ಮೌಲ್ಯಧಾರಿತ ರಾಜಕಾರಣದ ರೂವಾರಿ, ಉಡುಪಿ ಅಭಿವೃದ್ಧಿಯ ಹರಿಕಾರ ಡಾ. ವಿ.ಎಸ್. ಆಚಾರ್ಯರ ನಿವಾಸಕ್ಕೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ: ಪತ್ನಿ ಶ್ರೀಮತಿ ಶಾಂತಾ ಆಚಾರ್ಯ ಅವರಿಗೆ ಸನ್ಮಾನ

Picture of Savistara

Savistara

Bureau Report

ಉಡುಪಿ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ‘ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ’ದ ಯಶಸ್ವಿ ಆಡಳಿತದ ಪ್ರಯುಕ್ತ, ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಉಡುಪಿಯ ಪೂಜ್ಯರಾದ ದಿವಂಗತ ಡಾ. ವಿ.ಎಸ್. ಆಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಡಾ. ವಿ.ಎಸ್. ಆಚಾರ್ಯ ಅವರ ಧರ್ಮಪತ್ನಿ ಶ್ರೀಮತಿ ಶಾಂತಾ ವಿ. ಆಚಾರ್ಯ ಅವರನ್ನು ಶಾಸಕರು ಅತ್ಯಂತ ಭಕ್ತಿ ಹಾಗೂ ಗೌರವಪೂರ್ವಕವಾಗಿ ಸನ್ಮಾನಿಸಿ ಆಶೀರ್ವಾದ ಪಡೆದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅಭೂತಪೂರ್ವ ಸಾಧನೆಗಳು ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲಾಯಿತು.ಉಡುಪಿಯ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದ ಮಾದರಿ ರಾಜಕಾರಣಿ:ಕರಾವಳಿ ಕರ್ನಾಟಕದಲ್ಲಿ ಜನಸಂಘ ಮತ್ತು ಭಾರತೀಯ ಜನತಾ ಪಾರ್ಟಿಯನ್ನು ಬೇರುಮಟ್ಟದಿಂದ ಕಟ್ಟಿ ಬೆಳೆಸಿದ ಧೀಮಂತ ನಾಯಕ ಡಾ. ವಿ.ಎಸ್. ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಶಾಸಕರು ಸ್ಮರಿಸಿದರು. 1968 ರಲ್ಲಿ ಉಡುಪಿ ಪುರಸಭೆಯಲ್ಲಿ ಕಮಲ ಅರಳಿಸುವ ಮೂಲಕ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಪಕ್ಷಕ್ಕೆ ಅಧಿಕಾರ ತಂದುಕೊಟ್ಟ ಇತಿಹಾಸ ಅವರದು.ಅವರು ಕೇವಲ ಅಧಿಕಾರ ಅನುಭವಿಸಿದವರಲ್ಲ, ಬದಲಾಗಿ ಭ್ರಷ್ಟಾಚಾರ ರಹಿತ, ನಿಷ್ಕಳಂಕ ಆಡಳಿತ ಮತ್ತು ಮೌಲ್ಯಧಾರಿತ ರಾಜಕಾರಣದ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆದ ಆದರ್ಶ ಮತ್ತು ಮಾದರಿ ರಾಜಕಾರಣಿಯಾಗಿದ್ದರು. ಉಡುಪಿ ನಗರದ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ಅತ್ಯುತ್ತಮ ನೀಲನಕ್ಷೆ ಸಿದ್ಧಪಡಿಸಿ, ಇಡೀ ದೇಶದಲ್ಲೇ ಉಡುಪಿಯನ್ನು ಒಂದು ಮಾದರಿ ನಗರವನ್ನಾಗಿ ರೂಪಿಸಿದ ಕೀರ್ತಿ ಡಾ. ಆಚಾರ್ಯರಿಗೆ ಸಲ್ಲುತ್ತದೆ. ನಗರಕ್ಕೆ ಕಾಂಕ್ರೀಟ್ ರಸ್ತೆಗಳ ಪರಿಕಲ್ಪನೆ ಹಾಗೂ ಅತ್ಯಾಧುನಿಕ ಒಳಚರಂಡಿ (UGD) ವ್ಯವಸ್ಥೆಯನ್ನು ದೇಶದಲ್ಲೇ ಪ್ರಪ್ರಥಮವಾಗಿ ಅಳವಡಿಸಿದ ಅವರ ಅಭಿವೃದ್ಧಿಪರ ಚಿಂತನೆಗಳು ಇಂದಿಗೂ ಇಡೀ ದೇಶಕ್ಕೆ ಮಾದರಿಯಾಗಿವೆ.ಶಿಸ್ತು, ಸರಳತೆ ಮತ್ತು ಯಾವುದೇ ಫಲಾಪೇಕ್ಷೆ ಇಲ್ಲದೆ ಪಕ್ಷಕ್ಕಾಗಿ ಹಾಗೂ ನಾಡಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಇಂತಹ ಹಿರಿಯ ಚೇತನದ ಕುಟುಂಬವನ್ನು ಭೇಟಿಯಾಗಿ, ಗೌರವ ಸಮರ್ಪಿಸಿದ್ದು ತಮಗೆ ಅತೀವ ಧನ್ಯತಾಭಾವ ಮೂಡಿಸಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ತಿಳಿಸಿದರು.ಈ ಅರ್ಥಪೂರ್ಣ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಕಪ್ಪೆಟ್ಟು, ಉಪಾಧ್ಯಕ್ಷರಾದ ಶ್ರೀ ಕಿಶೋರ್ ಕರಂಬಳ್ಳಿ, ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತ್ ಭಟ್, ವಾರ್ಡ್ ಅಧ್ಯಕ್ಷರಾದ ಶ್ರೀ ಲೋಕಯ್ಯ ಭಂಡಾರಿ ಬೊಟ್ಯಾಡಿ, ಶ್ರೀ ರತ್ನಾಕರ್ ಇಂದ್ರಾಳಿ, ಶ್ರೀ ಮುರಳಿ ಭಟ್, ಶ್ರೀ ಸಂತೋಷ್ ಶೆಟ್ಟಿ ಹಾಗೂ ಪ್ರಮುಖರಾದ ಸುಜಲ ಸುವರ್ಣ, ಸುಗುಣ ನಾಯ್ಕ್, ಚಂದ್ರಿಕಾ ನಾಯಕ್, ಪ್ರಜ್ಞಾ ಶೆಟ್ಟಿ, ಜಯಶ್ರೀ, ಉಷಾ ಕುಂದರ್ ಮತ್ತು ಸುಜಾತ ಅವರು ಉಪಸ್ಥಿತರಿದ್ದರು.

[t4b-ticker]
error: Content is protected !!