ಇಂಟರ್ನ್ಯಾಷನಲ್ ಲಿಂಗಾಯತ್ ಯೂತ್ ಫೋರಮ್(ILF) ಶಿವಮೊಗ್ಗ ವಿಭಾಗದ ವತಿಯಿಂದ ಪ್ರಥಮ ಬಾರಿಗೆ ಸೆ. 20ರಂದು ನಗರದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ “Doctor Preneur Summit-2025” ವಿಶೇಷ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಪಾಲ್ಗೊಂಡರು.

ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ರಾಷ್ಟ್ರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ನುರಿತ ವೈದ್ಯರನ್ನು ಒಂದೆಡೆ ಸೇರಿಸಿ ಈ ವಿಶಿಷ್ಟ ಕಾರ್ಯಕ್ರಮ ಮಾಡುತ್ತಿರುವುದು ವಿಶೇಷವಾಗಿದೆ.

ದೇಶದಲ್ಲಿ ವೈದ್ಯಕೀಯ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದರೊಂದಿಗೆ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳು ಜೋಡಣೆಯಾಗುತ್ತಿದೆ.

ಅನಾರೋಗ್ಯ ಪೀಡಿತರಿಗೆ ಕ್ಷಣಾರ್ಧದಲ್ಲಿ ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೇವೆ ಲಭಿಸುತ್ತಿದೆ. ಇಷ್ಟಲ್ಲದೆ ಬರುವ ದಿನಗಳಲ್ಲಿ ದೇಶದಲ್ಲಿ ವೈದ್ಯಕೀಯ ಕ್ಷೇತ್ರ ಮತ್ತೊಂದು ಮಜಲಿಗೆ ತನ್ನನ್ನು ತಾನು ತೆರೆದುಕೊಳ್ಳಲು ಸಜ್ಜಾಗಿ ನಿಂತಿದ್ದು, ಇದಕ್ಕೆ ಪೂರಕ ಎಂಬಂತೆ ಕೇಂದ್ರದ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಂಡು ಜಾಗತಿಕವಾಗಿ ದೇಶವನ್ನು ಪ್ರಥಮ ಸ್ಥಾನದಲ್ಲಿ ನಿಲ್ಲಿಸಲು ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ವೈದ್ಯರನ್ನು ಒಳಗೊಂಡ ಈ ವಿಶೇಷ ಸಮಾವೇಶ ಉಪಯುಕ್ತವಾಗಿದೆ.

ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಇಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸಚಿವಾಲಯಕ್ಕೆ ಹಾಗೂ ಪ್ರಧಾನಿ ಕಚೇರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಶರಣ ಪ್ರಕಾಶ್ ಪಾಟೀಲ್ ಅವರು, ದಾವಣಗೆರೆ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರು,

ರಾಮಯ್ಯ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರಾದ ಶ್ರೀ ನಾಗೇಂದ್ರ ಸ್ವಾಮಿ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಧನಂಜಯ ಸರ್ಜಿ ಅವರು, ಗಣ್ಯರಾದ ಶ್ರೀ ಸಂತೋಷ್ ಕೆಂಚಾಂಬ ಅವರು, ಶ್ರೀ ಅವಿನಾಶ್ ಬೆನಕಪ್ಪ ಅವರು, ಶ್ರೀ ಕಿರಣ್ ಅವರು, ಶ್ರೀ ರಾಜೇಶ್ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.











































