ಅಂದು ರಾತ್ರಿ 11.41ಕ್ಕೆ ಗರಿಷ್ಠ ಗ್ರಹಣದ ಕಾಲದಲ್ಲಿ ಕೆಂಪು ಚಂದ್ರನ ವೀಕ್ಷಿಸಬಹುದು: ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್
ಉಡುಪಿ: ಹುಣ್ಣಿಮೆಯ ರಾತ್ರಿಯಂದು ಚಂದ್ರನು ಭೂಮಿಯಸುತ್ತಲೂ ತನ್ನ ಕಕ್ಷೆಯಲ್ಲಿ ಹೋಗುತ್ತಾ, ಸೂರ್ಯನಿಂದ ಭೂಮಿಯ ಹಿಂಬದಿ ಬಂದಾಗ ಚಂದ್ರ ಗ್ರಹಣವಾಗಲಿದ್ದು, ಸೆ. 7ರಂದು ಚಂದ್ರ ನು ಪೂರ್ತಿಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ ಅಂದು ಖಗ್ರಾಸ ಚಂದ್ರಗ್ರಹಣ ಗೋಚರಿಸಲಿದೆ.ಖಗ್ರಾಸ ಚಂದ್ರಗ್ರಹಣದ ವೇಳೆ, ಚಂದ್ರನು ತಾಮ್ರದಂತೆ ಕೆಂಪು ಬ ಣ್ಣ ಹೊಂದಿರುತ್ತಾನೆ. ಭೂಮಿಯು, ಚಂದ್ರನ ಮೇಲೆ ನೇರವಾಗಿ ಬೀಳುವ ಸೂರ್ಯ ಕಿರಣಗಳನ್ನು ತಡೆಗಟ್ಟುತದೆ. ಈ ಕಾರಣ, ಭೂಮಿಯ ವಾತಾವರಣದಲ್ಲಿ ಚದುರಿಸುವ ಕೆಂಪು ಬಣ್ಣವು, ಚಂದ್ರ ನ ಮೈಮೇಲಿಂದ ಪ್ರತಿಬಿಂಬಿಸುತ್ತದೆ. ಈ ಬೆಳಕಿನಿಂದಾಗಿ ಚಂದ್ರನು ಕೆಂಬಣ್ಣದಲ್ಲಿ ಗೋಚರಿಸುತ್ತಾನೆ ಎಂದು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ತಿಳಿಸಿದ್ದಾರೆ.ಖಗೋಳಶಾಸ್ತ್ರಜ್ಞರು ಆಕಾಶಕಾಯಗಳ ಬೆಳಕನ್ನು ಪರಿಮಾಣ ಮಾಪನದಿಂದ ಗುರುತಿಸುತ್ತಾರೆ (ಈ ಸಂಖ್ಯೆ ಕಡಿಮೆ ಇದ್ದಷ್ಟು ಆ ಕಾಶಕಾಯ ಹೆಚ್ಚು ಪ್ರಕಾಶಮಾನವಾಗಿರುತ್ತದೆ). ಸಾಮಾನ್ಯವಾಗಿ ಹುಣ್ಣಿಮೆಯ ಚಂದ್ರನ ಪರಿಮಾಣ ಸುಮಾರು ಮೈನಸ್ 13ರ ಷ್ಟಾಗಿರುವುದು. ಆದರೆ, ಈ ಗ್ರಹಣದ ಸಮಯ ಮೈನಸ್ 1.35ರ ಷ್ಟು ಪರಿಮಾಣವಾಗಿರುತ್ತದೆ. ಅಂದರೆ, ಚಂದ್ರನು ಶೇ. 99.9ರಷ್ಟು ಮಂದವಾಗಿ ಕಾಣಿಸುತ್ತಾನೆ.
