ಶಬರಿಮಲೆ ಬಂಗಾರ ರಹಸ್ಯ! ಕೇರಳದಲ್ಲಿ ಭುಗಿಲೆದ್ದ ಆಕ್ರೋಶ

Picture of Savistara

Savistara

Bureau Report

ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಗರ್ಭಗುಡಿ ಹಾಗೂ ದ್ವಾರಪಾಲಕ ಮೂರ್ತಿಗಳಿಗೆ ಅಳವಡಿಸಿದ್ದ ಚಿನ್ನದ ಹೊದಿಕೆಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿದೆ. ಈ ನಡುವೆ ಚಿನ್ನವನ್ನು ಕಳ್ಳತನ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ದೇಗುಲದಲ್ಲಿ ಚಿನ್ನದ ಹೊದಿಕೆ ಕೊಟ್ಟ ದಾನಿ ಯಾರು?, ಅದನ್ನು ಯಾರಿಗೆ ನವೀಕರಣ ಮಾಡಲು ಕೊಟ್ಟಿದ್ದರು? ಕೇರಳ ಹೈಕೋರ್ಟ್ ಹೇಳಿದ್ದೇನು?, ತನಿಖೆ ಎಲ್ಲಿವರೆಗೆ ಬಂದಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಚಿನ್ನ ಲೇಪಿತ ಹೊದಿಕೆಯ ವಿವಾದ?

ಅಯ್ಯಪ್ಪ ಸ್ವಾಮಿ ದೇಗುಲದ ಗರ್ಭಗುಡಿ ಹಾಗೂ ದ್ವಾರಪಾಲಕರ ವಿಗ್ರಹಗಳಿಗೆ ಅಳವಡಿಸಿದ್ದ ಚಿನ್ನದ ಲೇಪನದ ಹೊದಿಕೆಯನ್ನು ನವೀಕರಣ ಮಾಡಿಸಿಕೊಡುತ್ತೇವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) 2019ರಲ್ಲಿ ಬೆಂಗಳೂರು ಮೂಲದ ಮಲಯಾಳಿ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಮನವಿ ಮಾಡಿಕೊಂಡಿದ್ದರು. ಆ ಮನವಿಗೆ ಸ್ಪಂದಿಸಿದ ಟಿಡಿಬಿ ಅಧಿಕಾರಿಗಳು 2019ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್‌ ಕಂಪೆನಿಗೆ ಕಳುಹಿಸಿ ಕೊಟ್ಟಿದ್ದರು. ಈ ವೇಳೆ ಚಿನ್ನದ ತೂಕ 42.8 ಕೆ.ಜಿ. ಇತ್ತು. ಆದರೆ ಅದನ್ನು ನವೀಕರಣ ಮಾಡಿ 39 ದಿನಗಳ ಬಳಿಕ ದೇಗುಲಕ್ಕೆ ಹಿಂದಿರುಗಿಸಿದಾಗ ತೂಕದಲ್ಲಿ ವ್ಯತ್ಯಾಸವಾಗಿದೆ. 42.8 ಕೆ.ಜಿ.ಯಷ್ಟಿದ್ದ ಚಿನ್ನ, 38.25 ಕೆ.ಜಿ.ಗೆ ಇಳಿಕೆಯಾಗಿತ್ತು. ಅದರಲ್ಲಿ 4.5 ಕೆ.ಜಿ. ವ್ಯತ್ಯಾಸ ಕಂಡುಬಂದಿದೆ. ಇದರಿಂದ ಚಿನ್ನ ಕಳುವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ವಿವಾದ ಸೃಷ್ಟಿಯಾಗಿತ್ತು. ದೇವಾಲಯದ ಅಧಿಕಾರಿಗಳು ಇಲ್ಲದೆಯೇ ಚಿನ್ನದ ಹೊದಿಕೆಗಳನ್ನು ಚೆನ್ನೈಗೆ ಕೊಂಡೊಯ್ಯಲಾಗಿತ್ತು. ಇದಕ್ಕೆ ಶಬರಿಮಲೆ ವಿಶೇಷ ಆಯುಕ್ತರು ಅಥವಾ ಕೇರಳ ಹೈಕೋರ್ಟ್‌ನಿಂದ ಮೊದಲೇ ಅನುಮತಿ

