ನವದೆಹಲಿ : ರಾಜ್ಯಕ್ಕೆ 15ನೇ ಹಣಕಾಸು ಆಯೋಗದಶಿಫಾರಸಿನಂತೆ 2025-26ನೇ ಸಾಲಿನಲ್ಲಿ ಬಾಕಿ ಇರುವ ₹2186 ಕೋಟಿ ಕೂಡಲೇ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿಂದು ನಡೆದ 16ನೇ ಹಣಕಾಸು ಆಯೋಗದ ಶಿಫಾರಸು, ಕಾರ್ಯಾಚರಣೆ ಮಾರ್ಗಸೂಚಿಗಳು, ಅನುದಾನ ಬಿಡುಗಡೆ ಪ್ರಕ್ರಿಯೆ, ಅನುಸರಣೆ ಷರತ್ತುಗಳು, ಪ್ರಮುಖ ಸವಾಲುಗಳು ಮತ್ತು ಅವುಗಳಿಗೆ ಪರಿಹಾರ ಕುರಿತಂತೆ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಈ ಒತ್ತಾಯ ಮಾಡಿದರು.ತತ್ಸಂಬಂಧ ಕೇಂದ್ರ ಪಂಚಾಯತ್ ರಾಜ್ ಇಲಾಖೆ ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೆ ರಾಜ್ಯ ಪ್ರತಿಕ್ರಿಯಿಸಿದೆ ಮತ್ತು ನಿರಂತರ ಅನುಸರಣೆ ಮಾಡಿದೆ. ಆದಾಗ್ಯೂ, 2025-26 ರ ಸಾಲಿನ ಅನುದಾನವನ್ನು ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗಿಲ್ಲ ಎಂದು ತಿಳಿಸಿದರು.ವಿನಾಕಾರಣ ಹಣ ಬಿಡುಗಡೆ ವಿಳಂಬ ಮಾಡುವುದರಿಂದ ರಾಜ್ಯದ ಅಭಿವೃದ್ಧಿಯ ಮೇಲಾಗುವ ದುಷ್ಪರಿಣಾಮಗಳನ್ನು ವಿವರಿಸಿದ ಅವರು, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಹಂಚಿಕೆಯಾದ ₹13392 ಕೋಟಿ ಪೈಕಿ ರಾಜ್ಯ ಸರ್ಕಾರ 2021-22 ರಿಂದ 2025-26 ರ 4 ವರ್ಷದ ಅವಧಿಯಲ್ಲಿ ₹11,068 ಕೋಟಿ ಮಾತ್ರ ರಾಜ್ಯಕ್ಕೆ ಬಂದಿದ್ದು, ಅದನ್ನು ಸಂಬಂಧಿತ ಪಂಚಾಯ್ತಿಗಳಿಗೆ ವರ್ಗಾಯಿಸಲಾಗಿದೆ, ಇನ್ನೂ ₹2186.20 ಕೋಟಿ ರಾಜ್ಯಕ್ಕೆ ಬರಬೇಕಾದ ಬಾಕಿ ಇದೆ ಎಂದು ವಿವರಿಸಿದರು.
