ಮುಂಬಯಿ: ಬಾಲಿವುಡ್ ನಟ ಸಲ್ಮಾನ್2 (Salman Khan) ಮನೆಯಲ್ಲಿ ಎಲ್ಲಾ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಅವರ ಮನೆಯಲ್ಲಿ ಗಣೇಶನನ್ನು ಕೂರಿಸಲಾಗಿತ್ತು. ಸಲ್ಮಾನ್ ಮತ್ತು ಅವರ ಕುಟುಂಬಸ್ಥರು ಎಲ್ಲರೂ ಸೇರಿ ಗಣೇಶನ ಪೂಜೆ ಮಾಡಿದ್ದು, ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.ಖಾನ್ ಕುಟುಂಬವು ಹೋಳಿ, ದಸರಾ, ದೀಪಾವಳಿ, ಈದ್ ಮತ್ತು ಕ್ರಿಸ್‌ಮಸ್‌ಗಳನ್ನು ಸಮಾನ ಉತ್ಸಾಹದಿಂದ ಆಚರಿಸುತದೆ ಎಂದು ಹಿರಿಯ ಬರಹಗಾರ, ನಿರ್ಮಾಪಕ ಸಲೀಂ ಖಾನ್ (ಸಲ್ಮಾನ್ ಖಾನ್ ತಂದೆ) ಹೇಳಿಕೊಂಡಿದ್ದಾರೆ.’ದಿ ಫ್ರೀ ಪ್ರೆಸ್ ಜರ್ನಲ್’ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿರುವ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ (Salim Khan), ಹಬ್ಬ ಮತ್ತು ಅವರ ಆಚರಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
“ಮುಸ್ಲಿಂ ಆಗಿದ್ದರೂ, ನಮ್ಮ ಕುಟುಂಬವು ಯಾವಾಗಲೂ ವಿಶಾಲ ಮನೋಭಾವವನ್ನು ಅಳವಡಿಸಿಕೊಂಡಿದೆ. ಇಂದೋರ್‌ನಲ್ಲಿ ನನ್ನ ತಂದೆ ಡಿಎಸ್ಪಿ (ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಆಗಿ ಸೇವೆ ಸಲ್ಲಿಸಿದ ಸಮಯದಲ್ಲಿ ಎಲ್ಲಾ ಧರ್ಮದ ಜನರು ಜತೆಯಾಗಿ ವಾಸಿಸುತ್ತಿದ್ದರು. ಅಲ್ಲಿ ಬಹುತೇಕ ಬಾಡಿಗೆದಾರರು ಹಿಂದೂಗಳಾಗಿದ್ದರು ಮತ್ತು ಕುಟುಂಬಗಳು ಸಂಪೂರ್ಣ ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿತ್ತು” ಎಂದು ಹೇಳಿದ್ದಾರೆ.
‘ಇಂದೋರ್‌ನಿಂದ ಇಂದಿನವರೆಗೆ, ನಾವು ಎಂದಿಗೂ ಗೋಮಾಂಸ ಸೇವಿಸಿಲ್ಲ. ಗೋಮಾಂಸವು ಅತ್ಯಂತ ಅಗ್ಗದ ಮಾಂಸವಾಗಿರುವುದರಿಂದ ಹೆಚ್ಚಿನ ಮುಸ್ಲಿಮರು ಗೋಮಾಂಸವನ್ನು ಸೇವಿಸುತ್ತಾರೆ. ಕೆಲವರು ಸಾಕು ಪ್ರಾಣಿಗಳಿಗೆ ಆಹಾರ ನೀಡಲು ಸಹ ಅದನ್ನು ಖರೀದಿಸುತ್ತಾರೆ. ಆದರೆ ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳಲ್ಲಿ, ಹಸುವಿನ ಹಾಲು ತಾಯಿಯ ಹಾಲಿಗೆ” ಬದಲಿಯಾಗಿದೆ ಮತ್ತು ಅದು ಮುಫಿದ್ (ಪ್ರಯೋಜನಕಾರಿ) ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹಸುಗಳನ್ನು ಕೊಲ್ಲಬಾರದು ಮತ್ತು ಗೋಮಾಂಸೆ ಸೇವನೆ ನಿಷೇಧಿಸಬೇಕೆಂದು ಅವರು ಹೇಳಿದ್ದಾರೆ” ಎಂದಿದ್ದಾರೆ.
“ಪ್ರವಾದಿ ಮೊಹಮ್ಮದ್ ಪ್ರತಿಯೊಂದು ಧರ್ಮದಿಂದಲೂ ಒಳ್ಳೆಯದನ್ನು ಅಳವಡಿಸಿಕೊಂಡಿದ್ದಾರೆ. ‘ಹಲಾಲ್ ಮಾಂಸ’ ಸೇವನೆಯನ್ನು ಯಹೂದಿಗಳಿಂದ ಅನುಕರಿಸಲಾಗಿದೆ. ಅದನ್ನು ಯಹೂದಿಗಳು ಕೋಷರ್ ಎಂದು ಕರೆಯುತ್ತಾರೆ. ಪ್ರವಾದಿಗಳು ಪ್ರತಿಯೊಂದು ಧರ್ಮವೂ ಒಳ್ಳೆಯದು ಮತ್ತು ನಮ್ಮಂತೆಯೇ ಒಂದು ಸರ್ವೋಚ್ಚ ಶಕ್ತಿ ಎಂದು ನಂಬುತ್ತಾರೆ” ಎಂದಿದ್ದಾರೆ.ಎಲ್ಲಾ ಧರ್ಮದಲ್ಲಿ ಮಾನವೀಯತೆ ಮುಖ್ಯವೆಂದು ಸಲೀಂ ಹೇಳಿದ್ದಾರೆ.











