ಪಡೆದಿರಲಿಲ್ಲ. ಇತ್ತೀಚೆಗೆ ಕವಚಗಳನ್ನು ಪುನಃ ನವೀಕರಣಕ್ಕೆಂದು ಕಳುಹಿಸಿದಾಗಲೂ ಕೋರ್ಟ್‌ಗೆ ಮಾಹಿತಿ ನೀಡಿರಲಿಲ್ಲ ಎಂಬುದು ಪ್ರಮುಖ ಆರೋಪ. ಜತೆಗೆ ಉನ್ನಿಕೃಷ್ಣನ್ ಅವರ ಬಳಿ ಸ್ವಲ್ಪ ಚಿನ್ನ ಉಳಿದಿದೆ ಎಂಬ ಮಾಹಿತಿಯಿಂದ ಚಿನ್ನ ಕಳವಾಗಿದೆ ಎಂಬ ಆರೋಪ ಗಟ್ಟಿಯಾಗಿದೆ.

ನವೀಕರಣದಲ್ಲಿ ಚಿನ್ನ ಕಳವು ಆರೋಪ

ನವೀಕರಣಕ್ಕೂ ಮುನ್ನ ಚಿನ್ನ ಲೇಪಿತ ಹೊದಿಕೆಗಳಲ್ಲಿ 42.8 ಕೆ.ಜಿ. ಚಿನ್ನವಿತ್ತು. ನವೀಕರಣದ ಅನಂತರ ಆ ಚಿನ್ನದ ತೂಕ 38.5 ಕೆ.ಜಿ.ಯಷ್ಟಿದೆ. ಇದರಲ್ಲಿ 4.5 ಕೆ.ಜಿ.ಯಷ್ಟು ಚಿನ್ನ ಕಳವಾಗಿದೆ ಎಂಬುದು ಗೊತ್ತಾಗಿದೆ.

ಮದುವೆಗೆ ಬಳಸಲು ಮುಂದಾಗಿದ್ದರೆ?

2019ರಲ್ಲಿ ಶಬರಿಮಲೆ ಗರ್ಭಗುಡಿಯ ಮುಖ್ಯದ್ವಾರ ಮತ್ತು ದ್ವಾರಪಾಲಕರ ಚಿನ್ನದ ನವೀಕರಣ ಕೆಲಸ ಮುಗಿದ ಬಳಿಕ ತನ್ನ ಬಳಿ ಸ್ವಲ್ಪ ಚಿನ್ನ ಉಳಿದಿದೆ. ಟಿಬಿಡಿಯ ಸಮನ್ವಯದೊಂದಿಗೆ ಬೆಂಬಲ ನೀಡಿದರೆ ಹುಡುಗಿಯೊಬ್ಬಳ ಮದುವೆಗೆ ಅದನ್ನು ಬಳಸುತ್ತೇನೆ. ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕು ಎಂದು ಉನ್ನಿಕೃಷ್ಣನ್ ಪೊಟ್ಟಿ 2019ರ ಡಿಸೆಂಬರ್‌ನಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದಿದ್ದರು. ಇದನ್ನು ಪರಿಶೀಲಿಸಿದ ಟಿಡಿಬಿ ಅಧಿಕಾರಿಗಳು ಆಲೋಚನೆಯಲ್ಲಿ ಮುಳುಗಿದ್ದರು.

ದೇವಸ್ವಂ ಮಂಡಳಿ ಹೇಳುವುದೇನು?

