ಮಂಗಳೂರು, ಜೂ. 30: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆ ಮುಂದುವರಿದಿದೆ.ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಕರಾಯ, ಬೆಳ್ತಂಗಡಿ, ಮಡಂತ್ಯಾರು, ಗುರುವಾಯನಕೆರೆ, ನೆಲ್ಯಾಡಿ, ಕೊಕ್ಕಡ, ಉಜಿರೆ, ಧರ್ಮಸ್ಥಳ, ಬಂಟ್ವಾಳ, ಕಲ್ಲಡ್ಕ ಪೆರುವಾಯಿ, ಕನ್ಯಾನ, ಮೂಡುಬಿದಿರೆ, ಉಳ್ಳಾಲ, ಸುರತ್ಕಲ್ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಮುಂಜಾನೆ ಬಿರುಸಿನ ಮಳೆಯಾಗಿ ಮಧ್ಯಾಹ್ನವರೆಗೆ ಮಳೆ ತುಸು ಬಿಡುವು ನೀಡಿತ್ತು. ಬಳಿಕ ಬಿರುಸಿ ನಿಂದ ಕೂಡಿದ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.ಜಿಲ್ಲೆಯಲ್ಲಿ 17 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 77 ವಿದ್ಯುತ್ ಕಂಬಗಳು ಧರೆಗುರುಳಿವೆ. ಮುನ್ನೆಚ್ಚರಿಕೆ ಉದ್ದೇಶದಿಂದ 30 ಮಂದಿಯ ಎನ್‌ಡಿಆರ್‌ಎಫ್ ತಂಡ ಪುತ್ತೂರಿನಲ್ಲಿ ಎಸ್‌ಡಿ ಆರ್‌ಎಫ್ 25 ಮಂದಿಯ ತಂಡ ಮಂಗಳೂರಿನಲ್ಲಿ ಮತ್ತು 10 ಮಂದಿಯ ತಂಡ ಸುಬ್ರಹ್ಮಣ್ಯದಲ್ಲಿ ಸನ್ನದ್ಧವಾಗಿದೆ.ಜೂ. 30ರಂದು ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ದ. ಕ. ಜಿಲ್ಲೆಯಲ್ಲಿ 44 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 57.6, ಬಂಟ್ವಾಳ 38.7, ಮಂಗಳೂರು 37.6, ಪುತ್ತೂರು 27.1, ಸುಳ್ಯ 34.3, ಮೂಡುಬಿದಿರೆ 45.3, ಕಡಬ 44.9, ಮೂಲ್ಕಿ 28.7, ಉಳ್ಳಾಲದಲ್ಲಿ 56.2 ಮಿ.ಮೀ. ಮಳೆಯಾಗಿದೆ.
2 ದಿನ ಆರೆಂಜ್ ಅಲರ್ಟ್
ಕರಾವಳಿಭಾಗದಲ್ಲಿ ಜು. 1, 2ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ವೇಳೆ ಗುಡುಗು -ಸಿಡಿಲಿನಿಂದ ಕೂಡಿದ ಭಾರೀ ಮಳೆ ಮತ್ತು 40ರಿಂದ 60 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮೀನು ಗಾರರು ಸಮುದ್ರಕ್ಕೆ ಇಳಿಯಬಾರದೆಂದು ಎಚ್ಚರಿಕೆ ನೀಡಲಾ ಗಿದೆ. ಜು. 3 ರಿಂದ 6ರ ವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












































