ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಟ್ರೇಡ್ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಮುಷ್ಕರವನ್ನು ಆಕ್ಷೇಪಿಸಿ ನಗರದ ಮನೆ ಕೆಲಸಗಾರ್ತಿ ಸಿ.ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ. ಶ್ರೀಧರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು, ‘ಕೂಡಲೇ ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಸರ್ಕಾರ ಸಾರಿಗೆ ಸಂಘಟನೆಗಳ ಜೊತೆ ಚರ್ಚೆ ನಡೆಸಲು ಮುಂದಾಗಬೇಕು’ ಎಂದು ಹೆಚ್ಚುವರಿ ಅಡ್ವಕೇಟ್ ಜನರಲ್ ತಾರಾನಾಥ ಪೂಜಾರಿ ಅವರಿಗೆ ನಿರ್ದೇಶಿಸಿತು.
ರಾಜ್ಯ ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.
ಆಕ್ಷೇಪ: ‘ಪ್ರಸ್ತಾಪಿತ ಮುಷ್ಕರವು ಇದೇ 20ರಿಂದ ನಡೆಯಲಿದೆ ಎಂದು ಹೇಳಲಾಗಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳೂ ಇದೇ 18ರಿಂದ ರಿಂದ ಇದೇ 25ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿದ್ದು ಮುಷ್ಕರದಿಂದ ಗಂಭೀರ ಸಮಸ್ಯೆ ಎದುರಾಗಲಿದೆ’ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.’ದಿನಗೂಲಿ ಕಾರ್ಮಿಕರು, ರೋಗಿಗಳು, ವಯಸ್ಸಾದವರು ಮತ್ತು ಆರ್ಥಿಕವಾಗಿ ದುರ್ಬಲರೂ ಸಾರ್ವಜನಿಕ ಬಸ್ ಸೇವೆಯನ್ನೇ ಅವಲಂಬಿಸಿದ್ದು, ಮುಷ್ಕರದಿಂದ ಎಲ್ಲರಿಗೂ ತೊಂದರೆ ಉಂಟಾಗಲಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.













































