ತೀರ್ಥಹಳ್ಳಿ: ‘ರಾಮನ ಹೆಸರು ಬಳಸಿ ಮಂದಿರ ನಿರ್ಮಾಣಕೇವಲ ರಾಜಕೀಯದ ಹಾಗೂ ಹಣ ಲೂಟಿ ಹೊಡೆಯುವ ಕುತಂತ್ರ, ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ನಿಜವಾದ ಭಕ್ತಿ ಇಲ್ಲ. ಅಯೋಧ್ಯೆಯಲ್ಲಿ ನಡೆದಿರುವ ಎಲ್ಲ ಅಕ್ರಮದ ನಿರ್ದೇಶಕ, ನಿರ್ಮಾಪಕರು ಆರ್‌ಎಸ್‌ಎಸ್‌ನವರು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.
‘ಇದರ ಸಂಪೂರ್ಣ ರೂವಾರಿ ದೇಶದ ಕಾವಲುಗಾರನೆಂದು (ಚೌಕಿದಾರ) ಕರೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ. ಹಾಗಾಗಿ ಪ್ರಕರಣದ ಮೊದಲ ಆರೋಪಿ ಮೋದಿ, ಎರಡನೇ ಆರೋಪಿ ಗೃಹಸಚಿವ ಅಮಿತ್ ಶಾ, ಮೂರನೇ ಆರೋಪಿ ಉತ್ತರ ಪ್ರದೇಶದ ಸಿಎಂ ಯೋಗ್ಯ ಅಧಿತ್ಯನಾಥ’ ಎಂದರು.ಅಯೋಧ್ಯೆ ಹುಂಡಿ ಹಣ ಕದ್ದವರಿಗೆ ಶಿಕ್ಷೆ ಆಗಲಿ ಎಂದು ಪ್ರಾರ್ಥಿಸಿ ಅಗ್ರಹಾರದ ಕೋದಂಡರಾಮ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.`ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಮಾಣ ಮಾಡಿ ಅದಕ್ಕೆ 15 ಜನರು ಟ್ರಸ್ಟಿಗಳನ್ನು ನೇಮಕ ಮಾಡಿದವರು ಮೋದಿ. ರಾಮಭಕ್ತರು, ರಾಷ್ಟ್ರಭಕ್ತರು, ರಾಷ್ಟ್ರಪ್ರೇಮಿಗಳು ಅಂತ ಹೇಳಿಕೊಳ್ಳುವವರಿಗೆ ಈಗ ತನಿಖೆಯ ಜವಾಬ್ದಾರಿಯನ್ನು ವಹಿಸುತ್ತಿರುವುದು ಹಾಸ್ಯಾಸ್ಪದ. ಉತ್ತರ ಪ್ರದೇಶದ ಬುಲ್ಲೋಜರ್ ಕಾನೂನನ್ನು ಹುಂಡಿ ಕದ್ದವರ ಮೇಲೆ ಯಾಕೆ ಜರುಗಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ನಿಯಮಗಳನ್ನು ಉಲ್ಲಂಘಿಸಿ ದೇವಸ್ಥಾನವನ್ನು ಉದ್ಘಾಟನೆ ಮಾಡಲಾಗಿತ್ತು. ಹೋಮ, ಹವನ ಮಾಡುವಾಗ ವಿವಾಹಿತ ಪ್ರಧಾನಿ ಪತ್ನಿಯ ಜೊತೆ ಕುಳಿತುಕೊಳ್ಳಲಿಲ್ಲ. ಅಲ್ಲದೇ ಆಗಮ ಶಾಸ್ತ್ರದಂತೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿಲ್ಲ. ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಯನ್ನು ಅವಮಾನಿಸಿದ್ದರು. ಜೊತೆಗೆ ಟ್ರಸ್ಟ್ ನೇಮಿಸಿ ಅದನ್ನು ಮಾಹಿತಿ ಹಕ್ಕು ಅಧಿನಿಯಮದಿಂದ (ಆರ್‌ಟಿಐ) ಹೊರಗಿಟ್ಟು ಅಕ್ರಮಕ್ಕೆ ಕೈಜೋಡಿಸಿದ್ದಾರೆ ಎಂದು ದೂರಿದರು.“ರಾಮ ಜನ್ಮಭೂಮಿಗೆ ನಾನೂ ಇಟ್ಟಿಗೆ, ಹಣ ಕಳುಹಿಸಿ ಕೊಟ್ಟಿದ್ದೇನೆ. ಈಗಿನ ವಾತಾವರಣ ನೋಡಿದರೆ ಅದು ಶಿವಮೊಗ್ಗ ದಾಟಿರುವುದು ಅನುಮಾನ. ಬಿಜೆಪಿ ದೇಶದಾದ್ಯಂತ ರಥಯಾತ್ರೆ ಮಾಡಿದಂತೆ ತೀರ್ಥಹಳ್ಳಿಯಲ್ಲಿ ಭ್ರಷ್ಟಚಾರ ವಿರುದ್ಧ ರಥಯಾತ್ರೆ ಮಾಡುತ್ತೇನೆ. ಆರ್‌ಎಸ್‌ಎಸ್ ಹೇಳುವ ಶುದ್ಧ ಗುಣಗಳು ನನ್ನಲ್ಲಿ ಇದೆ. ನಾನು ಆರಗ ಜ್ಞಾನೇಂದ್ರ ಅವರಂತೆ ಕಮಿಷನ್ ಪಡೆದುಕೊಳ್ಳುವುದಿಲ್ಲ. ಮರಳು ಲೂಟಿಯಲ್ಲಿ ಭಾಗಿಯಾಗುವುದಿಲ್ಲ. ಅಕ್ರಮಕ್ಕೆ ಬೆಂಬಲ ನೀಡುವುದಿಲ್ಲ. ಹಾಗಾಗಿ ಆರ್‌ಎಸ್‌ಎಸ್ ನನ್ನ ನಿಲುವನ್ನು ಬೆಂಬಲಿಸಬೇಕು’ ಎಂದು ಕುಟುಕಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ಮುಖಂಡರಾದ ಜಿ.ಎಸ್.ನಾರಾಯಣ ರಾವ್, ಬಿ.ಕೆ.ವಾದಿರಾಜ್, ಬಿ.ಆರ್.ರಾಘವೇಂದ್ರ ಶೆಟ್ಟಿ, ವಿನಾಯಕ ತುಪ್ಪದಮನೆ, ಕೇಳೂರು ಮಿತ್ರ, ವಿಲಿಯಂ ಮಾರ್ಟೀಸ್, ಹುಲ್ಲತ್ತಿ ದಿನೇಶ್, ರವಿ ಹೊಸ್ಕೆರೆ, ರಾಘವೇಂದ್ರ ಪುಟ್ಟೋಡ್ಲು, ಅಮರನಾಥ ಶೆಟ್ಟಿ, ಆದರ್ಶ ಹುಂಚದಕಟ್ಟೆ, ಪೂರ್ಣೇಶ್ ಕೆಳಕೆರೆ ಇದ್ದರು.
‘ಮಾತು ಕೊಟ್ಟಿಲ್ಲ’: ‘ಇಲ್ಲಿಯವರೆಗೆ ನಾನು ಯಾರಿಗೂ ಕೂಡಮುಂದಿನ ಚುನಾವಣೆಯಲ್ಲಿ ನಿಲ್ಲೋದಿಲ್ಲ, ಇನ್ನೊಬ್ಬರಿಗೆ ಸ್ಥಾನ ಬಿಟ್ಟು ಕೊಡುತ್ತೇನೆ ಅಂತ ಮಾತು ಕೊಟ್ಟಿಲ್ಲ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ ಮಾತು ಕೊಟ್ಟಿದ್ದರೆ ಶೇಕಡಾ 99 ರಷ್ಟು ಹಿಂದೆ ಸರಿಯುತ್ತಿದ್ದೆ. ಹಾಗಿದ್ದು ನನಗೆ ಮೋಸ ಮಾಡಿದ್ದರೆ ಅವರಿಗೆ ತಕ್ಕ ಪಾಠ ಕಲಿಸುವವರೆಗೆ ಸುಮ್ಮನಿರುವುದಿಲ್ಲ’ ಎಂದು ಮುಂದಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯ ಬಗ್ಗೆ ಕಿಮ್ಮನೆ ರತ್ನಾಕರ ಸ್ಪಷ್ಟನೆಯನ್ನು ನೀಡಿದರು.











































