ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಫಿಕ್ಸ್!: ತೇಜಸ್ವಿ ಯಾದವ್

Picture of Savistara

Savistara

Bureau Report

Patna: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election) ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ಆರ್‌ಜೆಡಿ ನೇತೃತ್ವದ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಒಬ್ಬರು ಸೇರಿದಂತೆ ಹಲವು ಉಪಮುಖ್ಯಮಂತ್ರಿಗಳು ಸ್ಥಾನಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಶನಿವಾರ (ನವೆಂಬರ್ 1) ದೃಢಪಡಿಸಿದ್ದಾರೆ.

ಇಂಡಿಯಾ ಟುಡೇಯ ರಾಜ್‌ ದೀಪ್ ಸರ್ದೇಸಾಯಿ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮುಸ್ಲಿಂ ವ್ಯಕ್ತಿ ಉಪಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ತೇಜಸ್ವಿ ಯಾದವ್ ಹೆಚ್ಚಿನ ವಿವರಣೆ ನೀಡದೆ “ಹೌದು, ಖಂಡಿತ” ಎಂದು ಉತ್ತರಿಸಿದ್ದಾರೆ. ದಲಿತ ಸಮುದಾಯದಿಂದ ಒಬ್ಬರು ಮತ್ತು ಮುಸ್ಲಿಂ ಸಮುದಾಯದಿಂದ ಮತ್ತೊಬ್ಬರು ಉಪಮುಖ್ಯಮಂತ್ರಿಗಳು ಇರುತ್ತಾರೆಯೇ ಎಂಬ ಪ್ರಶ್ನೆಗೆ, ಹಲವಾರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಕುರಿತು ಈಗಾಗಲೇ ಘೋಷಣೆ ಮಾಡಲಾಗಿದೆ ಎಂದು ಯಾದವ್ ಹೇಳಿದರು.

ನಾವು ಎಲ್ಲ ಸಮುದಾಯದವರನ್ನು ಕರೆದುಕೊಂಡು ಹೋಗುತ್ತೇವೆ, ಎಲ್ಲರಿಗೂ ಪ್ರಾತಿನಿಧ್ಯದ ನ್ಯಾಯಯುತ ಅವಕಾಶಗಳು ಸಿಗುತ್ತವೆ ಎನ್ನುವ ಮೂಲಕ, ತಮ್ಮ ಗಟ್ಟಿ ವೋಟ್ ಬ್ಯಾಂಕ್ ಆಗಿರುವ ಮುಸ್ಲಿಂ-ಯಾದವ್ (ಎಂವೈ) ಜಾತಿ ಸಮೀಕರಣವನ್ನು ಮೀರಿ ಹೋಗುವ ಸಾಧ್ಯತೆಯನ್ನು ಇದೇ ವೇಳೆ ತಿಳಿಸಿದರು. ಬಿಜೆಪಿ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ಪ್ರಾತಿನಿಧ್ಯದ ಬಗ್ಗೆ ಮಾತನಾಡುತ್ತಾರೆ, ಆದರೆ ಟಿಕೆಟ್ ವಿತರಣೆಯಲ್ಲಿ ಅದನ್ನು ನಿಜವಾಗಿಯೂ ಜಾರಿಗೆ ತಂದಿದ್ದು ಮಹಾಘಟಬಂಧನ್ ಮಾತ್ರ. ನಾವು ಅಲ್ಪಸಂಖ್ಯಾತರು, ಒಬಿಸಿಗಳು, ಇಬಿಸಿಗಳು ಮತ್ತು ಮೇಲ್ಪಾತಿಗಳಿಗೂ ಪ್ರಾತಿನಿಧ್ಯ ನೀಡಿದ್ದೇವೆ ಎಂದು ಯಾದವ್ ಹೇಳಿದರು.

ತೇಜಸ್ವಿ ಈ ನಿರ್ಧಾರಕ್ಕೆ ಕಾರಣ

ಇತ್ತೀಚೆಗೆ ಶೇ 3 ರಷ್ಟು ಜನಸಂಖ್ಯೆ ಇರುವ ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿಯನ್ನು ಮಹಾಘಟಬಂಧನ್‌ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ, ರಾಜ್ಯದಲ್ಲಿ ಶೇ. 17 ರಷ್ಟಿರುವ ಮುಸ್ಲಿಂ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆಗಳು ಹೆಚ್ಚಾದವು, ಈ ವಿಷಯವಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಹಿರಂಗವಾಗಿ ವಾಗ್ದಾಳಿ ನಡೆಸಿದರು. ಇದು ಚುನಾವಣೆಯಲ್ಲಿ ನಷ್ಟ ಮಾಡಬಹುದು ಎಂದು ಮನಗಂಡಿರುವ ಇಂಡಿಯಾ ಕೂಟದ ನಾಯಕರು ಹೊಸ ದಾಳ ಹೂಡಿದ್ದು, ಇದು ಮಹಾಘಟಬಂಧನ್‌ನ ಎಲ್ಲ ಮಿತ್ರಪಕ್ಷಗಳ ಒಪ್ಪಿಗೆ ಪಡೆದೆ ಈ ಘೋಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿತೀಶ್ ಕುಮಾರ್ ಏಟು…

ಚುನಾವಣೆಗಳು ಸಮೀಪಿಸಿದಾಗ ಕೆಲವರು ತಮ್ಮನ್ನು ಮುಸ್ಲಿಂ ಸಮುದಾಯದ ಹಿತೈಷಿಗಳೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಶುದ್ಧ ವಂಚನೆ. ಅವರು ಮುಸ್ಲಿಮರನ್ನು ತಮ್ಮ ಮತಬ್ಯಾಂಕ್ ಎಂದು ಮಾತ್ರ ಪರಿಗಣಿಸುತ್ತಾರೆ, ಎನ್‌ಡಿಎ ಸರ್ಕಾರದಿಂದ ಅಲ್ಪಸಂಖ್ಯಾತ ಸಮುದಾಯದ ಜನರು ಎಲ್ಲಾ ಕ್ಷೇತ್ರಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯವನ್ನು ಪಡೆಯುತ್ತಿದ್ದಾರೆ. ಹಿಂದಿನ ಸರ್ಕಾರಗಳು ಮುಸ್ಲಿಂ ಸಮುದಾಯವನ್ನು ಕೇವಲ ಮತಗಳಿಗಾಗಿ ಬಳಸಿಕೊಂಡವು, ಅಧಿಕಾರದಲ್ಲಿದ್ದಾಗ ಅವರಿಗಾಗಿ ಏನು ಮಾಡಲಿಲ್ಲ ಎಂದು ನಿತೀಶ್ ಕುಮಾರ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು.

ಚುನಾವಣೆ ಯಾವಾಗ..?

ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬ‌ರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್‌ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.

[t4b-ticker]
error: Content is protected !!