ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಲಿ: ಡಿ.ಕೆ.ಶಿವಕುಮಾ‌ರ್

Picture of Savistara

Savistara

Bureau Report

ನವದೆಹಲಿ: ‘ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್‌ಮೇಲ್ ಮಾಡುವವನಲ್ಲ. ನಾನು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಇಲ್ಲಿ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನನ್ನ ಮಾನಸಿಕ, ದೈಹಿಕ ಹಾಗೂ ರಾಜಕೀಯ ಆರೋಗ್ಯ ಸರಿಯಾಗಿದೆ. ನಾನು ಖರ್ಗೆ ಸಾಹೇಬರನ್ನು ಭೇಟಿ ಮಾಡಿದ್ದೇನೆ. ಡಿಸೆಂಬರ್ ತಿಂಗಳ ಒಳಗಾಗಿ ನೂರು ಕಾಂಗ್ರೆಸ್‌ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲೇಬೇಕಾಗಿದೆ. ‘ಗಾಂಧಿ ಭಾರತ’ ಎಂಬ ಪುಸ್ತಕ ರಚಿಸಿದ್ದೇನೆ. ಇದರ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕಾಗಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್‌ ಸಂಸ್ಥಾಪನಾ ದಿನ ಆಚರಣೆ ಮಾಡಬೇಕು. ಇವೆಲ್ಲವನ್ನು ಯಾರು ಮಾಡಬೇಕು? ನಾನೇ ಮಾಡಬೇಕು. ನಾನೇಕೆ ರಾಜೀನಾಮೆ ನೀಡಲಿ. ಈಗ ಅಂತಹ ಸಂದರ್ಭವಿಲ್ಲ’ ಎಂದು ಸ್ಪಷ್ಟಪಡಿಸಿದರು.’ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೂ ಈ ಸ್ಥಾನದಲ್ಲಿ ಕೆಲಸ ಮಾಡಲು ಹೇಳುತ್ತಾರೋ ಅಲ್ಲಿಯವರೆಗೆ ನಾನು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಮುಂದೆಯೂ ಪಕ್ಷ ಅಧಿಕಾರಕ್ಕೆ ಬರುವಂತೆ ದುಡಿಯುವವನು ನಾನು’ ಎಂದು ಅವರು ಪುನರುಚ್ಚರಿಸಿದರು.ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆಯಾಗುತ್ತಿದೆ. ಖರ್ಗೆ ಅವರ ಭೇಟಿ ವೇಳೆ ಈ ಬಗ್ಗೆ ಚರ್ಚೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅದೆಲ್ಲಾ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತಾರೆ. ನನ್ನನ್ನು ಕರೆದರೆ ನಾನು ಹೋಗುತ್ತೇನೆ. ನನ್ನ ಅಭಿಪ್ರಾಯ ತಿಳಿಸುತ್ತೇನೆ’ ಎಂದರು.

‘ನಾನು ಕೇವಲ ಪಕ್ಷದ ಕಚೇರಿಗಳ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಲು ಹೋಗಿರುವೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಟ್ಟಾಗಿ ಶಂಕುಸ್ಥಾಪನೆ ಮಾಡಬೇಕು ಎಂಬುದು ನನ್ನ ಆಸೆ. ಡಿ. 1 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ, ಯಾವುದಾದರೂ ವಾರಾಂತ್ಯದಲ್ಲಿ ಬಂದು ಹೋಗಿ ಎಂದು ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.’ಕಾಂಗ್ರೆಸ್ ಕಚೇರಿ ನಿರ್ಮಾಣದ ಕಟ್ಟಡ ನಕ್ಷೆ ಅನುಮೋದನೆಗೆ ನಾನು ₹2.30 ಕೋಟಿ ಪಾವತಿಸುತ್ತಿದ್ದೇನೆ. ಸಚಿವ ರಾಮಲಿಂಗಾರೆಡ್ಡಿ ಮುಂದಾಳತ್ವದಲ್ಲಿ ಒಂದು ಕಚೇರಿ ನಿರ್ಮಿಸಲಾಗುತ್ತಿದೆ. 75-80 ಕಡೆ ಕಚೇರಿ ನಿರ್ಮಾಣಕ್ಕೆ ಜಾಗ ಕೂಡ ಸಿದ್ಧವಾಗಿವೆ. ನೂರು ಕಚೇರಿ ನಿರ್ಮಾಣ ಕಾರ್ಯ ಮಾಡುತ್ತೇವೆ’ ಎಂದು ತಿಳಿಸಿದರು.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!