ತಿರುವಾಂಕೂರು ದೇವಸ್ವಂ ಮಂಡಳಿಯು ಚಿನ್ನದ ಕಳ್ಳತನದ ಆರೋಪವನ್ನು ನಿರಾಕರಿಸಿದೆ. ಚಿನ್ನದ ಹೊದಿಕೆಗಳನ್ನು ಉನ್ನಿಕೃಷ್ಣನ್ ಪೊಟ್ಟಿ ಅವರಿಗೆ ಎಂದಿಗೂ ಹಸ್ತಾಂತರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಮಹಾಜರ್(ಅಧಿಕೃತ ದಾಖಲೆ) ಪ್ರಕಾರ, ದ್ವಾರಪಾಲಕ ವಿಗ್ರಹಗಳ ಮೇಲಿನ 14 ಚಿನ್ನದ ಲೇಪಿತ ಹೊದಿಕೆಗಳು 38 ಕೆ.ಜಿ. ತೂಕವಿದ್ದು ಅದರಲ್ಲಿ 397 ಗ್ರಾಂ ಚಿನ್ನ ಇತ್ತು.ಎರಡು ಹೊದಿಕೆಗಳನ್ನು ಶಬರಿಮಲೆಯಲ್ಲಿ ಉಳಿಸಿಕೊಳ್ಳಲಾಗಿದ್ದು, ಉಳಿದ 22 ಕೆ.ಜಿ. ತಾಮ್ರ ಹಾಗೂ 281 ಗ್ರಾಂ ಚಿನ್ನವನ್ನು ಒಳಗೊಂಡಿರುವ 12 ಹೊದಿಕೆಗಳನ್ನು ನವೀಕರಣಕ್ಕಾಗಿ ಕಳುಹಿಸಲಾಗಿತ್ತು. ಚೆನ್ನೈನ ಸ್ಮಾರ್ಟ್ ಕ್ರಿಯೇಷನ್ಸ್‌ನಲ್ಲಿ ನವೀಕರಣ ಕಾರ್ಯದ ವೇಳೆ 10 ಗ್ರಾಂ ಚಿನ್ನವನ್ನು ಹೆಚ್ಚುವರಿ ಸೇರಿಸಲಾಗಿತ್ತು. ನವೀಕರಣ ಕಾರ್ಯ ಪೂರ್ಣಗೊಂಡ ಅನಂತರ ಹೈಕೋರ್ಟ್ ನಿರ್ದೇಶನದ ಪ್ರಕಾರವೇ ಹೊದಿಕೆಗಳನ್ನು ಹಿಂದಿರುಗಿಸಲಾಯಿತು. ಈ ವೇಳೆ 407 ಗ್ರಾಂ ಚಿನ್ನ ಇತ್ತು ಎಂದು ಮಂಡಳಿ ಹೇಳುತ್ತದೆ. 2019 ರಲ್ಲಿ ಸ್ಮಾರ್ಟ್ ಕ್ರಿಯೇಷನ್ಸ್ ಮತ್ತು ಉನ್ನಿಕೃಷ್ಣನ್ ಪೊಟ್ಟಿ ಎರಡೂ ಮರು ನವೀಕರಣ ಕಾರ್ಯಕ್ಕಾಗಿ 40 ವರ್ಷಗಳ ಖಾತರಿಯನ್ನು ನೀಡಿದ್ದವು ಎಂದು ಮಂಡಳಿ ವಿವರಿಸಿದೆ. ಈ ನಡುವೆ 2025ರಲ್ಲೂ ಉನ್ನಿಕೃಷ್ಣನ್ ಅವರಿಗೆ ನವೀಕರಣಕ್ಕೆ ಕೊಟ್ಟಿದ್ದು ಗೊಂದಲಕ್ಕೆ ಈಡಾಗಿದೆ.