ಯಾವುದೇ ವಸ್ತುವಿನ ನೆರಳಲ್ಲಿ 2 ಭಾಗವನ್ನು ನೋಡಬಹುದು -ನೆರಳು (ಅಂಬ್ರಾ) ಮತ್ತು ಅರೆನೆರಳು (ಪೆನಂಬ್ರಾ). ಬೆಳಕಿನಿಂದ ದೂರ ಇದ್ದಷ್ಟು ಈ ನೆರಳಿನ 2 ಭಾಗಗಳನ್ನು ಸ್ಪಷ್ಟವಾಗಿ ಗಮನಿಸಬ ಹುದು. ನೆರಳಿನ ಮಸುಕಾಗಿರುವ ಹೊರ ಅಂಚನ್ನು ಅರೆನೆರಳ ನ್ನುತ್ತಾರೆ. ಸೆ. 7ರ ರಾತ್ರಿ 8:50ಕ್ಕೆ ಗ್ರಹಣವು ಪ್ರಾರಂಭವಾಗುವಾಗ ಭೂಮಿಯ ಅರೆನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭವಾಗುತ್ತದೆ. ಭೂಮಿಯ ಅರೆನೆರಳು ಚಂದ್ರನ ಮೇಲೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಸುಮಾರು 9.57ರಿಂದ ಭೂಮಿಯ ನೆರಳು ಚಂದ್ರನ ಮೇಲೆ ಹರಿದಾಡುತ್ತದೆ.ಗ್ರಹಣವು ಮುಂದುವರಿಯುತ್ತಾ 11ಕ್ಕೆ ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿ ಬಂದಿರುತ್ತಾನೆ. ಈ ಕ್ಷಣದಿಂದ ಮಧ್ಯರಾತ್ರಿ 12.22ರ ವರೆಗೆ (ಸುಮಾರು 1 ಗಂಟೆ 22 ನಿಮಿಷಗಳ ಕಾಲ) ಖ ಗ್ರಾಸ ಚಂದ್ರಗ್ರಹಣ ವೀಕ್ಷಿಸಬಹುದು. ರಾತ್ರಿ 11.41ಕ್ಕೆ ಗರಿಷ್ಠ ಗ್ರಹ ಣದ ಕಾಲದಲ್ಲಿ ಕೆಂಪು ಚಂದ್ರನನ್ನು ವೀಕ್ಷಿಸಬಹುದು. 1.26ಕ್ಕೆ ಚಂದ್ರನು, ಭೂಮಿಯ ನೆರಳಿನಿಂದ, ತದನಂತರ 2.25ಕ್ಕೆ ಭೂಮಿಯ ಅರೆನೆರಳಿನಿಂದ ಹೊರಬರುತ್ತಾನೆ. ಈ ಗ್ರಹಣದ ವಿವಿಧ ಹಂತಗಳು ಸುಮಾರು 5 ಗಂಟೆ 27 ನಿಮಿಷಗಳ ಕಾಲ ನ ಡೆಯುತ್ತದೆ.
ಬರಿಗಣ್ಣಿನಿಂದಲೇ ವೀಕ್ಷಿಸಬಹುದು
ಈ ಗ್ರಹಣವು ಭಾರತ, ಚೀನಾ, ಮಂಗೋಲಿಯಾ, ರಷ್ಯಾದ ಕೇಂದ್ರ ಭಾಗ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಏಷ್ಯಾ ಖಂಡದ ವಿವಿಧ ದೇಶಗಳು, ಆಫ್ರಿಕಾ ಖಂಡದ ಪೂರ್ವ ಭಾಗ, ಅರಬ್ ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿ ಗೋಚರಿಸುತ್ತದೆ. ಭಾರತದ ಎಲ್ಲ ಭಾಗಗಳಿಂದ ಎಲ್ಲರೂ ಕೂಡ ಈ ಖಗೋಳ ವಿದ್ಯಮಾನವನ್ನು ಬರಿಗಣ್ಣಿನಿಂದಲೇ, ಯಾವುದೇ ಹಾನಿಯಿಲ್ಲದೆ ವೀಕ್ಷಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.











































