ಚಿನ್ನದ ದರದಲ್ಲಿ ಏರಿಕೆಯನ್ನೇ ಬಂಡವಾಳವಾಗಿಸಿ ಕಾರ್ಯಾಚರಣೆ; ಮಾತಿಗೆ ಮರುಳಾಗಿ ಯಾಮಾರಿದರೆ ಚಿನ್ನ ಮಾಯ
ಮಂಗಳೂರು: ಬ್ಯಾಂಕ್ ಪಾಸ್ ವರ್ಡ್ ಕೇಳಿ ಖಾತೆಯಿಂದಲೇಹಣ ದೋಚುವುದು, ಡಿಜಿಟಲ್ ಅರೆಸ್ಟ್, ಇತ್ಯಾದಿ ರೀತಿಯಲ್ಲಿ ಜನರನ್ನು ವಂಚಿಸುವುದು ಒಂದೆಡೆ, ನೆಪ ವೊಡ್ಡಿ ಬೆಲೆಬಾಳುವ ಚಿನ್ನಾಭರಣ ಲಪಟಾಯಿಸುವ ಗ್ಯಾಂಗ್ ಇನ್ನೊಂದೆಡೆ…ಹೀಗೆ ವಂಚನೆಯಲ್ಲೂ ಸೃಜನಶೀಲತೆ…ದೇಶದಲ್ಲಿ ಚಿನ್ನದ ಬೆಲೆ ಗಗನ ಮುಖಿಯಾಗಿ ಸಾಗುತ್ತಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡು ಅಮಾಯಕರಿಂದ ಚಿನ್ನವನ್ನು ಲಪಟಾಯಿಸುವ ಉದ್ದೇಶದಿಂದ ಖದೀಮರ ತಂಡಗಳು ಮತ್ತೆ ಕಾರ್ಯಾಚರಣೆಗೆ ಇಳಿದಿವೆ. ಜನರು ಎಚ್ಚರ ವಹಿಸದಿದ್ದರೆ ಬೆಲೆಬಾಳುವ ಚಿನ್ನಾಭರಣಗಳನ್ನು ಅನಾಯಾಸವಾಗಿ ಎಗರಿಸಿಕೊಂಡು ಪರಾರಿಯಾಗುವುದು ಖಚಿತ.ದಶಕದ ಹಿಂದೆ ಕರಾವಳಿ ಭಾಗದಲ್ಲಿ “ಪಾಲಿಶ್” ಹೆಸರಿನಲ್ಲಿ ಚಿನ್ನದ ಆಭರಣ ಗಳನ್ನು ಚಾಲಾಕಿತನದಿಂದ ಕಳವು ಮಾಡಿ ಪರಾರಿಯಾಗುತ್ತಿದ್ದ ಸಾಕಷ್ಟುಘಟನೆಗಳು ಅಲ್ಲಲ್ಲಿ ನಡೆಯುತ್ತಿತ್ತು. ತಿಂಗಳಿಗೆ ಎರಡು ಮೂರಾದರೂ ಇಂತಹ ಪ್ರಕರಣಗಳೂ ದಾಖಲಾಗುತ್ತಿತ್ತು. ಕೆಲವು ಆರೋಪಿಗಳ ಬಂಧನವಾದರೆ, ಕೆಲವರು ತಪ್ಪಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಇಂತಹ ಪ್ರಕರಣ ಸಂಖ್ಯೆಯ ಕಡಿಮೆಯಾಗಿತ್ತು.