ಕೇರಳ ಹೈಕೋರ್ಟ್ ಪ್ರವೇಶ, ತನಿಖೆಗೆ ಆದೇಶ

ಚಿನ್ನ ಕಳ್ಳತನದ ಬಗ್ಗೆ ಭುಗಿಲೆದ್ದ ಆಕ್ರೋಶದ ನಡುವೆ, ಉನ್ನಿಕೃಷ್ಣನ್ ದೇವರ ಚಿನ್ನವನ್ನು ಕದ್ದಿರಬಹುದು ಎಂಬ ಆರೋಪದ ಆಧಾರದ ಮೇಲೆ ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಅರ್ಜಿ ವಿಚಾರ-ಣೆಯನ್ನು ಕೈಗೆತ್ತಿಕೊಂಡಿತ್ತು. ದೇವಸ್ಥಾನದಲ್ಲಿನ ದ್ವಾರಪಾಲಕ ವಿಗ್ರಹಗಳ ಮೇಲಿನ ಚಿನ್ನದ ಹೊದಿಕೆಗಳನ್ನು ಮಾರಾಟ ಮಾಡಲಾಗಿದೆ ಅಥವಾ ಆದಾಯವನ್ನು ದುರುಪಯೋಗ-ಪಡಿಸಿಕೊಳ್ಳಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹಾಗೂ ಗಂಭೀರವಾಗಿ ಪರಿಗಣಿಸಿದೆ. ಜತೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವರ ಸನ್ನಿಧಿಗೆ ಆಗಮಿಸಿ ದೇಣಿಗೆ ಹಾಗೂ ಕಾಣಿಕೆ ರೂಪದಲ್ಲಿ ನೀಡುವ ಸಂಪತ್ತನ್ನು ದುರುಪಯೋಗ ಪಡಿಸಿಕೊಳ್ಳುವುದು ತಪ್ಪು ಎಂದು ವಿಚಾರಣೆ ವೇಳೆ ಹೇಳಿತ್ತು. ಜತೆಗೆ ತನ್ನ ಬಳಿ ಉಳಿದಿರುವ ಚಿನ್ನವನ್ನು ಮದುವೆಗೆ ಉಪಯೋಗಿಸಬಹುದೇ ಎಂದು ಟಿಡಿಬಿಗೆ ಉನ್ನಿಕೃಷ್ಣನ್ ಬರೆದ ಪತ್ರವೂ ಈ ವೇಳೆ ಬೆಳಕಿಗೆ ಬಂದಿದೆ. ಆದ್ದರಿಂದ ಸೂಕ್ತ ತನಿಖೆ ನಡೆಸಬೇಕೆಂದು ಕೋರ್ಟ್‌ ಎಸ್‌ಐಟಿ ರಚಿಸಲು ಆದೇಶಿಸಿತ್ತು.

ದಾಖಲೆ ನಿರ್ವಹಿಸುವಲ್ಲಿ ಟಿಡಿಬಿ ನಿರ್ಲಕ್ಷ್ಯ

ಚಿನ್ನ ಹಾಗೂ ತಾಮ್ರದ ಹೊದಿಕೆಗಳು ಎಷ್ಟಿವೆ ಎಂಬುದರ ಬಗ್ಗೆ ಟಿಡಿಬಿ ಸರಿಯಾದ ದಾಖಲೆಗಳನ್ನು ನಿರ್ವಹಿಸಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ವಿಜಯ್ ಮಲ್ಯ ಅವರ ದೇಣಿಗೆಯ ಬಗ್ಗೆ ಯಾವುದೇ ವಿವಾದವಿಲ್ಲ ಎಂದು ತನಿಖಾ ತಂಡ ಸ್ಪಷ್ಟಪಡಿಸಿದೆ. ಆದರೆ ಚಿನ್ನದ ಹೊದಿಕೆಗಳನ್ನು ನವೀಕರಿಸಲು ಬಳಸಿದ ಚಿನ್ನದ ಪ್ರಮಾಣವನ್ನು ದೃಢೀಕರಿಸುವ ಸೂಕ್ತ ದಾಖಲೆಗಳು ಕಾಣೆಯಾಗಿವೆ ಎಂಬುದನ್ನು ಟಿಡಿಬಿ ಒಪ್ಪಿಕೊಂಡಿದೆ. ಅಧಿಕಾರಿಯೊಬ್ಬರು ದ್ವಾರಪಾಲಕ ವಿಗ್ರಹಗಳಿಗೆ ಅಳವಡಿಸಿರುವ ಹೊದಿಕೆಗಳು ತಾಮ್ರದಿಂದ ಮಾಡಲಾಗಿದೆ ಎಂದು ಮಹಜರ್‌ನಲ್ಲಿ ಉಲ್ಲೇಖೀಸಿದ್ದರು. ಈ ವಿಷಯ ರಾಜಕೀಯ ವಲಯದಲ್ಲಿ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಟಿಡಿಬಿ ಉಪ ಆಯುಕ್ತ ಬಿ. ಮುರಾರಿ ಬಾಬು ಅವರನ್ನು ಅಮಾನತು ಮಾಡಲಾಗಿದೆ.

