ಜು.10ಕ್ಕೆ ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರಚಾರಕ್ ಬೈಠಕ್

Picture of Savistara

Savistara

Bureau Report

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (ಆರ್‌ಎಸ್‌ಎಸ್‌)ವಾರ್ಷಿಕವಾಗಿ ಆಯೋಜಿಸುವ ಪ್ರಾಂತೀಯ ಪ್ರಚಾರಕ್ ಸಭೆಯು ಬೆಳಗಾವಿಯಲ್ಲಿ ಜು. 10ರಿಂದ 12ರವರೆಗೆ 3 ದಿನಗಳವರೆಗೆ ನಡೆಯಲಿದೆ. ಸಂಘ ಚಟುವಟಿಕೆ ವಿಸ್ತರಣೆ ಜೊತೆಗೆ, ಆರ್‌ಎಸ್‌ಎಸ್‌ ನೋಂದಾವಣಿ ಬಗ್ಗೆ ಕಾಂಗ್ರೆಸ್ ಟೀಕೆ, ಅಯೋಧ್ಯೆ ದೇಣಿಗೆ ಹಗರಣ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಂಥ ವಿಚಾರಗಳು ಚರ್ಚೆಗೊಳಪಡುವ ನಿರೀಕ್ಷೆಯಿದೆ.ಈ ಸಭೆಯಲ್ಲಿ ದೇಶಾದ್ಯಂತ ಇರುವ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಹ ಕ್ಷೇತ್ರ ಪ್ರಚಾರಕರು ಭಾಗವಹಿಸಲಿದ್ದಾರೆ. ಜೊತೆಗೆ, ಸಂಘದ ಸಂಘಟನಾ ವ್ಯವಸ್ಥೆಯಂತೆ ದೇಶದ 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳಿಂದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಸಹ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.ಕಳೆದ ಮಾರ್ಚ್ ತಿಂಗಳಲ್ಲಿ ಹರಿಯಾಣದ ಸಮಾಲ್ಪಾದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ನಂತರ, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳಲ್ಲಿ ದೇಶದಾದ್ಯಂತ ವಿವಿಧ ಹಂತಗಳ ಸಂಘ ಶಿಕ್ಷಣ ವರ್ಗಗಳು ಯಶಸ್ವಿಯಾಗಿ ನಡೆದಿದ್ದವು. ಈಗ ಈ ಸಭೆಯಲ್ಲಿ ಶಾಖಾ ಮಟ್ಟದಲ್ಲಿ ವಾರ್ಷಿಕ ಕಾರ್ಯ ಯೋಜನೆಯ ಅನುಷ್ಠಾನದ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಯಲಿದೆ.

ಭಾಗವಹಿಸುವ ಪ್ರಮುಖರು:

ಈ ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್, ಸಹಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಸಹ ಸಹಕಾರ್ಯವಾಹರುಗಳಾದ ಡಾ.ಕೃಷ್ಣಗೋಪಾಲ್‌, ಸಿ.ಆ‌ರ್.ಮುಕುಂದ, ಅರುಣ್ ಕುಮಾ‌ರ್, ರಾಮದತ್ತ, ಆಲೋಕ್ ಕುಮಾರ್, ಅತುಲ್‌ ಲಿಮಯೆ, ಜೊತೆಗೆ ಅಖಿಲ ಭಾರತೀಯ ಕಾರ್ಯ ವಿಭಾಗ ಪ್ರಮುಖರು ಹಾಗೂ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಲಿದ್ದು ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್‌ ಅವರು ಜುಲೈ 6 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಠಕ್‌ನ ಚರ್ಚಾ ವಿಷಯಗಳೇನು?:

  • ಸಂಘಟನಾ ವಿಸ್ತರಣೆ: ಹೊಸ ಕಾರ್ಯಕ್ರಮಗಳ ಮೌಲ್ಯಮಾಪನ, ಬೇರುಮಟ್ಟದಲ್ಲಿ ಸಂಘವನ್ನು ವಿಸ್ತರಿಸುವುದು, ಜನಸಂಪರ್ಕ ಹೆಚ್ಚಳ ಮತ್ತು ಶಾಖೆಗಳ ಸಂಖ್ಯೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ತಂತ್ರಗಾರಿಕೆ.
  • ಸಮನ್ವಯತೆ: ಸಂಘ ಪರಿವಾರದ ಅಂಗಸಂಸ್ಥೆಗಳ ಜೊತೆಗಿನ ಸಮನ್ವಯ ಮತ್ತು ವರ್ಷಾಂತ್ಯದ ಪ್ರಮುಖ ಕಾರ್ಯಕ್ರಮಗಳ ಸಿದ್ಧತೆ.
  • ಶತಾಬಿ ಸಂಭ್ರಮ: ಶತಾಬ್ಲಿ ವರ್ಷದ ಸಾಧನೆಗಳ ಅವಲೋಕನ, ಬಾಕಿ ಉಳಿದ ಯೋಜನೆಗಳ ರೂಪುರೇಷೆ ಹಾಗೂ ಸಂಘ ಶಿಕ್ಷಣ ವರ್ಗಗಳ ವಿಮರ್ಶೆ.
  • – ಮುಂದಿನ ಯೋಜನೆ: 2026-27ನೇ ಸಾಲಿಗೆ ಸರಸಂಘಚಾಲಕರ ಪ್ರವಾಸ ಯೋಜನೆ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಕ್ರಿಯಾ ಯೋಜನೆ.
  • ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ, ನೀಟ್ ಪರೀಕ್ಷೆ ಹಗರಣ ಮುಂತಾದ ವಿವಾದಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ.
  • ಅಲ್ಲದೆ, ಸಂಘದ ನೋಂದಣಿ ಬಗ್ಗೆ ಕಾಂಗ್ರೆಸ್‌ ನಾಯಕರು ಎತ್ತುತ್ತಿರುವ ಪ್ರಶ್ನೆಗಳ ಬಗ್ಗೆಯೂ ಚರ್ಚೆಯಾಗಬಹುದು ಎನ್ನಲಾಗಿದೆ.