ಆದರೆ ಇದೀಗ ಮತ್ತೆ ಅಂತಹುದೇ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದೆ. ಒಂದೆಡೆ ಚಿನ್ನದ ಬೆಲೆಯೂ ಏರಿಕೆ ಯಾಗುತ್ತಿದ್ದು, ಇದರಿಂದ ವಂಚಕರು ಮತ್ತೆ ಸಕ್ರಿಯ ರಾಗು ತ್ತಿರುವ ಅನುಮಾನ ಮೂಡು ತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೊಣಾಜೆ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಕತ್ತಿನಲ್ಲಿದ್ದ ಸರದಿಂದ 14 ಗ್ರಾಂ ಚಿನ್ನವನ್ನು ಪಾಲಿಶ್ ನೆಪದಲ್ಲಿ ಕರಗಿಸಿಕೊಂಡು ಹೋಗಿದ್ದ. ಮಾತ್ರವಲ್ಲದೆ ಕಳೆದ ಎರಡು ತಿಂಗಳ ಅವಧಿಯಲ್ಲಿ ದ.ಕ ಜಿಲ್ಲೆಯ ಕೆಲವು ಕಡೆಗಳಿಗೆ ಈ ರೀತಿ ಚಿನ್ನ ಪಾಲಿಶ್ ಮಾಡುವ ಖದೀಮರು ಭೇಟಿ ನೀಡಿ, ಜನರನ್ನು ವಂಚಿಸಲು ಯತ್ನಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಕೆಲವರಿಗೆ ಈ ಬಗ್ಗೆ ಮೊದಲೇ ಅರಿವಿದ್ದ ಕಾರಣ ವಂಚನೆಯ ಜಾಲಕ್ಕೆ ಬೀಳದೆ ಬಚಾವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಳ್ಳತನ ಹೇಗೆ ನಡೆಯುತ್ತಿದೆ?
ಪಾಲಿಶ್ ಹೆಸರಿನಲ್ಲಿ ಬರುವ ಖದೀಮರು ಮಹಿಳೆಯರೇ ಇರುವ ಮನೆಗಳನ್ನು ನೋಡಿ ಚಿನ್ನವನ್ನು ತೊಳೆದು ಪಾಲಿಶ್ ಮಾಡಿ ಕೊಡುವುದಾಗಿ ನಂಬಿಸುತ್ತಾರೆ. ಒಂದು ವೇಳೆ ಚಿನ್ನದ ಆಭರಣವನ್ನು ಅವರಿಗೆ ಕೊಟ್ಟಲ್ಲಿ ತಮ್ಮಲ್ಲಿರುವ ದ್ರಾವಣದಲ್ಲಿ ಅದನ್ನು ಮುಳುಗಿಸುತ್ತಾರೆ. ಆಗ ಆಭರಣದಲ್ಲಿರುವ ಸ್ವಲ್ಪ ಚಿನ್ನದ ಅಂಶ ಕರಗಿ ದ್ರಾವಣದಲ್ಲಿ ಶೇಖರಣೆಯಾಗುತ್ತದೆ. ಬಳಿಕ ಚಿನ್ನವನ್ನು ವಾಪಸ್ ಕೊಡುತ್ತಾರೆ.ಮೇಲ್ನೋಟಕ್ಕೆ ಚಿನ್ನ ಕರಗಿ ಹೋಗಿರುವುದು ಗೊತ್ತಾಗುವುದಿಲ್ಲ. ಇನ್ನೊಂದಷ್ಟುಮಂದಿ ಚಿನ್ನವನ್ನು ತೊಳೆದು ಪ್ಯಾಕ್ ಮಾಡಿ ಕೊಟ್ಟು, ಅರ್ಧ ಗಂಟೆಯ ಬಳಿಕ ತೆಗೆದು ನೋಡಿ ಎಂದು ಹೇಳುತ್ತಾರೆ. ಅರ್ಧ ಗಂಟೆಯ ಬಳಿಕ ನೋಡಿದರೆ ಅದರಲ್ಲಿ ಚಿನ್ನವೇ ಇರುವುದಿಲ್ಲ. ಅಥವಾ ನಕಲಿ ಚಿನ್ನ ಇಟ್ಟಿರುತ್ತಾರೆ. ಇದು ಅರಿವಿಗೆ ಬರುವಾಗ ಚಿನ್ನ ತೊಳೆದವರು ಊರು ಬಿಟ್ಟು ಪರಾರಿಯಾಗಿರುತ್ತಾರೆ.