ನಟ ಜಯರಾಂಗೂ ವಿಚಾರಣೆಯ ಬಿಸಿ

2019ರಲ್ಲಿ ಉನ್ನಿಕೃಷ್ಣನ್ ಚಿನ್ನದ ಹೊದಿಕೆಗಳನ್ನು ನವೀಕರಣಕ್ಕೆಂದು ತೆಗೆದುಕೊಂಡು ಹೋದ ಸಂದರ್ಭದಲ್ಲಿ ಅವುಗಳನ್ನು ನವೀಕರಿಸಿ ಪ್ರದರ್ಶನಕ್ಕೆ ಇರಿಸಿದ್ದರು. ಆ ಪ್ರದರ್ಶನಕ್ಕೆ ನಟ ಜಯರಾಂ ಅವರನ್ನೂ ಆಹ್ವಾನಿಸಿದ್ದನು. ಅಯ್ಯಪ್ಪಸ್ವಾಮಿ ಭಕ್ತರಾದ ಜಯರಾಂ ಆ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನೂ ಇತ್ತೀಚೆಗೆ ವಿಚಾರಣೆಗೆ ಒಳಪಡಿಸಲಾಗಿತ್ತು.

ಚಿನ್ನ ದೇಣಿಗೆ ನೀಡಿದ್ದ ವಿಜಯ್ ಮಲ್ಯ

ಯುನೈಟೆಡ್ ಬ್ರೂವರೀಸ್ ಗ್ರೂಪ್ ಅಧ್ಯಕ್ಷರು ಹಾಗೂ ಉದ್ಯಮಿ ವಿಜಯ್ ಮಲ್ಯ ಅವರು 1998ರಲ್ಲಿ ಅಯ್ಯಪ್ಪ ಸ್ವಾಮಿ ದೇಗುಲದ ಗರ್ಭಗುಡಿ ಮೇಲ್ಪಾವಣಿಗೆ ಮತ್ತು ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನಕ್ಕಾಗಿ 30.3 ಕೆ.ಜಿ. ಚಿನ್ನ ಹಾಗೂ 1,900 ಕೆ.ಜಿ. ತಾಮ್ರವನ್ನು ದಾನವಾಗಿ ನೀಡಿದ್ದರು.

ರಾಜಕೀಯ ತಿರುವು ಪಡೆದ ವಿವಾದ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನ ಹಗರಣ ವಿವಾದ ರಾಜಕೀಯ ತಿರುವು ಪಡೆದುಕೊಂಡಿದ್ದು, ಕೇರಳ ವಿಧಾನಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ದ್ವಾರಪಾಲಕ ವಿಗ್ರಹಗಳ ಮೇಲಿನ ಚಿನ್ನದ ಲೇಪಿತ ಹೊದಿಕೆಗಳ ತೂಕ ಕಡಿಮೆ ಮಾಡುವುದಕ್ಕೆ ಸಂಬಂಧಿಸಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ವಿಪಕ್ಷಗಳು ದೇವಸ್ವಂ ಸಚಿವ ವಿ.ಎನ್.ವಾಸವನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಸದನದ ಕಲಾಪವನ್ನೇ ಬಹಿಷ್ಕರಿಸಿವೆ. ಜತೆಗೆ ವಿ.ಎನ್.ವಾಸವನ್ ರಾಜೀನಾಮೆ ನೀಡುವವರೆಗೂ ನಾವು ಕಲಾಪಕ್ಕೆ ಸಹಕರಿಸುವುದಿಲ್ಲ ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!