ಅಯೋಧ್ಯೆ ತಪ್ಪಿತಸ್ಥರಿಗೆ ಶಿಕ್ಷೆ ಎಂದೇ ಉತ್ತರಿಸಿ: ಬಿಜೆಪಿಗೆ ಆರೆಸ್ಸೆಸ್ ಸಲಹೆ

ಬೆಂಗಳೂರು: ಅಯೋಧ್ಯೆ ರಾಮಮಂದಿರದ ದೇಣಿಗೆ ಹಣದಲ್ಲಿ ಆಗಿರುವ ಅವ್ಯವಹಾರದ ಕುರಿತು ಉತ್ತರಿಸುವಾಗ ಯಾವುದೇ ಗೊಂದಲವನ್ನು ಇರಿಸಿಕೊಳ್ಳುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಆರ್‌ಎಸ್ಎಸ್‌ ಸ್ಪಷ್ಟಪಡಿಸಿದೆ.ಶಂಕರಪುರದ ಕೇಶವಕೃಪಾ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆ‌ರ್. ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಮತ್ತಿತರರೊಂದಿಗೆ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಹ ಸರಕಾರ್ಯವಾಹ ಸಿ.ಆ‌ರ್. ಮುಕುಂದ, ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಮತ್ತಿತರರು ಹೇಳಿದ್ದಾರೆ.ಅಯೋಧ್ಯೆಯಲ್ಲಿ ಈ ರೀತಿ ನಡೆಯುತ್ತದೆ ಎಂದು ನಾವೂ ಊಹಿಸಿರಲಿಲ್ಲ. ಅತ್ಯಂತ ಸಮರ್ಥ, ಪ್ರಾಮಾಣಿಕರನ್ನೇ ಟ್ರಸ್ಟಿಗಳನ್ನಾಗಿ ನೇಮಿಸಲಾಗಿತ್ತು. ಆದರೂ ಹೀಗೆ ಆಗಿರುವುದು ಬೇಸರ ಮೂಡಿಸಿದೆ. ಇದು ಕೇವಲ ಹಣದ ವಿಚಾರವಲ್ಲ.ಕೋಟ್ಯಂತರ ಜನರ ಭಾವನೆಗಳು ಈ ವಿಚಾರದ ಹಿಂದಿದೆ. ಅವರ ನಂಬಿಕೆಗೆ ಘಾಸಿ ಆಗದಂತೆ ಹಾಗೂ ಮತ್ತೆ ನಂಬಿಕೆಯನ್ನು ಪುನಃಸ್ಥಾಪಿಸುವಂತೆ ಎಸ್‌ಐಟಿ ತನಿಖೆ ನಡೆಯುತ್ತದೆ ಎಂಬುದಾಗಿ ನಂಬಿದ್ದೇವೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರವು ಪಾರದರ್ಶಕತೆಯಿಂದ ನಡೆಯುವುದಾಗಿ ತಿಳಿಸಿದೆ. ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸುವಾಗ, ತಪ್ಪು ನಡೆದೇ ಇಲ್ಲ ಎಂದು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಅನವಶ್ಯಕವಾಗಿ ಕಾಂಗ್ರೆಸ್ ಅವಧಿಯಲ್ಲಿ ನಡೆದ ಇನ್ಯಾವುದೋ ಹಗರಣವನ್ನೋ? ಇನ್ನೊಂದನ್ನೋ ಎಳೆದುತರುವ ಅಗತ್ಯವೂ ಇಲ್ಲ. ತಪ್ಪು ಆಗಿರುವುದು ನಿಜ. ಆದರೆ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗುತ್ತದೆ ಎಂಬುದಾಗಿ ಹೇಳಿದರೆ ಸಾಕೆಂದು ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಎಸ್‌ಐಆ‌ರ್ ಮೇಲೆ ನಿಗಾಕ್ಕೆ ಸೂಚನೆ:

ಎಸ್‌ಐಆ‌ರ್ ಪ್ರಕ್ರಿಯೆ ಬಗ್ಗೆ ಪ್ರಸ್ತಾಪವಾಗಿದ್ದು, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯ ದೃಷ್ಟಿಯಿಂದ, ಅರ್ಹ ಮತದಾರರು ಕೈಬಿಟ್ಟು ಹೋಗದಂತೆ ಮತ್ತು ಅನರ್ಹರು ಸೇರದಂತೆ ನಿಗಾ ವಹಿಸಲು ಆರ್‌ಎಸ್‌ಎಸ್ ಸೂಚನೆ ನೀಡಿದೆ. ಅಲ್ಲದೆ, ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದ ಚರ್ಚೆಯಾಗಿದ್ದು, ಪಠ್ಯದಲ್ಲಿ ಸಸ್ಯಾಹಾರದ ಪರವಾಗಿ ಸಮತೋಲಿತ ಆಹಾರದ ಉಲ್ಲೇಖವಿದ್ದು, ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಅಲ್ಲದೆ, ಕೃಷ್ಣಾ ನದಿಯನ್ನು ಕರ್ನಾಟಕದ ಅಸ್ಮಿತೆಯಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ ಎಂದು ಈ ವೇಳೆ ಆರ್‌ಎಸ್‌ಎಸ್ ನಾಯಕರು ಹೇಳಿದ್ದಾರೆ. ಈ ವಿಚಾರದಲ್ಲಿ ನದಿಯನ್ನು ಅವಮಾನಿಸುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದು, ಇದರ ವಿರುದ್ಧ ಮುಂದಿನ ಕಾರ್ಯಕ್ರಮ ರೂಪಿಸಲು ಸೂಚಿಸಿದ್ದಾರೆ.

[t4b-ticker]
error: Content is protected !!