ಗ್ರಾಮೀಣ ಪ್ರವೇಶವೇ ಟಾರ್ಗೆಟ್
ಈ ವಂಚಕರು ಹೆಚ್ಚಾಗಿ ಗ್ರಾಮೀಣ ಭಾಗವನ್ನೇ ತಮ್ಮ ಗುರಿಯಾಗಿಸಿ ಕಾರ್ಯಾಚರಿಸುತ್ತಾರೆ. ಸಿಸಿ ಕೆಮರಾ ಗಳು ಇಲ್ಲದ ಸ್ಥಳಗಳು, ತೀರಾ ಹಳ್ಳಿ ಪ್ರದೇಶದಲ್ಲಿರುವ ಒಂಟಿ ಮನೆಗಳಿಗೆ ತೆರಳಿ ಪುಸಲಾಯಿಸುತ್ತಾರೆ. ಮನೆಯಲ್ಲಿ ಮಹಿಳೆ ಯರೇ ಇದ್ದರಂತೂ ಬೇಡ ಎಂದರೂ ಕೇಳದೆ ಒತ್ತಾಯ ಪೂರ್ವಕವಾಗಿ ಆಭರಣಗಳು ಪಡೆದು ಪಾಲಿಶ್ ಮಾಡಿದ ಬಳಿಕ ಅಲ್ಲಿಂದ ಪರಾರಿಯಾಗುತ್ತಾರೆ. ಒಮ್ಮೆ ವಂಚಿಸುವಲ್ಲಿ ಯಶಸ್ವಿಯಾದರೆ ಮತ್ತೂಮೆ-¾ ಆ ಪ್ರದೇಶದತ್ತ ಸುಳಿಯುವುದೇ ಇಲ್ಲ ಎನ್ನುತ್ತಾರೆ ಪೊಲೀಸರು.
ಹೊರ ರಾಜ್ಯಗಳ ತಂಡ; ಇರಲಿ ಎಚ್ಚರ
ಹೊರ ರಾಜ್ಯಗಳಿಂದ ಅದರಲ್ಲೂ ಉತ್ತರ ಭಾರತದ ಬಿಹಾರ, ಝಾರ್ಖಂಡ್, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಿಂದ ಈ ತಂಡಗಳು ಬರುತ್ತಿವೆ. ಹೀಗೆ ಬರುವವರು ಒಂದೊಂದು ಪ್ರದೇಶಕ್ಕೆ ಹೋಗಿ ಚಿನ್ನ ಪಾಲಿಶ್ ನೆನಪದಲ್ಲಿ ಚಿನ್ನವನ್ನು ಲಪಟಾಯಿಸುತ್ತಾರೆ. ತಮಗೆ ಸಿಕ್ಕ ಚಿನ್ನದೊಂದಿಗೆ ಊರಿಗೆ ತೆರಳುತ್ತಾರೆ. ಆದ್ದರಿಂದ ಇಂತಹ ವಂಚಕರ ಜಾಲದ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಪೊಲೀಸರು.
ಜನರು ಜಾಗೃತರಾಗಿದ್ದರೆ ಇಂತಹ ವಂಚನೆಯ ಪ್ರಕರಣಗಳು ನಡೆಯುವುದನ್ನು ತಪ್ಪಿಸಬಹುದು. ಯಾರೋ ಹೊರಗಿನವರು, ಅಪರಿಚಿತರು ಬಂದು ಕೇಳಿದಾಗ ಆಭರಣಗಳನ್ನು ತೆಗೆದು ಕೊಡುವ ಮೊದಲು ಜನರು ಸ್ವಲ್ಪ ಯೋಚಿಸಬೇಕು. ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರ ಬಂಧಿಸಲಾಗುವುದು.
– ರವಿಶಂಕರ್ ಕೆ. ಪೊಲೀಸ್ ಉಪ ಆಯುಕ್ತರು ಅಪರಾಧ-ಸಂಚಾರ














