ಗ್ರಾಮೀಣ ಸ್ಥಳೀಯ ಸಂಸ್ಥೆ ಅನುದಾನಗಳಿಗೆ ಸಂಬಂಧಿಸಿದ 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕಾರ್ಯಾಚರಣಾ ಮಾರ್ಗಸೂಚಿಗಳ ಪ್ಯಾರಾ 5(ಎ) ಅಡಿಯಲ್ಲಿ ನಿಗದಿಪಡಿಸಲಾದ ಎಲ್ಲಾ ನಿಗದಿತ ಷರತ್ತುಗಳನ್ನು ಕರ್ನಾಟಕ ರಾಜ್ಯವು ಪಾಲಿಸಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.ರಾಜ್ಯವು 2024-25ರ ಆರ್ಥಿಕ ವರ್ಷಕ್ಕೆ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು (ಜಿಟಿಸಿ) 08.07.2025 ಮತ್ತು 24.09.2025 ರಂದು ಒದಗಿಸಿದೆ. ಅಲ್ಲದೆ, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಆಗಸ್ಟ್ 2025 ರೊಳಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಅಪ್ ಲೋಡ್ ಮಾಡುವುದನ್ನು ಪೂರ್ಣಗೊಳಿಸಿವೆ ಎಂಬ ಅಂಶವನ್ನೂ ಅವರು ಸಭೆಯ ಗಮನಕ್ಕೆ ತಂದರು.ಈ ಬಾರಿ ಎಲ್ ನಿನೋ ಪ್ರಭಾವದಿಂದ ಕರ್ನಾಟಕ ರಾಜ್ಯವು ಮಳೆಯ ಕೊರತೆ ಎದುರಿಸುತ್ತಿದೆ. ಗ್ರಾಮೀಣ ಜನರಿಗೆ ನೀರು ಪೂರೈಕೆ ನಮ್ಮ ಆದ್ಯತೆಯಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಕುಡಿಯುವ ನೀರು ಪೂರೈಕೆಗೂ ತೊಡಕಾಗುತ್ತದೆ. ಕೂಡಲೇ, ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಬಾಕಿ ಇರುವ 2186.20 ಕೋಟಿ ರೂ. ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
16ನೇ ಹಣಕಾಸು ಆಯೋಗ ಶಿಫಾರಸಿನಲ್ಲಿ ರಾಜ್ಯ ಪಂಚಾಯತಿಗಳಿಗೆ ₹18,889 ಕೋಟಿ:
ಇನ್ನು 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ₹15,111ಕೋಟಿ ಮೂಲ ಅನುದಾನ, ₹3,778 ಕೋಟಿ ಕಾರ್ಯ ಸಾಮರ್ಥ್ಯ ಅನುದಾನ ಸೇರಿ ₹18,889 ಕೋಟಿ ಹಣವು ಮುಂದಿನ 5 ವರ್ಷಗಳಿಗೆ ಹಂಚಿಕೆ ಆಗಿದೆ. ರಾಜ್ಯದ ಪಂಚಾಯ್ತಿಗಳು ಗ್ರಾಮೀಣ ಆಸ್ತಿಗಳಿಂದ ಶೇ.80ರಷ್ಟು ತೆರಿಗೆ ಸಂಗ್ರಹ ಗುರಿ ಸಾಧಿಸಿವೆ ಎಂದೂ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ:ರಾಜ್ಯದಲ್ಲಿ ಬಹುತೇಕ ಗ್ರಾಮ ಪಂಚಾಯ್ತಿಗಳ ಅವಧಿ ಮಾರ್ಚ್ ನಲ್ಲಿ ಮುಗಿದಿದ್ದು, ಪಂಚಾಯ್ತಿಗಳ ಚುನಾವಣೆ ನಡೆಸಲು ತಕ್ಷಣವೇ ಸರ್ಕಾರ ಕ್ರಮ ವಹಿಸಿದೆ. ಕ್ಷೇತ್ರ ಪುನರ್ ವಿಂಗಡಣೆ, ಕ್ಷೇತ್ರ ಮೀಸಲು ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಹೀಗಾಗಿ ಮುಂದಿನ 2 ತಿಂಗಳುಗಳಲ್ಲಿ ಪಂಚಾಯ್ತಿಗಳ ಚುನಾವಣೆ ನಡೆಯಲಿದೆ. ತಾಂತ್ರಿಕ ಕಾರಣದಿಂದ ಚುನಾವಣೆ ವಿಳಂಬವಾಗಿದೆ. ಪಂಚಾಯತಿಗಳು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಣ್ಣ ಪುಟ್ಟ ಲೋಪಗಳನ್ನು ಬದಿಗಿಟ್ಟು, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.











































