ಗುರಿ ಈಡೇರುವವರೆಗೂ ಯುದ್ಧ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.’ರಷ್ಯಾದ ಇಂಧನ ಮೂಲಸೌಕರ್ಯಗಳ ಮೇಲಿನ ಉಕ್ರೇನ್ ದಾಳಿಯು, ಯುದ್ಧದಲ್ಲಿ ಉಂಟಾದ ನಷ್ಟಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನದ ಭಾಗವಾಗಿದೆ’ ಎಂದು ಪುಟಿನ್ ಹೇಳಿದ್ದಾರೆ.’ಉಕ್ರೇನ್‌ನ ದಾಳಿಗಳಿಂದಾಗಿ ಇಂಧನ ಮೂಲಸೌಕರ್ಯಗಳಿಗೆ ವ್ಯಾಪಕವಾಗಿ ಹಾನಿ ಉಂಟಾಗಿದೆ. ಇವುಗಳ ದುರಸ್ತಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ಸಮಯವೂ ಹಿಡಿಯಲಿದೆ’ ಎಂದು ಮ್ಯಾಕ್ರೋ ಅಡ್ಡೆಸರಿ ಸಂಸ್ಥೆಯ ಸಿಇಒ ಕ್ರಿಸ್ ವೀಫರ್ ಹೇಳಿದ್ದಾರೆ.ಉಕ್ರೇನ್ ದಾಳಿಗೆ ಪ್ರತಿಯಾಗಿ ರಷ್ಯಾದ ಸೇನೆಯು ಗುರುವಾರ ರಾತ್ರಿಯಿಡೀ ಕೀವ್ ನಗರದ ಮೇಲೆ ಗುಂಡಿನ ದಾಳಿ ನಡೆಸಿದ್ದು, 30 ಮಂದಿ ಮೃತಪಟ್ಟಿದ್ದಾರೆ.











































