ನವದೆಹಲಿ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಕಳಪೆ ಹಾಗೂ ಸ್ವತಂತ್ರವಲ್ಲದ ಪರಾವಲಂಬಿ ತನಿಖೆ ನಡೆಸಿದ್ದಕ್ಕಾಗಿ ಕೇಂದ್ರ ತನಿಖಾ ದಳವನ್ನು (ಸಿಬಿಐ) ಸುಪ್ರೀಂ ಕೋರ್ಟ್ ಬುಧವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
ಪ್ರಕರಣದ ಮರು ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಕರ್ನಾಟಕ ಸರ್ಕಾರಕ್ಕೆ ಅವಕಾಶ ನೀಡುವ ಸುಳಿವನ್ನು ನ್ಯಾಯಪೀಠ ನೀಡಿತು.ಪ್ರಕರಣವನ್ನು ಈ ಹಿಂದೆ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಆದರೆ, ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಪ್ರಕರಣದ ಮರು ತನಿಖೆಗೆ ಕೋರಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆ ಬಳಿಕ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವುದಕ್ಕೆ ಸಂಬಂಧಿಸಿ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ಪ್ರಮಾಣಪತ್ರ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವ್ ಅವರ ಪೀಠವು ತೀರ್ಪನ್ನು ಕಾಯ್ದಿರಿಸಿದೆ.’ವಾಸ್ತವವಾಗಿ, ಸಿಬಿಐನ ತನಿಖಾ ಅಧಿಕಾರಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿ ಅವರು ತಮ್ಮ ವರದಿ ಸಲ್ಲಿಸಿದ್ದಾರೆ. ಅವರು ಯಾವುದೇ ಸ್ವತಂತ್ರ ತನಿಖೆ ನಡೆಸಿಲ್ಲ’ ಎಂದು ಪೀಠ ಹೇಳಿತು.
ಸಿಬಿಐ ತಂಡವು ಅಪರಾಧ ಸ್ಥಳಕ್ಕೆ ಭೇಟಿ ನೀಡಿಲ್ಲ ಹಾಗೂ ಸೌಜನ್ಯಾ ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ ಎಂದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.’ಇದು ಸಿಬಿಐನ ಕೆಟ್ಟ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ… ಹೆಚ್ಚೇನೂ ಇಲ್ಲ, ಕಡಿಮೆಯೂ ಇಲ್ಲ. ಹುಡುಗಿಯೊಬ್ಬಳನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ’ ಎಂದು ಪೀಠ ಟೀಕಿಸಿತು.ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲರಾದ ಶೋಭಾ ಗುಪ್ತಾ, ಆನಂದ್ ಸಂಜಯ್ ಎಂ. ನುಲಿ ಮತ್ತಿತರ ವಕೀಲರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸ್ವತಂತ್ರ ವಿಶೇಷ ತನಿಖಾ ತಂಡದಿಂದ ಹೊಸ ತನಿಖೆ ನಡೆಸಬೇಕೆಂದು ಬಲವಾಗಿ ಒತ್ತಾಯಿಸಿದರು. ಅಲ್ಲದೇ, ರಾಜ್ಯ ಪೊಲೀಸರು, ಸಿಐಡಿ ಮತ್ತು ಸಿಬಿಐನ ಗಂಭೀರ ಲೋಪಗಳನ್ನು ಎತ್ತಿ ತೋರಿಸಿದರು.
ರಾಜ್ಯ ಪೊಲೀಸ್ ತನಿಖೆಯಿಂದ ಹಿಡಿದು ಸಿಐಡಿ ಮತ್ತು ಅಂತಿಮವಾಗಿ ಸಿಬಿಐ ನಡೆಸಿದ ತನಿಖೆಯ ಅನುಕ್ರಮದ ಬಗ್ಗೆ ಕರ್ನಾಟಕ ಹೆಚ್ಚುವರಿ ಅಡ್ವಕೇಟ್ ಜನರಲ್ ಆವಿಷ್ಕಾರ್ ಸಿಂಫ್ಟಿ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.ಮರು ತನಿಖೆಯನ್ನು ವಿರೋಧಿಸಿದ ಸಿಬಿಐ ವಕೀಲರು, “ಸಂಸ್ಥೆಯು 2013ರಲ್ಲಿ ಪ್ರಕರಣದ ತನಿಖಾ ಹೊಣೆ ವಹಿಸಿಕೊಂಡು 2015ರಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ವಿಚಾರಣೆ ಪೂರ್ಣಗೊಂಡ ನಂತರ ಹೊಸ ತನಿಖೆ ನಡೆಸಿದರೆ ಕ್ರಿಮಿನಲ್ ನ್ಯಾಯಶಾಸ್ತ್ರವನ್ನು ಅಸ್ಥಿರಗೊಳಿಸುತ್ತದೆ’ ಎಂದು ವಾದಿಸಿದರು.’ಯಾವುದೇ ಪುರಾವೆ ಕಂಡುಹಿಡಿಯಲು ಸಿಬಿಐ 12 ವರ್ಷಗಳ ನಂತರವೂ ವಿಫಲವಾಯಿತು ಎಂದು ನೀವು ಹೇಳುತ್ತಿದ್ದೀರಾ?’ ಎಂದು ಪೀಠ ಪ್ರಶ್ನಿಸಿತು.ಈ ಪ್ರಕರಣದಲ್ಲಿ ಇನ್ನು ಮುಂದೆ ಸಿಬಿಐ ಅನ್ನು ನಂಬಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತು. ತೀರ್ಪನ್ನು ನೀಡಿದ ನಂತರ ಅನುಸರಣಾ ವರದಿ ಪಡೆಯುವುದನ್ನು ಪರಿಗಣಿಸುವುದಾಗಿ ಹೇಳಿತು.










































